ಗುಂಡ್ಲುಪೇಟೆ: ಫಾಸ್ಟ್‌ಟ್ಯಾಗ್ ನಿಯಮ ಜಾರಿಗೆ ಬಂದ ನಂತರ ಸ್ಥಳೀಯರನ್ನೂ ಮಾಸಿಕ ಪಾಸ್ ಮಾಡಿಸಿಕೊಳ್ಳುವಂತೆ ಒತ್ತಾಯಿಸುತ್ತಿರುವ ಟೋಲ್ ಸಿಬ್ಬಂದಿ ವಿರುದ್ಧ ತಾಲೂಕಿನ ಭೀಮನಬೀಡು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಭೀಮನಬೀಡು ಗ್ರಾಪಂ ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟಿಸಿದ ಗ್ರಾಮಸ್ಥರು, ಭೀಮನಬೀಡು -ಕಣ್ಣೇಗಾಲ ರಸ್ತೆಯಲ್ಲಿ ಟೋಲ್ ನಿರ್ಮಾಣ ಮಾಡಿರುವುದೇ ಅವೈಜ್ಞಾನಿಕ. ಸ್ಥಳೀಯರಿಗೆ ಟೋಲ್‌ನಲ್ಲಿ ವಿನಾಯಿತಿ ಇದ್ದರೂ ಸಹ ಟ್ರ್ಯಾಕ್ಟರ್, ಆಟೋ, ಕಾರುಗಳಿಗೆ ಮಾಸಿಕ 270 ರೂ. ಪಾವತಿಸಿ ಪಾಸ್ ಪಡೆಯುವಂತೆ ಟೋಲ್ ಸಿಬ್ಬಂದಿ ಒತ್ತಾಯಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಹೆಸರಿನಲ್ಲಿ ಜನರಿಗೆ ಮತ್ತು ಸ್ಥಳೀಯರಿಗೆ ಕಿರುಕುಳ ನೀಡುತ್ತಿದೆ. ಹೆದ್ದಾರಿಯಲ್ಲಿ ಯಾವುದೇ ಅಪಘಾತಗಳಾದರೂ ಸ್ಥಳೀಯರೇ ನೆರವಾಗುತ್ತಿದ್ದರೂ ಟೋಲ್‌ನವರು ಮುಂದೆ ಬರುತ್ತಿಲ್ಲ. ಟೋಲ್ ಸುತ್ತಮುತ್ತಲೂ ನಮ್ಮ ಜಮೀನಿದ್ದು, ಪ್ರತಿ ದಿನವೂ ನಾಲ್ಕಾರು ಬಾರಿ ಇದೇ ರಸ್ತೆಯಲ್ಲಿ ಹೋಗಿ ಬರಬೇಕಾಗಿದೆ. ಆದ್ದರಿಂದ ಸ್ಥಳೀಯ ನೋಂದಣಿ ವಾಹನಗಳಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಟೋಲ್‌ಗೇಟ್ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಮಹದೇವಸ್ವಾಮಿ, ಸಬ್‌ಇನ್ಸ್‌ಪೆಕ್ಟರ್ ರಾಜೇಂದ್ರ, ಈ ಬಗ್ಗೆ ಟೋಲ್ ಅಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಟೋಲ್ ನಿವಾಹಕ ಶಾಂತಪ್ಪ, ಕನ್ನಡ ಸಂಘಟನೆಯ ಅಧ್ಯಕ್ಷ ರಂಗಪ್ಪ, ಆಟೋ ಚಾಲಕ ಹಾಗೂ ಮಾಲೀಕರ ಸಂಘಟನೆಯವರು, ಭೀಮನಬೀಡು ಗ್ರಾಮದ ಮುಖಂಡ ಮಂಜು ಇತರರಿದ್ದರು.