Advertisement

ಟೋಲ್‌: ಸ್ಥಳೀಯರಿಗೂ ವಿನಾಯಿತಿ ಇಲ್ಲ

01:00 AM Feb 01, 2019 | Harsha Rao |

ಪಡುಬಿದ್ರಿ: ಟೋಲ್‌ಗೇಟ್‌ ಪರಿಸರದ ವಾಹನಗಳಿಗೆ ಯಾವುದೇ ಕಾರಣಕ್ಕೂ ವಿನಾಯಿತಿ ಇಲ್ಲ. ಬೇಕಿದ್ದರೆ ಮಾಸಿಕ 255 ರೂ. ಪಾಸ್‌ ಪಡೆದು ಪ್ರಯಾಣಿಸಬಹುದು ಎಂದು ನವಯುಗ ಅಧಿಕಾರಿ ಶಂಕರ್‌ ರಾವ್‌ ತಿಳಿಸಿದ್ದಾರೆ.

Advertisement

ಹೆಜಮಾಡಿ ಟೋಲ್‌ಪ್ಲಾಝಾದಲ್ಲಿ ಸುಂಕ ವಿನಾಯಿತಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಪಡುಬಿದ್ರಿ ನಾಗರಿಕ ಸಮಿತಿ ಕಾರ್ಯಕರ್ತರು 24 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಗುರುವಾರ ಆಗಮಿಸಿದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಎದುರಲ್ಲೇ ನವಯುಗ ಅಧಿಕಾರಿ ಶಂಕರ್‌ ರಾವ್‌ ಪಡುಬಿದ್ರಿ ಜನತೆಗೆ ಸುಂಕ ವಿನಾಯಿತಿ ನೀಡಲಾಗದು. ಸಾಸ್ತಾನದಲ್ಲೂ ವಿನಾಯಿತಿ ರದ್ದುಗೊಳಿಸುತ್ತೇವೆ ಎಂದರು.  

ಇದರಿಂದ ಅಸಮಾಧಾನಗೊಂಡ ಪ್ರತಿಭಟನಕಾರರು ಹೆಜಮಾಡಿ ಒಳರಸ್ತೆಯಲ್ಲಿ ನಿರ್ಮಿಸಿರುವ ಟೋಲ್‌ಗೇಟ್‌ ಅನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಗಳನ್ನು ಆಗ್ರಹಿಸಿದರು. ಆದರೆ ಕಾನೂನಿನಲ್ಲಿ ಅವಕಾಶ ಇಲ್ಲದ್ದರಿಂದ ಜಿಲ್ಲಾಡಳಿತ ಆದೇಶ ನೀಡಲಾಗದು. ನವಯುಗ ಕಂಪೆನಿ ಕಪ್ಪುಪಟ್ಟಿಗೆ ಸೇರಿಸಲು ಸರಕಾರಕ್ಕೆ ವರದಿ ರವಾನಿಸಿದ್ದೇನೆ ಎಂದರು.

ಸರಕಾರ ಮತ್ತು ನವಯುಗ ಅಧಿಕಾರಿಗಳೊಂದಿಗೆ ಮತ್ತೂಮ್ಮೆ ಚರ್ಚಿಸಿ ಮೂರು ದಿನದೊಳಗೆ ಯಾವುದಾದರೂ ನಿರ್ಧಾರಕ್ಕೆ ಬರೋಣ ಎಂದು ಭರವಸೆ ನೀಡಿದರು. ಪ್ರತಿಭಟನಕಾರರು ಮುಷ್ಕರ ಮುಂದುವರಿಸುವುದಾಗಿಯೂ ತಿಳಿಸಿದರು. ಜತೆಗೆ 15 ದಿನಗಳಲ್ಲಿ ಸರ್ವಿಸ್‌ ರಸ್ತೆ ಕಾಮಗಾರಿ ಪೂರ್ಣ ಗೊಳಿಸುವಂತೆ ನವಯುಗ ಯೋಜನಾ ಧಿಕಾರಿಗೆ ಆದೇಶಿಸಿದ್ದಾರೆ. 

ಅಧಿಕಾರಿ ಹೇಳಿಕೆಯಿಂದ ಆತಂಕ
ಕೋಟ: ಸಾಸ್ತಾನ ಟೋಲ್‌ನಲ್ಲೂ ವಿನಾಯಿತಿ ನೀಡುವುದಿಲ್ಲ ಎಂದು ನವಯುಗ ಅಧಿಕಾರಿ ಹೇಳಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

Advertisement

ಈ ಹಿಂದೆ ಸಾಸ್ತಾನದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆದ ಹಿನ್ನೆಲೆಯಲ್ಲಿ ಮಾತುಕತೆ ನಡೆಸಿ ಜಿ.ಪಂ. ಕೋಟ ಕ್ಷೇತ್ರ ವ್ಯಾಪ್ತಿಯವರಿಗೆ ವಿನಾಯಿತಿ ನೀಡಲಾಗಿತ್ತು. ಅದೇ ರೀತಿ ಪಡುಬಿದ್ರಿಯಲ್ಲೂ ಬೇಡಿಕೆ ವ್ಯಕ್ತವಾದ್ದರಿಂದ ಸಾಸ್ತಾನದಲ್ಲಿ ವಿನಾಯಿತಿ ರದ್ದು ಮಾಡುವುದಾಗಿ ಅಧಿಕಾರಿ ಹೇಳಿಕೆ ನೀಡಿದ್ದಾರೆ. ಆದರೆ ಇಂತಹ ಕ್ರಮಕ್ಕೆ ಮುಂದಾದರೆ ಸಹಿಸುವುದಿಲ್ಲ. ಈ ವರೆಗೆ ತಾಳ್ಮೆಯಿಂದ ಹೋರಾಟ ನಡೆಸಿದ್ದೇವೆ. ಇನ್ನು ಮುಂದೆ ಉಗ್ರ ಸ್ವರೂಪದ ಹೋರಾಟ ನಡೆಸುತ್ತೇವೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next