ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಟೋಲ್ ಕೇಂದ್ರಗಳಲ್ಲಿ ಸ್ಥಳೀಯ ವಾಹನಗಳಿಗೆ ಸುಂಕ ತೆಗೆದುಕೊಳ್ಳುವ ವಿಚಾರ ದಲ್ಲಿ ಸೆ. 30ರ ವರೆಗೆ ಯಥಾಸ್ಥಿತಿ ಕಾಪಾಡಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ, ಕುಂದಾಪುರ ಉಪವಿಭಾಗಾ ಧಿಕಾರಿ ಭೂಬಾಲನ್, ವಿ.ಪ. ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ. ರಘುಪತಿ ಭಟ್ ಉಪಸ್ಥಿತರಿದ್ದರು.
ರಾ. ಹೆದ್ದಾರಿಯ ಕಾಮಗಾರಿ ಸಂಪೂರ್ಣ ವಾಗದೆ ಟೋಲ್ ತೆಗೆದುಕೊಳ್ಳುವ ವಿಚಾರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಹೋರಾಟ ಸಮಿತಿ ಸದಸ್ಯರು, ಸಾರ್ವಜನಿಕರು ಮತ್ತು ಜನಪ್ರತಿ ನಿಧಿಗಳು ತಮ್ಮ ವಿಚಾರವನ್ನು ಮಂಡಿಸಿದರು. ನವಯುಗ ಕಂಪೆನಿ ಹಿರಿಯ ಅಧಿಕಾರಿಗಳು ಮತ್ತು ಎನ್‌ಎಚ್‌ಎಐನ ಪ್ರಾಜೆಕ್ಟ್ ಡೈರೆಕ್ಟರ್ ಈ ಸಭೆಗೆ ಗೈರಾದ ಹಿನ್ನೆಲೆ ಯಾವುದೇ ನಿರ್ಧಾರವನ್ನು ಆರಂಭದಲ್ಲಿ ಕೈಗೊಳ್ಳಲು ಸಾಧ್ಯವಾಗಲಿಲ್ಲ.
ಬಳಿಕ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲೆಯ ಜನಪ್ರತಿ ನಿಧಿಗಳು, ನವಯುಗ ಸಂಸ್ಥೆಯ ಸ್ಥಳೀಯ ಅಧಿಕಾರಿಗಳೊಂದಿಗೆ ಗುಪ್ತ ಸಭೆ ನಡೆಸಿದರು. ನವಯುಗ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿದರು. ಸಭೆ ಬಳಿಕ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು, ರಾ.ಹೆ. ನಿರ್ಮಾಣದ ಸಂದರ್ಭ ಆರಂಭದಲ್ಲಿ ಸರಿಯಾದ ರೂಪುರೇಷೆ ನೀಡಿರಲಿಲ್ಲ. ಬಳಿಕ ಎರಡನೇ ಸಲ ಟೋಲ್ ಸಂಗ್ರಹಕ್ಕೆ ಶೇ. 75 ಕಾಮಗಾರಿ ಪೂರ್ಣಗೊಳಿಸುವಂತೆ ಸುತ್ತೋಲೆ ಜಾರಿಗೊಳಿಸುತ್ತಿದೆ. ಈಗ ಕಂಪೆನಿ ನಷ್ಟದಲ್ಲಿದೆ, ಬಡ್ಡಿ ಕಟ್ಟಬೇಕು ಮೊದಲಾದ ಸಮಸ್ಯೆಗಳನ್ನು ಹೇಳುತ್ತಿದ್ದಾರೆ. ಅದಕ್ಕೆ ನಾವು ಇಲ್ಲಿ ಹೋರಾಟ ಸಮಿತಿ ಇದೆ, ಅವರೊಂದಿಗೆ ಚರ್ಚೆ ನಡೆಸಬೇಕು. ಅದಕ್ಕಾಗಿ ಸೆ. 30ರ ತನಕ ಯಥಾಸ್ಥಿತಿ ಕಾಪಾಡು ವಂತೆ ಹೇಳಿದ್ದೇವೆ ಎಂದರು. ಹೋರಾಟ ಸಮಿತಿಯ ಪ್ರತಾಪ್ ಶೆಟ್ಟಿ, ಆಲ್ವಿನ್ ಅಂದ್ರಾದೆ, ಪ್ರಶಾಂತ್ ಶೆಟ್ಟಿ, ವಕೀಲರಾದ ಶ್ಯಾಂಸುಂದರ್ ನಾೖರಿ, ಕಾಪು ದಿವಾಕರ ಶೆಟ್ಟಿ, ಶೇಖರ್ ಹೆಜಮಾಡಿ, ಸಿದ್ದಿಕ್ ತಲಪಾಡಿ, ಸಾರ್ವಜನಿಕರು ಭಾಗವಹಿಸಿದ್ದರು.