Advertisement

ಹೆಜಮಾಡಿ ಟೋಲ್‌ ಸೋರಿಕೆ ತಡೆಗೆ ಒಳರಸ್ತೆಗೂ ಟೋಲ್‌ ಗೇಟ್‌

06:00 AM May 25, 2018 | Team Udayavani |

ಪಡುಬಿದ್ರಿ: ಭಾರತದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಹೆಜಮಾಡಿ ಟೋಲ್‌ ಪ್ಲಾಜಾದಲ್ಲಿನ ತೆರಿಗೆ ಸೋರಿಕೆಯನ್ನು ತಡೆಯುವಲ್ಲಿ ಹೆಜಮಾಡಿಯ ಒಳ ರಸ್ತೆ (ಹಳೇ ಎಂಬಿಸಿ ರಸ್ತೆ)ಗೆ ಎದುರಾಗಿ ಹೊಸ ಟೋಲ್‌ ಗೇಟ್‌ ನಿರ್ಮಿಸಿಕೊಳ್ಳಲು ತನ್ನ ಎ. 3ರಂದು ನವದೆಹಲಿಯಲ್ಲಿ ನಡೆದಿದ್ದ ಕಾರ್ಯಕಾರಿಣಿ ಸಭೆಯಲ್ಲಿ ಅನುಮೋದನೆಯನ್ನು ನೀಡಿದೆ. 

Advertisement

ಈ ಸಂಬಂಧವಾಗಿ ಮೇ 23ರಂದೇ ಕಾಮಗಾರಿಯನ್ನು ನವಯುಗ ನಿರ್ಮಾಣ ಕಂಪೆನಿ ಆರಂಭಿಸಿತ್ತು. ಇಂದು ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್‌ ಮತ್ತು ಉಪಾಧ್ಯಕ್ಷ ಸುಧಾಕರ ಕರ್ಕೇರ, ತಾ. ಪಂ. ಸದಸ್ಯೆ ರೇಣುಕಾ ಪುತ್ರನ್‌, ನಡಿಕುದ್ರು ವಾಮನ್‌ ಕೋಟ್ಯಾನ್‌, ಪ್ರಾಣೇಶ್‌ ಹೆಜಮಾಡಿ, ಮಾಜಿ ತಾ.ಪಂ. ಸದಸ್ಯ ಸಚಿನ್‌ ನಾಯಕ್‌, ಪಾಂಡುರಂಗ ಕರ್ಕೇರ, ಕುಮಾರ ಕಾಂಚನ್‌ ಮತ್ತಿತರರು ಸ್ಥಳಕ್ಕಾಗಮಿಸಿ ಕಾರ್ಮಿಕರು ಹಾಗೂ ಇತರರೊಡನೆ ಕಾಮಗಾರಿ ನಿಲ್ಲಿಸಲು ಆಗ್ರಹಿಸುತ್ತಿದ್ದಂತೆಯೇ ಪಡುಬಿದ್ರಿ ಠಾಣಾಧಿಕಾರಿ ಸತೀಶ್‌ ಸ್ಥಳಕ್ಕಾಗಮಿಸಿದರು. ಅವರಲ್ಲೂ  ಪಂ. ಅಧ್ಯಕ್ಷ, ಉಪಾಧ್ಯಕ್ಷರು ವಾಗ್ವಾದ ನಡೆಸಿದ ಬಳಿಕ ಪರಿಸ್ಥಿತಿ ತಿಳಿಯಾಯಿತು. 

ಗ್ರಾಮಸ್ಥರ ಬೇಡಿಕೆಗಳನ್ನು 
ಈಡೇರಿಸುವಂತೆ ಆಗ್ರಹ

ಹೆಜಮಾಡಿ ಗ್ರಾ. ಪಂ.ನಲ್ಲಿ  2017ನೇ ಅ. 23ರಂದು ನವಯುಗ ನಿರ್ಮಾಣ ಕಂಪೆನಿ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಚತುಃಷ್ಪಥ ಕಾಮಗಾರಿ ಯೋಜನಾ ನಿರ್ದೇಶಕ ವಿಜಯ್‌ ಸಾಮ್ಸನ್‌ ಸೇರಿದಂತೆ ಇತರ ಅಧಿಕಾರಿಗಳಿದ್ದ ವಿಶೇಷ ಸಭೆಯೊಂದು ನಡೆದಿತ್ತು. ಗ್ರಾಮಸ್ಥರು ತಮ್ಮ ವಿವಿಧ ಬೇಡಿಕೆಗಳ ಅಹವಾಲನ್ನು ಮಂಡಿಸಿ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರೂ ಇವುಗಳನ್ನು ಒಪ್ಪಿದ್ದರು. ಮುಂದೆ ಜಿಲ್ಲಾಧಿಕಾರಿಗಳ ಸಮಕ್ಷಮವೂ ಒಪ್ಪಿಕೊಳ್ಳಲಾದ ಈ ವಿವಿಧ ಮನವಿಗಳನ್ನು ಮೊದಲಿಗೆ ನವಯುಗ ನಿರ್ಮಾಣ ಕಂಪೆನಿಯು ಪುರಸ್ಕರಿಸುವುದಾಗಿ ಹೇಳಿತ್ತು. ಆದರೆ ಮಾತಿಗೆ ತಪ್ಪಿದ ನವಯುಗ ಕಂಪೆನಿ ಅವುಗಳನ್ನು ಗ್ರಾಮಸ್ಥರ ಅನುಕೂಲಕ್ಕಾಗಿ ಕೂಡಲೇ ಅನುಷ್ಠಾನಿಸಬೇಕು. ಬಳಿಕ ಟೋಲ್‌ ಗೇಟ್‌ ಕಾಮಗಾರಿ ಕೈಗೊಳ್ಳಲಿ ಎಂದು ಇಂದು ಪಂಚಾಯತ್‌ ಸದಸ್ಯರು ಆಗ್ರಹಿಸಿದರು. ಆದರೆ ಪಡುಬಿದ್ರಿ ಪೊಲೀಸ್‌ ಠಾಣಾಧಿಕಾರಿ ಸತೀಶ್‌ ಹೆದ್ದಾರಿ ಟೋಲ್‌ಗೇಟ್‌ ಕಾಮಗಾರಿಯನ್ನು ನಿಲ್ಲಿಸಲಾಗದು. ಜಿಲ್ಲಾಧಿಕಾರಿ ಬಳಿಗೆ ತೆರಳಿ ಮತ್ತೆ ಸಭೆ ನಡೆಸಿ ಮಿಕ್ಕುಳಿದುದನ್ನು ತೀರ್ಮಾನಿಸಿ ಎಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು. 

ನವಯುಗ ಕಂಪೆನಿಗೆ ಗ್ರಾಮಸ್ಥರ ಮನವಿ ಕೇಳಿಸುತ್ತಲೇ ಇಲ್ಲ
ಹೆಜಮಾಡಿ ಒಳ ರಸ್ತೆಯಿಂದ ಸಾಗುವ ವಾಹನಗಳಿಂದಾಗಿ ದಿನವೊಂದಕ್ಕೆ ಕನಿಷ್ಟ 3.5ಲಕ್ಷ ರೂ. ಗಳ ಟೋಲ್‌ ನಷ್ಟವಾಗುತ್ತಿರುವುದಾಗಿ ನವಯುಗ ನಿರ್ಮಾಣ ಕಂಪೆನಿಯ ವಾದವಾಗಿದೆ. ಆದರೆ ಹೆಜಮಾಡಿ ಟೋಲ್‌ ಸಮೀಪವೇ ಗ್ರಾಮಸ್ಥರ ಅನುಕೂಲಕ್ಕಾಗಿ ಸ್ಕೈ ವಾಕ್‌(ಮೇಲ್ಸೇತುವೆ) ನಿರ್ಮಾಣ, ಬೋರುಗುಡ್ಡೆ ಪ್ರದೇಶಗಳಿಗೆ ನೀರು ಸರಬರಾಜಾಗುತ್ತಿದ್ದ ಪೈಪ್‌ಲೈನ್‌ ಪುನರ್‌ ನಿರ್ಮಾಣ, ಹೆಜಮಾಡಿ ಬಳಿ ಅವಶ್ಯವಾಗಿ ಸರ್ವೀಸ್‌ ರಸ್ತೆಗಳ ನಿರ್ಮಾಣವೇ ಮೊದಲಾದ ತುರ್ತು ಕಾಮಗಾರಿಗಳನ್ನು ನವಯುಗ ನಿರ್ಮಾಣ ಕಂಪೆನಿ ವರ್ಷಗಳಿಂದ ನಿರ್ವಹಿಸುವುದಾಗಿ ಹೇಳುತ್ತಿದ್ದರೂ ಕೈಗೂಡಿಸಲೇ ಇಲ್ಲ. ಗ್ರಾಮಸ್ಥರು ಇವೆಲ್ಲವುಗಳಿಂದ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದರು. 

ಗ್ರಾಮಸ್ಥರ ಬೇಡಿಕೆಗಳೂ ಈಡೇರಲಿ
ಹಿಂದೊಮ್ಮೆ ಹೆಜಮಾಡಿ ಒಳ ರಸ್ತೆಯ ಲೋಕೋಪಯೋಗಿ ಇಲಾಖಾ ಭಾಗದಲ್ಲೇ ಟೋಲ್‌ ನಿರ್ಮಾಣಕ್ಕೆ ಆರಂಭಿಸಿ ಕೈಸುಟ್ಟುಕೊಂಡಿದ್ದ ನವಯುಗ ನಿರ್ಮಾಣ ಕಂಪೆನಿಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವೇ ನೀಡಿರುವ ಆದೇಶದನ್ವಯ ಟೋಲ್‌ ಲೀಕೇಜ್‌ ತಡೆಗಟ್ಟಲು ಒಳ ರಸ್ತೆಗೂ ಇದೀಗ ಟೋಲ್‌ಗೇಟ್‌ ನಿರ್ಮಾಣವಾಗಲಿದೆ. ಆದರೆ ಸಕಾಲಿಕವಾಗಿಯೇ ಗ್ರಾಮಸ್ಥರ ಬೇಡಿಕೆಗಳೂ ಈಡೇರುವಂತಾಗಬೇಕು ಎಂಬುದು ನಮ್ಮ ಬೇಡಿಕೆ ಎಂದು ಹೆಜಮಾಡಿ ಗ್ರಾ. ಪಂ. ಉಪಾಧ್ಯಕ್ಷ ಸುಧಾಕರ ಕರ್ಕೇರ ಆಗ್ರಹಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next