Advertisement

ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ ಬೆಳ್ಮಣ್‌ನಲ್ಲಿ ಮತ್ತೆ ಟೋಲ್‌ ಗುಮ್ಮ!

01:01 AM Apr 01, 2022 | Team Udayavani |

ಬೆಳ್ಮಣ್‌: ಕಳೆದ ಎರಡು ವರ್ಷಗಳ ಹಿಂದೆ ಭಾರೀ ಸಂಚಲನ ಮೂಡಿಸಿ ಬಳಿಕ ತಣ್ಣಗಾಗಿದ್ದ ಬೆಳ್ಮಣ್‌ನಲ್ಲಿ ಟೋಲ್‌ ಗೇಟ್‌ ಸ್ಥಾಪನೆ ವಿಚಾರ ಮತ್ತೆ ಜೀವ ಪಡೆದಿದೆ.

Advertisement

ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ 1ರ ಬೆಳ್ಮಣ್‌ ಪೇಟೆಯಲ್ಲಿ ಟೋಲ್‌ಗೇಟ್‌ ನಿರ್ಮಾಣ ಪ್ರಸ್ತಾವವಾದಾಗ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಮತ್ತೆ ಸದ್ದು ಮಾಡುತ್ತಿದ್ದು ಸ್ಥಳೀಯರು ಮತ್ತೆ ಹೋರಾಟದ ದಾರಿ ಹಿಡಿಯುವಂತೆ ಮಾಡಿದೆ.

ಕಾರ್ಕಳ-ಪಡುಬಿದ್ರಿ ಹೆದ್ದಾರಿ ಸಹಿತ 10 ರಾಜ್ಯ ಹೆದ್ದಾರಿಗಳಲ್ಲಿ ಶೀಘ್ರದಲ್ಲೇ ಟೋಲ್‌ ಸಂಗ್ರಹ ಪ್ರಾರಂಭವಾಗಲಿದ್ದು ಸುಂಕ ಸಂಗ್ರಹಕ್ಕೆ ಖಾಸಗಿ ಕಂಪೆನಿಗಳು ಸಲ್ಲಿಸಿರುವ ಬಿಡ್‌ಗಳ ಪರಿಶೀಲನೆ ನಡೆಯುತ್ತಿದೆ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ.

ಪಡುಬಿದ್ರಿ-ಕಾರ್ಕಳ, ಗುಬ್ಬಿ-ಚಂದ್ರಶೇಖರಪುರ, ಯಡಿಯೂರು- ಕೌಂಡ್ಲಿ-ಮಂಡ್ಯ, ಹಾನಗಲ್‌ – ತಡಸ ರಸ್ತೆ, ಶಿವಮೊಗ್ಗ – ಶಿಕಾರಿಪುರ-ಹಾನಗಲ್‌, ತಿಂತಣಿ- ದೇವದುರ್ಗಾ-ಕಲ್ಮಲ, ಸವದತ್ತಿ ಬಾದಾಮಿ-ಕಮಟಗಿ, ಬಳ್ಳಾರಿ- ಮೊಕ, ದಾವಣಗೆರೆ – ಬೀರೂರು ಮತ್ತು ಕೂಡ್ಲಿಗಿ- ಸಂಡೂರು-ತೋರಣಗಲ್‌ ಮಾರ್ಗಗಳಲ್ಲಿ ಮುಂದಿನ ಒಂದು ತಿಂಗಳ ಒಳಗಾಗಿ ಟೋಲ್‌ ಸಂಗ್ರಹ ಆರಂಭವಾಗಲಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

ಲೋಕೋಪಯೊಯೋಗಿ ಇಲಾಖೆಯ ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆ (ಕೆಶಿಪ್‌) ರಾಜ್ಯಾದ್ಯಂತ 31 ರಾಜ್ಯ ಹೆದ್ದಾರಿಗಳನ್ನು ನಿರ್ಮಿಸುತ್ತಿದೆ. ಈ ಪೈಕಿ ನಾಲ್ಕು ಸರಕಾರಿ ಖಾಸಗಿ ಪಾಲುದಾರಿಕೆಯದಾಗಿದ್ದು ಇಲ್ಲಿ ಈಗಾಗಲೇ ಟೋಲ್‌ ಸಂಗ್ರಹ ನಡೆಯುತ್ತಿದೆ.

Advertisement

ಸತತ 4 ಬಾರಿ ಸರ್ವೇಗೆ ಅಡ್ಡಿ :

ಮೊದಲಿಗೆ ವಾಹನ ಸವಾರರಿಂದ ಸುಂಕ ವಸೂಲು ಮಾಡುತ್ತೇವೆ ಎಂದು ಗುತ್ತಿಗೆ ಪಡೆದುಕೊಂಡ ಮೈಸೂರಿನ ಮಿತ್ರಾ ಇನ್ಫೋ ಸೊಲ್ಯೂಷನ್‌ ಸಂಸ್ಥೆ ಹಿಂದೆ ಸರಿದ ಬಳಿಕ ಕುಂದಾಪುರ ಮೂಲದ ಎಜೆನ್ಸಿಯೊಂದು ಸರ್ವೇಗೆ ಮುಂದಾಗಿತ್ತು. ಬೆಳ್ಮಣ್‌ನ ಹೊಟೇಲೊಂದರಲ್ಲಿ ಕುಳಿತು ಸರ್ವೇ ಕಾರ್ಯವನ್ನು ಇನ್ನೊಂದು ಸಂಸ್ಥೆ ನಡೆಸಿತ್ತು. ಬಳಿಕ ನಾಲ್ಕನೇ ಸಂಸ್ಥೆಯು ಗುಟ್ಟಾಗಿ ಬೆಳ್ಮಣ್‌ ಭಾಗವನ್ನು ಬಿಟ್ಟು ಪಡುಬಿದ್ರಿ ಸಮೀಪದ ಕಂಚಿನಡ್ಕದಲ್ಲಿ ಕುಳಿತು ಸರ್ವೇಗೆ ಮುಂದಾಗಿದ್ದರೂ ಆ ಭಾಗದಲ್ಲಿಯೂ ಜನ ವಿರೋಧ ವ್ಯಕ್ತಪಡಿಸಿ ಪ್ರಕ್ರಿಯೆ ಮುಂದುವರಿಸಲು ಅವಕಾಶ ನೀಡಿರಲಿಲ್ಲ.

ಕೇಂದ್ರ ಸಚಿವರ ಹೇಳಿಕೆ: ಗೊಂದಲ :

ಹೆದ್ದಾರಿಗಳಲ್ಲಿ ಪ್ರತೀ 60 ಕಿ.ಮೀ.ಗೆ ಒಂದೇ ಟೋಲ್‌ ಸಂಗ್ರಹ ಕೇಂದ್ರ ಇರಲಿದೆ. ಹೆಚ್ಚುವರಿ ಟೋಲ್‌ ಬೂತ್‌ಗಳನ್ನು ಮೂರು ತಿಂಗಳಲ್ಲಿ ಮುಚ್ಚಲಾಗುವುದು ಎನ್ನುವ ಹೇಳಿಕೆಯನ್ನು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್‌ ಗಡ್ಕರಿ ನೀಡಿದ್ದರು. ಆದರೆ ಮುಂದೆ ಕಾರ್ಕಳ-ಪಡುಬಿದ್ರಿ ಹೆದ್ದಾರಿಯಲ್ಲಿ ಟೋಲ್‌ಗೇಟ್‌ ನಿರ್ಮಾಣವಾದರೆ ಕಾರ್ಕಳದಿಂದ ಮಂಗಳೂರು ಸಾಗಲು ಮೂರು ಕಡೆಗಳಲ್ಲಿ ಸುಂಕ ಪಾವತಿಸಬೇಕಾಗುತ್ತದೆ. ಕೇಂದ್ರ ಸಚಿವರ ಹೇಳಿಕೆಯ ಬೆನ್ನಲ್ಲೇ ಬೆಳ್ಮಣ್‌ ಟೋಲ್‌ಗೆ ಮರುಜೀವ ಬಂದಿದ್ದು ಜನ ಗೊಂದಲಕ್ಕೀಡಾಗಿದ್ದಾರೆ. ಇದೀಗ ಮತ್ತೆ ಎಲ್ಲಿ ಟೋಲ್‌ಗೇಟ್‌ ನಿರ್ಮಿಸುತ್ತಾರೆ ಎನ್ನುವುದಕ್ಕೆ ಉತ್ತರ ಸಿಕ್ಕಿಲ್ಲ.

ಉತ್ತಮ ರಸ್ತೆ ನೀಡುವುದು ನಮ್ಮ ಉದ್ದೇಶ ಹಾಗೂ ಗುರಿ. ಟೋಲ್‌ ನಿರ್ಮಾಣದಿಂದ ಯಾವುದೇ ಸಾಧನೆ ಸಾಧ್ಯವಿಲ್ಲ. ಅಂಥ ಯೋಚನೆ ಇಲ್ಲ. – ವಿ. ಸುನಿಲ್‌ ಕುಮಾರ್‌, ಸಚಿವ

ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಬೆಳ್ಮಣ್‌ ಅಥವಾ ಸುತ್ತಮುತ್ತ ಟೋಲ್‌ ನಿರ್ಮಾಣ ಈ ಜನ್ಮದಲ್ಲಿ ಅಸಾಧ್ಯ. ಅದಕ್ಕೆ ಅವಕಾಶ ನೀಡೆವು.– ನಂದಳಿಕೆ ಸುಹಾಸ್‌ ಹೆಗ್ಡೆ, ಹೋರಾಟ ಸಮಿತಿಯ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next