Advertisement

Toll Gate ಹೆಚ್ಚುವರಿ ದರ ಕಡಿತ: ಆ.23ರಂದು ಬಸ್‌ ಮಾಲಕರಿಂದ ಮೌನ ಪ್ರತಿಭಟನೆಗೆ ನಿರ್ಧಾರ

11:46 PM Aug 19, 2024 | Team Udayavani |

ಉಡುಪಿ: ಟೋಲ್‌ಗೇಟ್‌ಗಳಲ್ಲಿ ಅನಧಿಕೃತವಾಗಿ ಹೆಚ್ಚುವರಿ ಹಣ ಕಡಿತ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೆನರಾ ಬಸ್‌ ಮಾಲಕರ ಸಂಘದವರು ಆ.23ರಂದು ಬೆಳಗ್ಗೆ 9.30ರಿಂದ ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌ ಗೇಟ್‌ ಎದುರು ಮೌನ ಪ್ರತಿಭಟನೆ ನಡೆಸುವ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಅಪರ ಜಿಲ್ಲಾಧಿಕಾರಿ ಮಮತಾ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

Advertisement

ಬಸ್‌ಗಳಿಗೆ ಮಾಮೂಲು ಟೋಲ್‌ ದರವಷ್ಟೇ ಅಲ್ಲದೆ ಘನ ವಾಹನ ಎಂದು ಪರಿಗಣಿಸಿ ದುಪ್ಪಟ್ಟು ಹಣವನ್ನು ಕಡಿತ ಮಾಡಲಾಗುತ್ತಿದ್ದು, ಇದನ್ನು ನಿಲ್ಲಿಸುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಬಸ್‌ ಮಾಲಕರಾದ ರಾಘವೇಂದ್ರ ಭಟ್‌, ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌, ವಸಂತ್‌ ಶೆಟ್ಟಿ, ಇಮಿಯಾಜ್‌ ಅಹಮದ್‌, ಗಣನಾಥ ಹೆಗ್ಡೆ ನಿಯೋಗದಲ್ಲಿದ್ದರು.

ಈ ಬಗ್ಗೆ ಈಗಾಗಲೇ ಹೆದ್ದಾರಿ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಆ.22ರೊಳಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಎರಡೂ ಟೋಲ್‌ಗೇಟ್‌ಗಳಲ್ಲೂ ಬಸ್‌ಗಳನ್ನು ಇರಿಸಿ ಟೋಲ್‌ಗೇಟ್‌ ವ್ಯವಸ್ಥಾಪಕರ ವಿರುದ್ಧ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಕೆನರಾ ಬಸ್‌ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್‌ ನಾಯಕ್‌ ತಿಳಿಸಿದ್ದಾರೆ.

Advertisement

ರಾಷ್ಟ್ರೀಯ ಹೆದ್ದಾರಿ ಮಾನದಂಡದ ಪ್ರಕಾರ ಬಸ್‌ಗಳು ಘನ ವಾಹನದ ಅಡಿಯಲ್ಲಿ ಬರುತ್ತದೆ. ಈ ಕಾರಣಕ್ಕೆ ಹೆಚ್ಚುವರಿ ದರ ಕಡಿತ ಮಾಡಲಾಗುತ್ತಿದೆ. ಟೋಲ್‌ ಮಾನದಂಡದ ಅನುಸಾರವೇ ಕಡಿತ ಮಾಡಲಾಗುತ್ತಿದ್ದು, ಬಸ್‌ಗಳಿಗೂ ಲಘು ವಾಹನದಂತೆ ಹಣ ಕಡಿತ ಮಾಡಬೇಕೆಂಬ ಸೂಚನೆ ಹೆದ್ದಾರಿ ಇಲಾಖೆಯಿಂದ ಬಂದಲ್ಲಿ ಹೆಚ್ಚುವರಿ ಕಡಿತ ಮಾಡಲಾಗುವುದಿಲ್ಲ. ವಾರದ ಹಿಂದೆಯೇ ಈ ಬಗ್ಗೆ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಇನ್ನೆರಡು ದಿನಗಳೊಳಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. ಅದುವರೆಗೆ ಹೆಚ್ಚುವರಿ ದರ ಕಡಿತ ಮಾಡುವುದು ಅನಿವಾರ್ಯ ಎಂದು ಟೋಲ್‌ಗೇಟ್‌ ಆಪರೇಷನ್‌ ಮ್ಯಾನೇಜರ್‌ ಎ.ಎಸ್‌.ತಿಮ್ಮಯ್ಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next