ನವದೆಹಲಿ: ದೇಶಾದ್ಯಂತ ಇರುವ ಎಲ್ಲಾ ಟೋಲ್ ಬೂತ್ ಗಳನ್ನು ತೆಗೆದು ಜಿಪಿಎಸ್ ಆಧಾರಿತ ಟೋಲ್ ಸಂಗ್ರಹದ ವ್ಯವಸ್ಥೆಯನ್ನು ವರ್ಷದೊಳಗೆ ಜಾರಿಗೊಳಿಸುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ಗುರುವಾರ(ಮಾರ್ಚ್ 18) ತಿಳಿಸಿದ್ದಾರೆ.
ಇದನ್ನೂ ಓದಿ:ಐಟಿ ವಲಯದಲ್ಲಿ 2 ಲಕ್ಷ ಹೊಸ ಉದ್ಯೋಗ ಸೃಷ್ಟಿ : ರವಿ ಶಂಕರ್ ಪ್ರಸಾದ್
ಒಂದು ಬಾರಿ ಈ ನೂತನ ವ್ಯವಸ್ಥೆ ಕಾರ್ಯಾರಂಭಗೊಂಡಲ್ಲಿ ಸರತಿ ಸಾಲ್ ನಲ್ಲಿ ವಾಹನಗಳು ನಿಲ್ಲುವ ಪರಿಪಾಠಕ್ಕೆ ತೆರೆ ಬಿದ್ದಂತಾಗಲಿದೆ. ಟೋಲ್ ಪ್ಲಾಜಾಗಳಲ್ಲಿ ಕಾಯುವುದು ಇನ್ಮುಂದೆ ತಪ್ಪಲಿದೆ ಎಂದು ಗಡ್ಕರಿ ಹೇಳಿದರು.
“ ಒಂದು ವರ್ಷದೊಳಗೆ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಯಾಗಲಿದೆ ಎಂದು ನಾನು ಲೋಕಸಭೆಯ ಕಲಾಪದ ಮೂಲಕ ಭರವಸೆ ನೀಡುತ್ತಿದ್ದೇನೆ. ದೇಶದಲ್ಲಿರುವ ಎಲ್ಲಾ ಟೋಲ್ ಪ್ಲಾಜಾಗಳನ್ನು ತೆಗೆದು, ಜಿಪಿಎಸ್ ಆಧಾರಿತ ವ್ಯವಸ್ಥೆ ಜಾರಿಗೆ ತರಲಿದ್ದೇವೆ ಎಂದು ತಿಳಿಸಿದರು.
ಜಿಪಿಎಸ್ ಇಮೇಜಿಂಗ್ ವ್ಯವಸ್ಥೆ ಮೂಲಕ ಟೋಲ್ ಹಣವನ್ನು ಸಂಗ್ರಹಿಸಲಾಗುತ್ತದೆ. ಈ ನೂತನ ವ್ಯವಸ್ಥೆ ಒಂದು ವರ್ಷದೊಳಗೆ ಜಾರಿಯಾಗಲಿದೆ ಎಂದು ಹೇಳಿದರು.
ರಷ್ಯಾದ ನೆರವಿನೊಂದಿಗೆ ಜಿಪಿಎಸ್ ವ್ಯವಸ್ಥೆಯನ್ನು ಕಾರ್ಯಗತಗೊಳಿಸುತ್ತಿದ್ದು, ಇದರಿಂದ ಟೋಲ್ ಶುಲ್ಕ ವಾಹನ ಸವಾರರ ಬ್ಯಾಂಕ್ ಖಾತೆಯಿಂದ ನೇರವಾಗಿ ಕಡಿತವಾಗಲಿದೆ ಎಂದು ಸಚಿವ ಗಡ್ಕರಿ ತಿಳಿಸಿದರು.