ಹೊಸದಿಲ್ಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಅವನಿ ಲೇಖರಾ ಅವರು ಫ್ರಾನ್ಸ್‌ನ ಚಟಿರಾಕ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್ ವಿಶ್ವಕಪ್‌ನ ವನಿತೆಯರ 10 ಮೀ. ಏರ್ ರೈಫಲ್ ಸ್ಟಾಂಡಿಂಗ್ ಎಸ್‌ಎಚ್1ರಲ್ಲಿ ವಿಶ್ವದಾಖಲೆಯ ಸಾಧನೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
20ರ ಹರೆಯದ ಅವನಿ 250.6 ಅಂಕ ಪೇರಿಸುವ ಮೂಲಕ ತನ್ನದೇ ಹೆಸರಲ್ಲಿದ್ದ ವಿಶ್ವದಾಖಲೆ (249.6 ಅಂಕ) ಯನ್ನು ಅಳಿಸಿಹಾಕಿದರು. ಈ ಮೂಲಕ 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅರ್ಹತೆ ಗಳಿಸಿಕೊಂಡರು. ಪೊಲಂಡಿನ ಎಮಿಲಿಯಾ ಬಾಬ್ಸಕಾ (247.6) ಬೆಳ್ಳಿ ಗೆದ್ದರೆ ಸ್ವೀಡನ್‌ನ ಅನ್ನಾ ನಾರ್ಮನ್ (225.6) ಕಂಚು ಪಡೆದರು.
ಅವನಿ ಅವರಿಗೆ ಈ ವಿಶ್ವದಾಖಲೆಯ ಚಿನ್ನ ಗೆಲ್ಲುವ ಸಾಧ್ಯತೆ ಇರಲಿಲ್ಲ. ಯಾಕೆಂದರೆ ಆರಂಭದಲ್ಲಿ ಅವರ ಕೋಚ್ ಮತ್ತು ಸಹಾಯಕಿಗೆ ಫ್ರಾನ್ಸ್‌ಗೆ ಪ್ರಯಾಣಿಸಲು ವೀಸಾ ನಿರಾಕರಿಸಲಾಗಿತ್ತು. ಆಬಳಿಕ ಕ್ರೀಡಾ ಸಚಿವಾಲಯ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ ಮಧ್ಯ ಪ್ರವೇಶಿಸಿದ ಬಳಿಕ ವೀಸಾ ಸಮಸ್ಯೆಯನ್ನು ಇತ್ಯರ್ಥಪಡಿಸಲಾಗಿತ್ತು.
ವಿಶ್ವದಾಖಲೆಯ ಸಾಧನೆಯೊಂದಿಗೆ ಭಾರತಕ್ಕೆ ಚಿನ್ನ ಗೆದ್ದಿರುವುದು ಮತ್ತು ಈ ಮೂಲಕ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿರುವುದು ಹೆಮ್ಮೆಯಾಗುತ್ತಿದೆ. ನನಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆಗಳು ಎಂದವರು ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ 10 ಮೀ. ಏರ್ ರೈಫಲ್‌ನಲ್ಲಿ ಅವನಿ ಲೇಖರಾ ಚಿನ್ನ ಜಯಿಸಿದ್ದರು. ಆಬಳಿಕ ಅವರು ವನಿತೆಯರ 50 ಮೀ.ರೈಫಲ್ ತ್ರಿ ಪೊಸಿಶನ್ ಎಸ್‌ಎಚ್ 1 ವಿಭಾಗದಲ್ಲಿ ಕಂಚು ಜಯಿಸಿದ್ದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಅವಳಿ ಪದಕ ಗೆದ್ದ ಭಾರತದ ಮೊದಲ ವನಿತೆ ಎಂಬ ಗೌರವಕ್ಕೂ ಅವರು ಪಾತ್ರರಾಗಿದ್ದರು.