ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನ ವನಿತೆಯರ 69 ಕೆಜಿ ವಿಭಾಗದಲ್ಲಿ ಭಾರತದ ಲವ್ಲಿನಾ ಬೊರ್ಗೊಹೇನ್ ಬುಧವಾರ ಸೆಮಿಫೈನಲ್ ನಲ್ಲಿ ಪರಾಜಯಗೊಂಡಿದ್ದು, ಕಂಚಿನ ಪದಕ ಗೆದ್ದಂತಾಗಿದೆ. ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಬಳಿಕ ಕಂಚಿನ ಪದಕ ಜಯಿಸಿದ ಎರಡನೇ ಅಥ್ಲೀಟ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ:ಬಿ.ವೈ ವಿಜಯೇಂದ್ರಗೆ ಇಲ್ಲ ಸಚಿವ ಪಟ್ಟ, ಯಡಿಯೂರಪ್ಪ ವಿರುದ್ಧ ಗುಡುಗಿದವರಿಗೆ ಶಾಕ್!
ಬುಧವಾರ ಟೋಕಿಯೊ ಒಲಿಂಪಿಕ್ಸ್ ನ ವನಿತೆಯರ 69 ಕೆಜಿ ವಿಭಾಗದಲ್ಲಿ ಬಾಕ್ಸರ್ ಲವ್ಲಿನಾ ಅವರು ತಮ್ಮ ಎದುರಾಳಿ ವಿಶ್ವಚಾಂಪಿಯನ್ ಟರ್ಕಿಯ ಬುಸೆನಾ ಸುರ್ಮೆನೆಲಿ ವಿರುದ್ಧ ಪರಾಜಯಗೊಳ್ಳುವ ಮೂಲಕ ಚಿನ್ನದ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದಂತಾಗಿದೆ.
69ಕೆಜಿ ಬಾಕ್ಸಿಂಗ್ ಪಂದ್ಯದ ಮೊದಲ ಸುತ್ತಿನಲ್ಲಿ ಲವ್ಲಿನಾ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಮೊದಲ ಸುತ್ತಿನ ಕೊನೆಯ 30 ಸೆಕೆಂಡುಗಳಲ್ಲಿ ಸುರ್ಮನೆಲಿ ಲವ್ಲಿನಾಗೆ ಬಲವಾದ ಪಂಚ್ ನೀಡಿದ್ದರು. ಬಳಿಕ ಕೊನೆಯ 30ಸೆಕೆಂಡುಗಳಲ್ಲಿ ಎದುರಾಳಿಗೆ ಪ್ರಬಲ ಪಂಚ್ ನೀಡಲು ರೆಫ್ರಿ ಎಚ್ಚರಿಕೆ ನೀಡಿದರೂ ಕೂಡಾ ಅದಕ್ಕೆ ವಿಫಲರಾದ ಹಿನ್ನೆಲೆ ಸುರ್ಮೆನೆಲಿ ಮೊದಲ ಶ್ರೇಣಿಯಲ್ಲಿ ಜಯಿಸಿರುವುದಾಗಿ ತೀರ್ಪುಗಾರರು ಘೋಷಿಸಿದ್ದರು.
ಒಲಿಂಪಿಕ್ ನಲ್ಲಿ ಬಾಕ್ಸರ್ ಎಂಸಿ ಮೇರಿ ಕೋಮ್ ನಂತರ ಕಂಚಿನ ಪದಕ ಗೆದ್ದ ಹೆಮ್ಮೆ ಎರಡನೇ ಮಹಿಳಾ ಬಾಕ್ಸರ್ ಲವ್ಲೀನಾ ಅವರದ್ದಾಗಿದೆ. ಬಾಕ್ಸರ್ ಮೇರಿ ಕೋಮ್ ಅವರು 2012ರಲ್ಲಿ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು.