ಟೋಕಿಯೊ: ಒಲಿಂಪಿಕ್ಸ್ ನಲ್ಲಿ ಭಾರತದ ಹಾಕಿ ಗತ ವೈಭವ ಮರಳುತ್ತಿದೆ. ಪುರುಷರ ಹಾಕಿ ತಂಡ ಸೆಮಿ ಫೈನಲ್ ಪ್ರವೇಶಿಸಿದ ಮರುದಿನವೇ ಭಾರತದ ವನಿತೆಯರ ತಂಡ ಕೂಡಾ ಸೆಮಿ ಫೈನಲ್ ಗೆ ಎಂಟ್ರಿ ನೀಡಿದೆ.
ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ ತಂಡ 1-0 ಗೋಲುಗಳ ಅಂತರದಿಂದ ಸೋಲಿಸಿತು.
ಭಾರತದ ಗುರ್ಜೀತ್ ಕೌರ್ 22ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. ನಂತರ ಸಮಬಲ ಸಾಧಿಸಲು ಆಸೀಸ್ ವನಿತೆಯರು ಹರಸಾಹಸ ಪಟ್ಟರೂ ಭಾರತದ ಬಲಿಷ್ಠ ಡಿಫೆನ್ಸ್ ದಾಟಿ ಗೋಲು ಗಳಿಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ:” ಕಾಶ್ಮೀರ ಪ್ರೀಮಿಯರ್ ಲೀಗ್” ನಡೆಸಲು ಮುಂದಾದ ಪಾಕಿಸ್ಥಾನ: ಬಿಸಿಸಿಐ ಆಕ್ಷೇಪ
ಗ್ರೂಪ್ ಹಂತದ ಆರಂಭದಲ್ಲಿ ಕಳಪೆ ಪ್ರದರ್ಶನ ತೋರಿದ್ದ ರಾಣಿ ರಾಂಪಾಲ್ ಬಳಗ ನಂತರ ತಿರುಗಿ ಬಿದ್ದಿತ್ತು. ಕೊನೆಯಲ್ಲಿ ಅದೃಷ್ಟದ ಬಲದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿದ್ದ ತಂಡ ಸೆಮಿ ಫೈನಲ್ ನಲ್ಲಿ ಬಲಿಷ್ಠ ಆಸೀಸ್ ತಂಡವನ್ನು ಸೋಲಿಸಿದೆ.