ಚಿಕ್ಕಬಳ್ಳಾಪುರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲಾದ್ಯಂತ ಸಾಕಷ್ಟು ಸದ್ದು ಮಾಡಿದ್ದ ರಾಜಕೀಯ ಪಕ್ಷಗಳ ಟೋಕನ್ ಪದ್ಧತಿ ಇದೀಗ ಲೋಕಸಭಾ ಚುನಾವಣೆಗೂ ಕಾಲಿಟ್ಟಿದ್ದು, ಅಧಿಕಾರಿಗಳು ಚಾಪೆ ಕೆಳೆಗೆ ತೋರಿದರೆ ನಾವು ರಂಗೋಲಿಗೆ ಕೆಳೆಗೆ ತೂರುತ್ತೇವೆಂದು ಹೇಳಿ ಕ್ಷೇತ್ರದಲ್ಲಿ ಅಖಾಡ ದಲ್ಲಿರುವ ರಾಜಕೀಯ ಪಕ್ಷಗಳು ಮತದಾರರ ಓಲೈಕೆಗಾಗಿ ಬಿರಿಯಾನಿ, ಮದ್ಯ, ಹಣ ಹಂಚಿಕೆಗೆ ಟೋಕನ್ ಹಾದಿ ಹಿಡಿದಿವೆ.
ಕೇಳಿದ್ದು ಕೈಗೆ ಸೇರುತ್ತದೆ: ಅಭ್ಯರ್ಥಿಗಳು ಉರಿ ಬಿಸಿಲಿನಲ್ಲೂ ಬೆವರು ಸುರಿಸಿ ರಾಜಕೀಯ ಭವಿಷ್ಯ ಕಾಪಾಡಿಕೊಳ್ಳಲು
ಹರಸಾಹ ಪಡುತ್ತಿದ್ದಾರೆ. ಇದರ ನಡುವೆ ಪ್ರಚಾರ ಕಾರ್ಯಕ್ಕೆ ಬರುತ್ತಿರುವ ಕಾರ್ಯಕರ್ತರಿಗೆ ಪಕ್ಷಗಳು ಯಾರಿಗೂ ಅನುಮಾನ ಬಾರದಂತೆ ಟೋಕನ್ ವಿತರಿಸುವ ಮೂಲಕ ಹೊಸ ಐಡಿಯಾ ಹಮ್ಮಿಕೊಂಡಿದ್ದು, ಟೋಕನ್ ತೋರಿಸಿದರೆ ಸಾಕು ಕೇಳಿದ್ದು ಕೈಗೆ ಸೇರುತ್ತಿದೆ.
ಮತದಾನಕ್ಕೆ ಕೇವಲ 6 ದಿನ ಮಾತ್ರ ಬಾಕಿಯಿದ್ದು, ಅಭ್ಯರ್ಥಿಗಳ ಬಹಿರಂಗ ಪ್ರಚಾರ ಮಂಗಳವಾರ ಕೊನೆಗೊಳ್ಳಲಿದೆ. ಇದರ ನಡುವೆ ಮತದಾರರಿಗೆ ಹಣ, ಹೆಂಡ ವಿತರಿಸಲು ಪಕ್ಷಗಳಿಗೆ ಬಿಸಿತುಪ್ಪವಾಗಿರುವ ಬೆನ್ನಲ್ಲೇ ಮತದಾರರಿಗೆ ತಲುಪಿಸಬೇಕಾದ ವಸ್ತುಗಳನ್ನು ಟೋಕನ್ ಮೂಲಕ ವಿತರಿ ಸಲು ಪಕ್ಷಗಳು ಮುಂದಾಗಿದ್ದು, ಜಾಲ ತಾಣಗಳಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.
ಯುಗಾದಿ ವೇಳೆ ನಾನ್‌ವೇಜ್‌ಗೆ ಟೋಕನ್: ಜಿಲ್ಲೆಯಲ್ಲಿ ಯುಗಾದಿ ಹಬ್ಬದ ಮಾರನೇ ದಿನ ದೊಡ್ಡ ಪ್ರಮಾಣದಲ್ಲಿ
ಆಚರಿಸುವ ವರ್ಷದ ತೊಡಕಿಗೆ ಕೆಲ ರಾಜ ಕೀಯ ಪಕ್ಷಗಳು ಕೋಳಿ, ಕುರಿ, ಮೇಕೆ ಮಾಂಸ ಖರೀದಿಸಲು ಮತದಾರರಿಗೆ ಟೋಕನ್ ವಿತರಿಸಿರುವುದು ಬೆಳಕಿಗೆ ಬಂದಿದೆ.
ಜಿಲ್ಲೆಯ ಚಿಕ್ಕಬಳ್ಳಾಪುರ, ಗೌರಿಬಿದ ನೂರು, ಬಾಗೇಪಲ್ಲಿ ತಾಲೂಕುಗಳಲ್ಲಿ 1 ರಿಂದ 2 ಕೆಜಿಯಷ್ಟು ಮಾಂಸಕ್ಕೆ ಮತದಾರರಿಗೆ ಟೋಕನ್ ವಿತರಿಸಿವೆ. ಮದ್ಯಕ್ಕೂ ಕೆಲ ಬಾರ್ ಮಾಲೀಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಟೋಕನ್ ವಿತರಿಸಿರುವುದು ಹಬ್ಬ ಮುಗಿದ ಬಳಿಕ ಬೆಳಕಿಗೆ ಬಂದಿದೆ.
ಮತದಾರರ ಓಲೈಕೆಗೆ ಇನ್ನಿಲ್ಲದ ಕಸರತ್ತು ಆರಂಭಿಸಿ ಮದ್ಯ, ಹಣ, ಬಿರಿಯಾನಿ, ಗೃಹಪಯೋಗಿ ವಸ್ತುಗಳು, ದಿನಸಿ
ಪದಾರ್ಥಗಳು, ಕಾರ್ಯಕರ್ತರ ವಾಹನಗಳಿಗೆ ಪೆಟ್ರೋಲ್ ತುಂಬಿಸಿಕೊಳ್ಳಲು ಟೋಕನ್ ಹಾದಿ ಹಿಡಿರುವುದು ಚರ್ಚೆಗೆ
ಗ್ರಾಸವಾಗಿದೆ.
● ಕಾಗತಿ ನಾಗರಾಜಪ್ಪ