Advertisement

ಪ್ರತೀ ಮನೆಗೆ ಶೌಚಾಲಯ; ಎಪಿಡಿ ಫೌಂಡೇಶನ್‌ ವಿನೂತನ ಹೆಜ್ಜೆ

06:03 AM Mar 14, 2019 | Team Udayavani |

ಮಹಾನಗರ: ಕುಂಜತ್ತಬೈಲಿನಲ್ಲಿ ಆಂಟಿ ಪೊಲ್ಯೂಷನ್‌ ಡ್ರೈವ್‌ (ಎಪಿಡಿ) ಫೌಂಡೇಶನ್‌ ನಿರ್ಮಿಸಿದ ಮೊದಲ ಶೌಚಾಲಯಕ್ಕೆ ಚಾಲನೆ ನೀಡಲಾಯಿತು. ಈ ಮೂಲಕ ‘ಪ್ರತಿ ಮನೆಗೆ ಶೌಚಾಲಯ’ ಎಂಬ ಯೋಜನೆಗೆ ಎಪಿಡಿ ಫೌಂಡೇಶನ್‌ ಚಾಲನೆ ನೀಡಿದೆ. 2019ರ ಒಳಗೆ ಬಯಲು ಮಲವಿಸರ್ಜನೆ ಮುಕ್ತ ರಾಷ್ಟ್ರ’ ಎಂದು ಸರಕಾರ ಘೋಷಿಸಿದ ಅನಂತರ ಮಂಗಳೂರು ಮೂಲದ ಎನ್‌ಜಿಒ ಆಂಟಿ ಪೊಲ್ಯೂಷನ್‌ ಡ್ರೈವ್‌ ನಗರ ನೈರ್ಮಲ್ಯವನ್ನು ಸುಧಾರಿಸಲು ಕೈಗೊಂಡ ಹೊಸ ಕಾರ್ಯಕ್ರಮ ಇದಾಗಿದೆ.

Advertisement

ಅಮೆರಿಕಾದ ಸ್ಟ್ಯಾನ್‌ಪೋರ್ಡ್‌ ವಿಶ್ವವಿದ್ಯಾನಿಲಯದ ಸಂಶೋಧನ ವಿಜ್ಞಾನಿ ಮತ್ತು ಯೋಜನ ಸಂಚಾಲಕಿ ಮೆಲಾನಿ ರೊಡ್ರಿಗಸ್‌ ಮಾತನಾಡಿ, ನಾನು ವಿದೇಶದಿಂದ ಹಿಂದಿರುಗಿದ ಅನಂತರ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂದು ಬಯಸಿದ್ದು, ಎಪಿಡಿಯ ಯೋಜನೆಯ ಬಗ್ಗೆ ನಾನು ಅರಿತುಕೊಂಡೆ. ದೇಶದಲ್ಲಿ ಅರ್ಧಾಂಶಕ್ಕಿಂತ ಹೆಚ್ಚು ಜನರು ಬಯಲು ಮಲವಿಸರ್ಜನೆ ಮಾಡುತ್ತಿದ್ದಾರೆ. ಆದುದರಿಂದ ಏಪಿಡಿಯ ಈ ಶೌಚಾಲಯ ನಿರ್ಮಾಣ ಯೋಜನೆಯಲ್ಲಿ ಸಹಯೋಗ ನೀಡಲು ಸಂತೋಷವಾಗುತ್ತಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 4,900 ಮನೆಗಳಿಗೆ ಶೌಚಾಲಯಗಳಿಲ್ಲ ಎಂಬ ವರದಿ ಗಮನಿಸಿದೆ. ಜಿಲ್ಲೆಯಲ್ಲಿ ವ್ಯಾಪಕ ಸಮೀಕ್ಷೆ ಅನಂತರ ಈ ಕುಟುಂಬಗಳಿಗೆ ಮುಂಬರುವ ದಿನಗಳಲ್ಲಿ ಶೌಚಾಲಯ ಸೌಲಭ್ಯ ದೊರೆಯುವಂತಾಗಬೇಕು ಎಂದು ಮುಖ್ಯ ಅತಿಥಿ ನಿವೃತ್ತ ಪೊಲೀಸ್‌ ಅಧಿಕಾರಿ ಉದಯ್‌ ನಾಯಕ್‌ ಅವರು ಹೇಳಿದರು.

ಎಪಿಡಿಯ ಈ ಯೋಜನೆಯ ಮೊದಲ ಫಲಾನುಭವಿ ಚಂದ್ರಾವತಿ ಎರಡು ದಶಕಗಳಿಂದ ಕುಂಜತ್ತಬೈಲಿನಲ್ಲಿ ವಾಸಿಸುತ್ತಿರುವ ಹಿರಿಯ ಮಹಿಳೆ. 20 ವರ್ಷಗಳಿಂದ ನಾನು ಇಲ್ಲಿ ವಾಸಿಸುತ್ತಿದ್ದೇನೆ ಮತ್ತು ಟಾಯ್ಲೆಟ್‌ ಇಲ್ಲದಿದ್ದರೂ ಒಂದೆರಡು ವರ್ಷದ ಹಿಂದೆ ಮನೆಗೆ ವಿದ್ಯುತ್‌ ಸಂಪರ್ಕ ದೊರೆಯಿತು. ಟಾಯ್ಲೆಟ್‌ ನಿರ್ಮಿಸಲು ಸಹಾಯ ನೀಡಿರುವುದಕ್ಕಾಗಿ ಎಪಿಡಿಗೆ ನಾನು ಕೃತಜ್ಞರಾಗಿರುತ್ತೇನೆ’ ಎಂದು ಅವರು ಹೇಳಿದರು.

ಎಪಿಡಿ ಸಂಸ್ಥಾಪಕ ಮತ್ತು ಸಿಇಒ ಅಬ್ದುಲ್ಲಾ ಎ. ರೆಹಮಾನ್‌, ಒಡಿಎಫ್‌ ಯೋಜನೆಗಳ ಸರಿಯಾದ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವ ಜಿಲ್ಲಾ ನಗರಾಭಿವೃದ್ಧಿ ಕೇಂದ್ರದ (ಡಿಯುಡಿಸಿ) ಸದಸ್ಯನಾಗಿದ್ದು, ಯೋಜನೆಯ ಕರಪತ್ರಗಳನ್ನು ಬಿಡುಗಡೆ ಮಾಡಿದರು. ಎಪಿಡಿ ನಿರ್ದೇಶಕ ಅರ್ಜುನ್‌ ರೈ ಮತ್ತು ಮಂಗಳೂರು ರೌಂಡ್‌ ಟೇಬಲ್‌ ಅಧ್ಯಕ್ಷ ಹ್ಯಾರೋನ್‌ ಫರ್ನಾಂಡಿಸ್‌, ಎಪಿಡಿ ತಂಡದ ಸದಸ್ಯರಾದ ವಾಣಿಶ್ರೀ, ಕಾರ್ಲ್ ಡಿ ಕುನ್ಹಾ, ರಾಸ್ಮಿಯ ಶೇಖ್‌, ತನಿಮಾ ಬೇಕಲ್‌ ಮತ್ತು ಧನುಷ್‌ ದೇಸಾಯಿ ಉಪಸ್ಥಿತರಿದ್ದರು. ಮಹೇಶ್‌ ನಾಯಕ್‌ ನಿರೂಪಿಸಿದರು.

Advertisement

4950 ಮನೆಗಳಿಗೆ ಶೌಚಾಲಯಗಳಿಲ್ಲ!
ಸಾಮಾಜಿಕ ಆಡಿಟ್‌ ವರದಿಯು ದ.ಕ. ಜಿಲ್ಲೆಯಲ್ಲಿ 4,590 ಮನೆಗಳಲ್ಲಿ ಇನ್ನೂ ಶೌಚಾಲಯಗಳಿಲ್ಲ ಎಂದು ಹೇಳುತ್ತದೆ. ಸೋಶಿಯಲ್‌ ಆಡಿಟ್‌ ಜಿಲ್ಲೆಯ 230 ಗ್ರಾಮ ಪಂಚಾಯತ್‌ ಹಾಗೂ 366 ಗ್ರಾಮಗಳಲ್ಲಿ ಮಾಡಲಾಯಿತು. ಈ ವರದಿಯ ಪ್ರಕಾರ ಮಂಗಳೂರು ತಾಲೂಕಿನಲ್ಲಿ ಶೌಚಾಲಯಗಳು ಇಲ್ಲದ ಅತೀ ಹೆಚ್ಚು ಮನೆಗಳು ಇವೆ. ಪುತ್ತೂರು (875) ಬೆಳ್ತಂಗಡಿ (836) ಸುಳ್ಯ (852) ಬಂಟ್ವಾಳ (579) ಶೌಚಾಲಯ ರಹಿತ ಮನೆಗಳಿವೆ. ಈ ವರದಿಯ ಪ್ರಕಾರ ಸುಮಾರು 350 ಶೌಚಾಲಯಗಳು ಉಪಯೋಗವಾಗದೆ ಸುಮ್ಮನೆ ಬಿದ್ದಿವೆ ಮತ್ತು 795 ಶೌಚಾಲಯಗಳನ್ನು ಮನೆಮಂದಿ ಹಂಚಿ ಉಪಯೋಗಿಸುತ್ತಾ ಇದ್ದಾರೆ ಎಂದೂ ಹೇಳುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next