ಬಳ್ಳಾರಿ: ಅರ್ಜಿ ಸಲ್ಲಿಸಿದ್ದರೂ ಮನೆಗೊಂದು ಶೌಚಾಲಯ ನಿರ್ಮಿಸಿಕೊಡದ ಮಹಾನಗರ ಪಾಲಿಕೆ ನಿರ್ಲಕ್ಷ್ಯಕ್ಕೆ ಬೇಸತ್ತ
ಇಲ್ಲಿನ ಗೌತಮ್ ನಗರ ನಿವಾಸಿಗಳು ಕ್ರೈಸ್ತ ಮಷಿನರಿಗಳ ಮೊರೆ ಹೋಗಿದ್ದಾರೆ. ಕೇವಲ ನಾಲ್ಕು ಸಾವಿರ ರೂ.ಪಾವತಿಸಿ, ಸಾವಿರಾರು ರೂ. ಮೌಲ್ಯದ ಸುಸಜ್ಜಿತ ಶೌಚಾಲಯ ನಿರ್ಮಿಸಿಕೊಂಡಿರುವ ನಿವಾಸಿಗಳು, ಪಾಲಿಕೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹುಬ್ಬೇರಿಸು ವಂತೆ ಮಾಡಿದ್ದಾರೆ.
ಬಯಲು ಬಹಿರ್ದೆಸೆಯನ್ನು ನಿರ್ಮೂಲನೆ ಮಾಡುವ ಹಾಗೂ ಎಲ್ಲೆಡೆ ಸ್ವತ್ಛತೆ ಕಾಪಾಡುವ ಸಲುವಾಗಿ ನಿರ್ಮಲ ಭಾರತ್, ಸ್ವತ್ಛ ಭಾರತ್ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಅನುದಾನವನ್ನೂ ನೀಡಲಾಗುತ್ತಿದ್ದು, ಮನೆಗೊಂದು ಪ್ರತ್ಯೇಕ ಶೌಚಾಲಯ ನಿರ್ಮಿಸಿಕೊಂಡರೆ, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ತಲಾ ಇಂತಿಷ್ಟು ಹಣ ಫಲಾನುಭವಿ ಖಾತೆಗೆ ಜಮಾಗೊಳ್ಳಲಿದೆ. ಆದರೆ, ಇಲ್ಲಿನ ಗೌತಮನಗರ ನಿವಾಸಿಗಳು 2013-14, 2014-15ರಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಪಾಲಿಕೆಗೆ ಅರ್ಜಿ ಸಲ್ಲಿಸಲಾಗಿತ್ತು. ಜತೆಗೆ ಸ್ಥಳೀಯ ಪಾಲಿಕೆ ಸದಸ್ಯರು, ನಗರ ಶಾಸಕರ ಗಮನಕ್ಕೂ ತರಲಾಗಿತ್ತು. ಯಾರೊಬ್ಬರೂ ಎಚ್ಚೆತ್ತುಕೊಳ್ಳಲಿಲ್ಲ. ಹೀಗಾಗಿ ನಿವಾಸಿಗಳು ಕೈಸ್ತ ಮಷಿನರಿ ಮೊರೆ ಹೋಗಿದ್ದಾರೆ.
ಆಟೋ ಚಾಲಕರು, ಕೂಲಿ ಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಿರುವ ಗೌತಮ ನಗರದಲ್ಲಿನ ಮಹಿಳೆಯರು ಬಹಿರ್ದೆಸೆಗೆ ರಸ್ತೆ ಬದಿಗಳನ್ನೇ ಆಶ್ರಯಿಸಿದ್ದಾರೆ. ಮೇಲಾಗಿ ರಾತ್ರಿ ಹೊತ್ತಲ್ಲಿ ಮಾತ್ರ ಬಹಿರ್ದೆಸೆಗೆ ತೆರಳಬೇಕಿದ್ದು, ವಾತಾವರಣ ಸರಿಯಿಲ್ಲದ್ದರಿಂದ ವಾಪಸ್ ಬರುವವರೆಗೂ ದಾರಿ ಕಾಯಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ಮನೆಗೊಂದು ಶೌಚಾಲಯ ನಿರ್ಮಾಣ ಅನಿವಾರ್ಯವಾಗಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿ, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳದ್ದರಿಂದ ಕ್ರೈಸ್ತ ಮಷಿನರಿ ಕ್ಯಾಥೋಲಿಕ್ ಚರ್ಚ್ ಮೊರೆ ಹೋಗಿತ್ತು. ಧರ್ಮಾಧ್ಯಕ್ಷ ಡಾ| ಹೆನ್ರಿ ಡಿಸೋಜಾರಿಗೂ ಮನವಿ ಸಲ್ಲಿಸಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಡಿಸೋಜಾ, ತಮ್ಮ ಸಿಬ್ಬಂದಿ ಕಳುಹಿಸಿ, ನಮ್ಮಿಂದ ಒಳಚರಂಡಿ ಗುಂಡಿ ಅಗೆಯಲು 4 ಸಾವಿರ ರೂ. ಮತ್ತು ಆಧಾರ್‌ಕಾರ್ಡ್ ಪಡೆದರು. ಕೆಲವೇ ದಿನಗಳಲ್ಲಿ 4×6 ಅಡಿ ಅಳತೆಯಲ್ಲಿ ಸುಸಜ್ಜಿತ ಮತ್ತು ಗುಣಮಟ್ಟದ ಶೌಚಾಲಯ ನಿರ್ಮಿಸಿ, ಬಣ್ಣವನ್ನೂ ಬಳಿದುಕೊಟ್ಟಿದ್ದಾರೆ ಎನ್ನುತ್ತಾರೆ ಫಲಾನುಭವಿ ಸುಧಾಕರ್, ಕೃಷ್ಣಾನಾಯ್ಕ.
ಗೌತಮ್ ನಗರದಲ್ಲಿ ಒಟ್ಟು 35ಕ್ಕೂ ಹೆಚ್ಚು ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಟ್ಟಿದ್ದು, ಪ್ರತಿಯೊಂದಕ್ಕೆ 23,500 ರೂ.ಗಳಂತೆ ಅಂದಾಜು 8 ಲಕ್ಷರೂ. ವೆಚ್ಚ ಮಾಡಲಾಗಿದೆ. ಪ್ರತಿ ಶೌಚಾಲಯಕ್ಕೂ ಚಾಲೀಸ್ ಸಿಸ್ಟರ್ ಆಫ್ ದಿ ಗುಡ್ ಶೆಫೆರ್ಡ್ ಎಂಬ ನಾಮಫಲಕ ಅಳವಡಿಸಲಾಗಿದೆ.
ಈಗಾಗಲೇ 35ಕ್ಕೂ ಹೆಚ್ಚು ಶೌಚಾಲಯ ನಿರ್ಮಿಸಿಕೊಟ್ಟಿರುವ ಕ್ರೈಸ್ತ ಮಷಿನರಿಗೆ ಇದೀಗ ಪುನಃ 160ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಹಂತ ಹಂತವಾಗಿ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದೆ. ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಅಲೆದಾಡುವುದಕ್ಕಿಂತ, ಇಂಥಹ ಸಂಸ್ಥೆಗೆ ಅರ್ಜಿ ಸಲ್ಲಿಸಿ, ಶೌಚಾಲಯ ನಿರ್ಮಿಸಿಕೊಳ್ಳುವುದು ಲೇಸು ಎಂಬುದು ಸ್ಥಳೀಯ ನಿವಾಸಿಗಳದ್ದು.
ಮಹಿಳೆಯರ ಪರಿಸ್ಥಿತಿ ಹೇಳತೀರದಾಗಿದೆ. ಮಹಿಳೆಯರು ಬಹಿರ್ದೆಸೆಗೆ ಬೆಳಗಿನ ಜಾವ ಅಥವಾ ರಾತ್ರಿ ವೇಳೆಯಲ್ಲಿ ತೆರಳಬೇಕಾದ ಪರಿಸ್ಥಿತಿ ಇದೆ. ಈ ಸಮಸ್ಯೆ ಬಗ್ಗೆ ಗಮನಕ್ಕಿದ್ದರೂ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಕಿಂಚಿತ್ತೂ ಅರ್ಥ ಮಾಡಿಕೊಳ್ಳಲಿಲ್ಲ. ಕೇವಲ ಚುನಾವಣೆ ಬಂದಾಗ ಮಾತ್ರ ಮತಕ್ಕಾಗಿ ಮನೆ ಬಾಗಿಲಿಗೆ ಬರುವ ಜನಪ್ರತಿನಿಧಿಗಳು, ಸೌಲಭ್ಯ ಕೇಳಿದರೆ ನುಣುಚಿಕೊಳ್ಳುತ್ತಾರೆ. ಸುಧಾಕರ್, ಸ್ಥಳೀಯ ನಿವಾಸಿ
ವಿಶೇಷ ವರದಿ