Advertisement

Chikkaballapur ನಗರಸಭೆ ಕೋಲಾಹಲ; ಡಾ.ಸುಧಾಕರ್ ಮೇಲುಗೈ: ಸವಾಲು ಹಾಕಿದ ಪ್ರದೀಪ್ ಈಶ್ವರ್!

07:05 PM Sep 12, 2024 | Team Udayavani |

ಚಿಕ್ಕಬಳ್ಳಾಪುರ: ಭಾರೀ ನಿರೀಕ್ಷೆ ಮೂಡಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಗುರುವಾರ(ಸೆ 12 )ನಡೆದಿದ್ದು ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ನ ಆರು ಮಂದಿ ಸದಸ್ಯರು ಪಕ್ಷಾಂತರ ಮಾಡಿ ಬಿಜೆಪಿಗೆ ಬೆಂಬಲ ಸೂಚಿಸಿದ್ದು ರಾಜಕೀಯ ಸಂಘರ್ಷ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.

Advertisement

ನಗರಸಭೆಯಲ್ಲಿ ಒಟ್ಟು 35 ಮತಗಳಿದ್ದವು. 31 ನಗರಸಭಾ ಸದಸ್ಯರು,ಸಂಸದ ಡಾ. ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಮತ್ತು ಇಬ್ಬರು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರ ಮತವಿತ್ತು.

ಕಾಂಗ್ರೆಸ್ 16 ಸದಸ್ಯರನ್ನು ಹೊಂದಿದ್ದರೂ ಕೊನೆಕ್ಷಣದಲ್ಲಿ 6 ಮಂದಿ ಬಿಜೆಪಿ ಪಾಳಯಕ್ಕೆ ಜಿಗಿದು ಲೆಕ್ಕಾಚಾರ ತಲೆಕೆಳಗೆ ಮಾಡಿದ್ದಾರೆ. ಕಾಂಗ್ರೆಸ್ 10 ಸದಸ್ಯರು,1 ಪಕ್ಷೇತರ, ಪಕ್ಷಾಂತರ ಮಾಡಿದ್ದ ಇಬ್ಬರು ಜೆಡಿಎಸ್ ಸದಸ್ಯರು ಸೇರಿ 16 ಮತಗಳನ್ನು ಮಾತ್ರ ಹೊಂದಿ ಡಾ.ಸುಧಾಕರ್ ಅವರ ರಣತಂತ್ರದ ಮುಂದೆ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ 9 ಸದಸ್ಯರು, ಕಾಂಗ್ರೆಸ್ ನಿಂದ ಪಕ್ಷಾಂತರ ಮಾಡಿದ 6 ಸದಸ್ಯರು, 3 ಮಂದಿ ಪಕ್ಷೇತರರು ಮತ್ತು 1 ಸಂಸದರ ಮತದಿಂದ ಬಿಜೆಪಿ ಅಧಿಕಾರಕ್ಕೇರಲು  ಸಾಧ್ಯವಾಯಿತು.

ಸಾಮಾನ್ಯಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಗಜೇಂದ್ರ ಅವರು 19 ಮತ ಪಡೆದು ಹುದ್ದೆಗೇರಿದ್ದಾರೆ. ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಅಂಬರೀಷ್ 16 ಮತಗಳನ್ನು ಮಾತ್ರ ಪಡೆದರು. ಪರಿಶಿಷ್ಟ ಜಾತಿ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ನಾಗರಾಜ್ 20 ಮತ ಪಡೆದಿದ್ದು, ಕಾಂಗ್ರೆಸ್ ನ ಅಭ್ಯರ್ಥಿ ಮೀನಾಕ್ಷಿ 15 ಮತಗಳನ್ನು ಪಡೆದಿದ್ದಾರೆ ಎಂದು ವಿವರ ಲಭ್ಯವಾಗಿದೆ.

ಅಧಿಕೃತ ಫಲಿತಾಂಶ ಪ್ರಕಟವಿಲ್ಲ
ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಹಾಗೂ ಸೀತಾರಾಂ ಅವರು ಮತದಾನ ಮಾಡಲು ಅರ್ಹರಲ್ಲ ಎಂದು ಸಂಸದ ಡಾ. ಸುಧಾಕರ್ ಬೆಂಬಲಿಗರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಮತದಾನಕ್ಕೆ ಅವಕಾಶ ಮಾಡಿಕೊಟ್ಟು ಚುನಾವಣೆ ಮುಗಿದರೂ ಫಲಿತಾಂಶ ರಿಟ್ ಅರ್ಜಿಯ ತೀರ್ಪಿಗೆ ಒಳಪಟ್ಟಿರುವುದಾಗಿ ಆದೇಶಿಸಿದೆ. ಚುನಾವಣೆ ಮುಗಿದರೂ ಚುನಾವಣಾಧಿಕಾರಿ ಅಧಿಕೃತ ಫಲಿತಾಂಶ ಪ್ರಕಟ ಮಾಡಿಲ್ಲ.

Advertisement

ಬಿಜೆಪಿಗರ ವಿಜಯೋತ್ಸವ
ಅಧಿಕಾರ ಸಿಕ್ಕಿರುವುದು ತಿಳಿಯುತ್ತಿದ್ದಂತೆ ಡಾ.ಸುಧಾಕರ್ ಸೇರಿ ಬಿಜೆಪಿ ಸದಸ್ಯರು, ವಿಜಯೋತ್ಸವ ಆಚರಿಸಿದರು. ಈ ವೇಳೆ ನಗರಸಭೆ ಆವರಣದಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು. ಅಧಿಕಾರಿಗಳು ಸೇರಿ 200 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

ಪ್ರದೀಪ್ ಈಶ್ವರ್ ಕೆಂಡಾಮಂಡಲ ; ಪ್ರತಿಜ್ಞೆ!!
ಅಧಿಕಾರ ಕಳೆದುಕೊಂಡ ಬಳಿಕ ಕೆಂಡಾಮಂಡಲವಾದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಏಕವಚನದಲ್ಲೇ ಡಾ.ಸುಧಾಕರ್ ವಿರುದ್ಧ ಕಿಡಿ ಕಾರಿದರು. ‘ಅವನಪ್ಪ ಬಂದರೂ ನನ್ನನ್ನೂ ಏನೂ ಮಾಡಲು ಆಗುವುದಿಲ್ಲ. ಅವನ ಕೋಟೆಯಲ್ಲೇ ಅವನನ್ನು ಹೊಡೆದಿದ್ದೇನೆ. ಕೋವಿಡ್ ಕಳ್ಳನನ್ನು ಜೈಲಿಗೆ ಕಳುಹಿಸದೆ ವಿರಮಿಸುವುದಿಲ್ಲ’ ಎಂದು ಕಿಡಿ ಕಾರಿದರು.

ನಗರಸಭೆ ಚುನಾವಣೆಗೆ 7-8 ಕೋಟಿ ರೂಪಾಯಿ ಖರ್ಚು ಮಾಡಿ ಕಾಂಗ್ರೆಸ್ ಸದಸ್ಯರನ್ನು ಖರೀದಿ ಮಾಡಲಾಗಿದೆ. ಹೆಣಗಳ ಮೇಲೆ ದುಡ್ಡು ಮಾಡಿ ನಗರಸಭೆ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಸುಧಾಕರ್ ಹರ್ಷ
‘ಅಧಿಕಾರ ಸಿಕ್ಕಿರುವುದು ಖಚಿತವಾಗುತ್ತಿದಂತೆ ಮಾತನಾಡಿದ ಡಾ.ಸುಧಾಕರ್ ‘ನಮ್ಮ ಸದಸ್ಯರನ್ನು ಕಾಂಗ್ರೆಸ್‌ನವರು ಹೈಜಾಕ್ ಮಾಡಲು ಭಾರೀ ಪ್ರಯತ್ನ ಮಾಡಿದರು. ಪ್ರದೀಪ್ ಈಶ್ವರ್ ಉಡಾಫೆ ಮಾತುಗಳು, ದ್ವೇಷದ ರಾಜಕಾರಣ ನನಗೆ ಹೂಮಾಲೆಯಾಗಿ ನನ್ನ ಕೊರಳಿಗೆ ಬಿದ್ದಿದೆ. ಇನ್ನೂ ಮೂರು ವರ್ಷ ಹೀಗೆ ಮಾಡಲಿ ಆಮೇಲೆ ರಾಜ್ಯ, ದೇಶದಲ್ಲಿ ಎಲ್ಲೂ ಅವರಿಗೆ ಅವಕಾಶ ಇಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next