Advertisement

ಮುನಿಯಾಲು ಪೇಟೆಯಲ್ಲಿ ಶೌಚಾಲಯದ ಕೊರತೆ : ದಶಕಗಳ ಮನವಿಗೆ ಸಿಕ್ಕಿಲ್ಲ ಸ್ಪಂದನೆ

02:18 AM Apr 18, 2021 | Team Udayavani |

ಅಜೆಕಾರು: ನಾಲ್ಕು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದ ವರಂಗ ಪಂಚಾಯತ್‌ನ ಪ್ರಮುಖ ಪೇಟೆ ಮುನಿಯಾಲಿನಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲ ಎಂದರೆ ನಂಬಲೇ ಬೇಕು! ಅಭಿವೃದ್ಧಿ ಹೊಂದುತ್ತಿರುವ ಮುನಿಯಾಲು ಪೇಟೆಯಲ್ಲಿ ಶೌಚಾಲಯ ಅತ್ಯವಶ್ಯವಾಗಿದ್ದು, ಪೇಟೆಗೆ ಬಂದವರು ಬಹಿರ್ದೆಸೆಗೆ ಪರದಾಡಬೇಕಾಗಿದೆ.

Advertisement

ಜನರ ಬವಣೆ
ವ್ಯವಹಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುನಿಯಾಲು ಪೇಟೆಯನ್ನು ಅವಲಂಬಿಸಿರುವುದರಿಂದ ಜನನಿಬಿಡವಾಗಿಯೂ ಇದೆ. ಮುನಿಯಾಲಿನಲ್ಲಿ ಸರಕಾರಿ ವಿದ್ಯಾ ಸಂಸ್ಥೆಗಳಲ್ಲಿ ಎಲ್‌ಕೆಜಿಯಿಂದ ಪದವಿ ತನಕ ಶಿಕ್ಷಣ ದೊರೆಯುತ್ತಿದ್ದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಮುನಿಯಾಲಿಗೆ ಬರು ತ್ತಾರೆ. ಜತೆಗೆ ವಿದ್ಯಾರ್ಥಿಗಳ ಹೆತ್ತವರೂ ಆಗಿಂದಾಗ್ಗೆ ಬರುವುದಿದೆ. ಆಟೋ ಚಾಲಕರು, ಬಸ್‌ ನಿರ್ವಾಹಕ, ಚಾಲಕರೂ ಮುನಿಯಾಲಿಗೆ ಬಂದು ಹೋಗುತ್ತಾರೆ. ಆದರೆ ಶೌಚಾಲಯ ಇಲ್ಲದಿರುವುದರಿಂದ ಬಯಲು ಪ್ರದೇಶವನ್ನೇ ಆಶ್ರಯಿಸುತ್ತಾರೆ.

ಸಂತೆಗೆ ಬಂದವನ ಪಾಡು
ಪ್ರತಿವಾರ ನಡೆಯುವ ವಾರದ ಸಂತೆಗೂ ಸುತ್ತಲ ಗ್ರಾಮಗಳಿಂದ ಬರುವ ಜನರ ಸಂಖ್ಯೆ ಹೆಚ್ಚಾಗುತ್ತಿದ್ದು ಮುನಿಯಾಲಿಗೆ ಬರುವ ಪ್ರತಿಯೋರ್ವರೂ ಮೂತ್ರ ವಿಸರ್ಜನೆಗೆ ರಸ್ತೆ ಬದಿಯನ್ನೇ ಆಶ್ರಯಿಸ ಬೇಕಾಗಿದೆ ಎಂದು ಸಂತೆ ವ್ಯಾಪಾರಸ್ಥರು ಹೇಳುತ್ತಾರೆ.

ಸ್ವತ್ಛ ತೆ ಅಸಾಧ್ಯ
ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಚತೆ ಕಾಪಾಡುವುದು ಪ್ರತಿಯೋರ್ವರ ಕರ್ತವ್ಯ. ಆದರೆ ಅನಿವಾರ್ಯವಾಗಿ ಇಲ್ಲಿ ಸ್ವತ್ಛತೆ ಅಸಾಧ್ಯವಾಗಿದೆ. ಬಯಲು ಶೌಚ ಮುಕ್ತ ಆಂದೋಲನ ದೇಶದೆಲ್ಲಡೆ ನಡೆಯುತ್ತಿದ್ದರೂ ಇಲ್ಲಿ ಶೌಚ ಮುಕ್ತ ಆಗುವುದು ಅಸಾಧ್ಯವಾಗಿದೆ ಎಂದು ಜನರು ಹೇಳುತ್ತಾರೆ.

ಅನುದಾನ ಬೇರೆಡೆಗೆ ಸ್ಥಳಾಂತರ
ಕಳೆದ ಕೆಲ ವರ್ಷಗಳ ಹಿಂದೆ ಮುನಿಯಾಲಿನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುವ ಬಗ್ಗೆ ಅನುದಾನ ಬಿಡುಗಡೆ ಆಗಿತ್ತಾದರೂ ಪೇಟೆಯ ನಿವಾಸಿಗಳ ವಿರೋಧದ ಹಿನ್ನಲೆಯಲ್ಲಿ ಅದನ್ನು ಮೂಡು ಕುಡೂರು ಗರಡಿ ಬಳಿಗೆ ಸ್ಥಳಾಂತರಿಸಿ ನಿರ್ಮಾಣ ಮಾಡಲಾಗಿದೆ. ಇದು ಪೇಟೆಯಿಂದ ಸುಮಾರು 2 ಕಿ.ಮೀ. ದೂರವಿದ್ದು ಯಾವುದೇ ಪ್ರಯೋಜನ ಇಲ್ಲವಾಗಿದೆ.

Advertisement

ದಶಕಗಳಿಂದ ಮನವಿ
ಪೇಟೆಯಲ್ಲಿ ಶೌಚಾಲಯ ಮತ್ತು ಮೂಲಸೌಕರ್ಯ ವೃದ್ಧಿಗೆ ಜನರು ದಶಕಗಳಿಂದ ಮನವಿ ಮಾಡುತ್ತಲೇ ಬರುತ್ತಿದ್ದಾರೆ. ಗ್ರಾಮಸಭೆಗಳಲ್ಲೂ ಈ ವಿಚಾರ ಸಂಬಂಧ ನಿರ್ಣಯ ಕೈಗೊಳ್ಳಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂಬ ಆಗ್ರಹ ಜನರದ್ದಾಗಿದೆ.

ಸೂಕ್ತ ಕ್ರಮ
ಮುನಿಯಾಲಿನಲ್ಲಿ ಸಾರ್ವಜನಿಕ ಶೌಚಾಲಯ ಅಗತ್ಯ. ಈ ನಿಟ್ಟಿನಲ್ಲಿ ಸ್ಥಳೀಯರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಉಷಾ ಹೆಬ್ಟಾರ್‌, ಅಧ್ಯಕ್ಷರು, ವರಂಗ ಗ್ರಾ.ಪಂ.

ಸ್ಥಳದ ಕೊರತೆ
ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲು ಪೇಟೆಯಲ್ಲಿ ಸೂಕ್ತ ಸ್ಥಳದ ಕೊರತೆ ಇದ್ದು ಸೂಕ್ತ ಸ್ಥಳ ಗುರುತಿಸಿದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು.
-ವಿಜಯ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ವರಂಗ ಗ್ರಾ.ಪಂ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next