ಕುಳಗೇರಿ ಕ್ರಾಸ್: ಬಾಗಲಕೋಟೆ ಜಿಲ್ಲೆ ಗಡಿ ಭಾಗದ ಮಲಪ್ರಭಾ ನದಿಯ ಅಂಚಿನಲ್ಲಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಗೋವನಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯದ್ದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ನಮಗೆ ಕೊಠಡಿಗಳನ್ನು ಕಟ್ಟಿ ಕೊಡದಿದ್ದರೂ ಪರವಾಗಿಲ್ಲ. ಬೇಕಾದರೆ ಬಯಲಲ್ಲೇ ಓದುತ್ತೇವೆ. ಮಾತ್ರ ಶೌಚಾಲಯ ನಿರ್ಮಿಸಿ ಕೊಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.
ಹೌದು ಈ ಪ್ರೌಢಶಾಲೆಯಲ್ಲಿ ಸುಮಾರು ವರ್ಷಗಳಿಂದ ಶೌಚಾಲಯ ಸಮಸ್ಯೆ ಇದೆ ಎಂಬುದು ಎಲ್ಲ ಅಧಿಕಾರಿಗಳಿಗೂ ತಿಳಿದಿರುವ ವಿಷಯ. ಹಾಗಂತ ವಿದ್ಯಾರ್ಥಿನಿಯರು ಸಹ ಸುಮ್ಮನಿಲ್ಲ. ಶಾಲೆಗೆ ಭೆಟಿ ನೀಡುವ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಪ್ರತಿಭಾರಿ ಸಾಕಷ್ಟು ಮನವಿ ಮಾಡಿಕೊಂಡು ಅಂಗಲಾಚಿ ಬೇಡಿದರೂ ಪ್ರಯೋಜನ ಇಲ್ಲದಂತಾಗಿದೆ. ಕಂಡು-ಕಾಣದಂತೆ ಕೇಳಿಯೂ-ಕೇಳದಂತೆ ಸಂಬಂದಿಸಿದವರು ಮಾತ್ರ ಮೌನವಾಗಿದ್ದಾರೆ.
ಈ ಪ್ರೌಢಶಾಲೆಯಲ್ಲಿ ಇನ್ನೂರಕ್ಕೂ ಹೆಚ್ಚು ಹೆಣ್ಣುಮಕ್ಕಳು ಓದುತ್ತಾರೆ. ಶೌಚಾಲಯ ಇಲ್ಲದ ಕಾರಣ ಶಾಲಾ ಹಿಂಬಾಗದಲ್ಲಿರುವ ಮೈದಾನವೇ ಬಾಲಕಿಯರಿಗೆ ಶೌಚಾಲಯ ಸ್ಥಳವಾಗಿದೆ. ಪ್ರಾಣವನ್ನೂ ಲೆಕ್ಕಿಸದೆ ಹೆಣ್ಣುಮಕ್ಕಳು ಗಿಡ-ಗಂಟಿಗಳ ಪೊದೆಯಲ್ಲಿ ಮುಳ್ಳು-ಕಂಟಿಗಳ ಮಧ್ಯೆ ನೈಸರ್ಗಿಕ ಕ್ರಿಯೆ ಮುಗಿಸಿಕೊಳ್ಳುತ್ತಾರೆ. ಶಾಲಾ ಮೈದಾನ ಶೌಚಾಲಯವಾಗಿದ್ದರಿಂದ ಪಾಠ ಕೇಳುವ ಕೊಠಡಿಗಳು ದುರ್ವಾಸನೆ ಬೀರುತ್ತಿವೆ.
ಇನ್ನು ಇಲ್ಲಿ ಓದುತ್ತಿರುವ ಗಂಡು ಮಕ್ಕಳಿಗೂ ಬಯಲು ಶೌಚಾಲಯ ಕಾಯಂ. ಹಾಗಂಥ ಸರಳವಾಗಿ ತಿಳಿಯಬೇಡಿ. ಇವರೂ ಕೂಡಾ ಓಡಾಡುವ ಗ್ರಾಮಸ್ಥರನ್ನು ಅತ್ತ-ಇತ್ತ ನೋಡಿಕೊಂಡು ಶೌಚ ಮುಗಿಸುವ ಪರಿಸ್ಥಿತಿ ಇದೆ.
ಒಂದಲ್ಲ ಎರಡಲ್ಲ ಇಲ್ಲಿ ಓದುತ್ತಿರುವ ಮಕ್ಕಳಿಗೆ ಮೂಲ ಸೌಕರ್ಯಗಳ ಸಮಸ್ಯೆ ಜೊತೆಗೆ ಶಿಥಿಲಗೊಂಡ ಕಟ್ಟಡಗಳು, ಕೊಠಡಿಗಳ ಕೊರತೆ, ಕುಳಿತುಕೊಳ್ಳುವ ಆಸನಗಳು ಸೇರಿದಂತೆ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ಮಕ್ಕಳು ಓದುವುದೇ ದೊಡ್ಡ ಸವಾಲಾಗಿದೆ.
ಪ್ರತಿ ವರ್ಷ ಹೆಣ್ಣುಮಕ್ಕಳು ಈ ಶಾಲೆಯಲ್ಲಿನ ಸಮಸ್ಯೆ ಹೇಳಿಕೊಳ್ಳುತ್ತಾರೆ…ಆದರೇ ಕೇಳುವವರೇ ಇಲ್ಲ. ಈ ಬಾರಿಯಾದರೂ ನಮ್ಮ ಸಮಸ್ಯೆ ಕೇಳಿಸಿಕೊಳ್ಳಿ, ಒಂದು ಸಲ ಯೋಚಿಸಿ ಹೆಣ್ಣು ಮಕ್ಕಳ ಸಮಸ್ಯೆ ಹೇಗಿರುತ್ತೆ ಎಂದು. ನಾವು ಸಹ ನಿಮ್ಮ ಮನೆಯ ಹೆಣ್ಣುಮಕ್ಕಳೇ ಎಂದು ಭಾವಿಸಿ ಎಂದು ಬಾಲಕಿಯರು ಪತ್ರಿಕೆಗೆ ತಿಳಿಸುವ ಮೂಲಕ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಸಂಬಂಧಿಸಿದ ಅದಿಕಾರಿಗಳು ಈ ಕಡೆ ಗಮನ ಕೊಡುತ್ತಾರಾ ಈ ಪ್ರೌಢಶಾಲೆ ಸಮಸ್ಯೆ ಬಗೆ ಹರಿಸುತ್ತಾರಾ ಕಾದುನೋಡಬೇಕಿದೆ.
ಗಂಡು ಮಕ್ಕಳು ಶೌಚಕ್ಕೆ ಎಲ್ಯಾರ ಹೋಗಬಹುದು. ಹೈಸ್ಕೂಲ್ ಅಂದ್ರ ಹೆಣ್ಮಕ್ಕಳ ದೊಡ್ಡಾರ ಇರ್ತಾರ ಬಯಲಾಗ ಹೆಂಗ ಒಂದಕ್ಕ ಹೋಗಬೇಕ ಹೇಳ್ರಿ. ಶಾಲೆಯ ಸುತ್ತ ಅಕ್ಕ-ಪಕ್ಕ ರಸ್ತೆ ಐತಿ. ಮಂದಿ ಓಡಾಡ್ತಾರ. ಮುಳ್ಳು ಕಂಠಿ ಮದ್ಯೆ ಹೆಣ್ಣಮಕ್ಕಳು ಮುಜುಗರದಿಂದ ಶೌಚಕ್ಕ ಹೋಗಬೇಕು. ಆದಷ್ಟು ಬೇಗ ಶೌಚಾಲಯ ನಿರ್ಮಿಸಿಕೊಡ್ರಿ.
-ಪ್ರವೀಣ ಮೇಟಿ, ಸ್ಥಳಿಯ ಪಿಕೆಪಿಎಸ್ ಸದಸ್ಯರು ಗೋವನಕೊಪ್ಪ.
ಈಗಾಗಲೇ ಮಾಹಿತಿ ಪಡೆದಿದ್ದೇನೆ ಶೌಚಾಲಯ ನಿರ್ಮಿಸುವಂತೆ ತಿಳಿಸಿದ್ದೇನೆ. ಸದ್ಯದಲ್ಲಿ ಶಾಲೆಗೆ ಭೇಟಿ ನೀಡಿ ಕಟ್ಟಡ ಸೇರಿದಂತೆ ಮೂಲಸೌಲಭ್ಯಗಳ ಕುರಿತು ಮಾಹಿತಿ ಪಡೆಯುತ್ತೇನೆ.
-ಬಾದಾಮಿ ಬಿಇಒ ಎನ್ ವೈ ಕುಂದರಗಿ.
ಸರ್ಕಾರಿ ಶಾಲೆಗಳ ಮೂಲ ಸೌಲಭ್ಯ ಕುರಿತು ಮಾಹಿತಿ ಪಡೆಯುತ್ತಿದ್ದೇನೆ. ಈಗಾಗಲೇ ತಾಲೂಕಿನಲ್ಲಿ ಶಿಥಿಲಗೊಂಡ ಅಂಗನವಾಡಿ ಸರ್ಕಾರಿ ಶಾಲೆ ಕಟ್ಟಡ ರಿಪೇರಿ ಮಾಡಿಸಲಾಗುತ್ತಿದೆ. ಸಾಕಷ್ಟು ಸಮಸ್ಯೆಗಳು ಇವೆ ಕಾರಣ ಹಂತ-ಹಂತವಾಗಿ ಸಮಸ್ಯೆಗಳನ್ನ ಬಗೆಹರಿಸುತ್ತೆನೆ.
-ಬಾದಾಮಿ ಶಾಸಕರು ಭೀಮಸೇನ ಚಿಮ್ಮನಕಟ್ಟಿ.
-ಮಹಾಂತಯ್ಯ.ಹಿರೇಮಠ