Advertisement

ಚೆಂಬು ಹಿಡಿದವರ ಕೈಗೆ ಹೂ ನೀಡಿ ಜಾಗೃತಿ!

05:23 PM Jul 26, 2018 | Team Udayavani |

ಹಾವೇರಿ: ನೀವು ಚೆಂಬು ಹಿಡಿದು ಬಯಲಿಗೆ (ಬಹಿರ್ದೆಸೆಗೆ) ಹೋದರೆ ಸೀಟಿ ಹೊಡೆಯುತ್ತಾರೆ, ಜತೆಗೆ ನಿಮಗೊಂದು ಹೂ ಕೊಟ್ಟು ಬಯಲು ಬಹಿರ್ದೆಸೆ ಬೇಡ ಎಂದು ತಿಳಿವಳಿಕೆ ನೀಡುತ್ತಾರೆ! ಇದು ಆಶ್ಚರ್ಯವೆನಿಸಿದರೂ ಸತ್ಯ. ಇಡೀ ಜಿಲ್ಲೆಯನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಮನೆಗೊಂದು ಶೌಚಾಲಯ ಕಟ್ಟಿ ಗುರಿ ಸಾಧಿಸಿರುವ ಜಿಲ್ಲಾಡಳಿತ, ಈಗ ಕಟ್ಟಿರುವ ಶೌಚಾಲಯಗಳು ಸಮರ್ಪಕ ಬಳಕೆಯಾಗುವಂತೆ ಮಾಡಲು ಈ ರೀತಿಯ ಕಾರ್ಯಕ್ರಮ ಹಾಕಿಕೊಂಡಿದೆ.

Advertisement

ಗ್ರಾಪಂ ಜನಪ್ರನಿಧಿಗಳು, ಆಶಾ, ಅಂಗನವಾಡಿ ಕಾರ್ಯಕರ್ತರು, ಸ್ವ-ಸಹಾಯ ಸಂಘದ ಸದಸ್ಯರ ಸಹಯೋಗದಲ್ಲಿ ಗುಂಪುಗಳನ್ನು ಮಾಡಿಕೊಂಡಿದ್ದು, ಈ ಗುಂಪು ಬೆಳ್ಳಂಬೆಳಗ್ಗೆ ಗ್ರಾಮಗಳಿಗೆ ತೆರಳಿ ಯಾರು ಚೆಂಬು ಹಿಡಿದು ಬಹಿರ್ದೆಸೆಗಾಗಿ ಬಯಲಿಗೆ ಹೋಗುತ್ತಿರುತ್ತಾರೋ ಅವರನ್ನು ಕಂಡ ಕೂಡಲೇ ಸೀಟಿ ಊದಿ ನಿಲ್ಲಿಸುತ್ತಾರೆ. ಜತೆಗೆ ಅವರಿಗೊಂದು ಹೂ ಕೊಟ್ಟು ಮನೆಯಲ್ಲಿರುವ ಶೌಚಾಲಯ ಬಳಸುವಂತೆ ಮನವೊಲಿಸುತ್ತಾರೆ.

ಶೇಕಡಾ ನೂರಕ್ಕೆ ನೂರರಷ್ಟು ಶೌಚಾಲಯ ಕಟ್ಟಿ ಇಡೀ ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆ ಮುಕ್ತ ಗುರಿ ಸಾಧಿಸಿರುವ ಜಿಲ್ಲಾಡಳಿತಕ್ಕೆ ಸರ್ಕಾರ ಈ ಬಾರಿ ಶೌಚಾಲಯ ಕಟ್ಟುವ ಗುರಿ ಕೈಬಿಟ್ಟು, ಕಟ್ಟಿರುವ ಶೌಚಾಲಯಗಳ ಸದ್ಬಳಕೆ ಹಾಗೂ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಸೂಚಿಸಿದೆ.

ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತವಾಗಿಸಲು ಜಿಲ್ಲಾಡಳಿತ ಕಳೆದೆರಡು ವರ್ಷಗಳಿಂದ ನಿರಂತರ ಆಂದೋಲನ ಹಮ್ಮಿಕೊಂಡಿತ್ತು. ಕಳೆದ ವರ್ಷವಂತೂ ಈ ಆಂದೋಲನಕ್ಕೆ ಚುರುಕು ಮುಟ್ಟಿಸಿ, ಗುರಿ ತಲುಪುವಲ್ಲಿ ಯಶಸ್ವಿಯಾಗಿದೆ. ಆದರೆ, ಇದು ವಾಸ್ತವದಲ್ಲಿ ಸಾಧನೆ ಎನಿಸದು. ಶೌಚಾಲಯ ಕಟ್ಟಡಗಳನ್ನು ಪ್ರತಿಯೊಬ್ಬರೂ ಬಳಸಿದಾಗಲೇ ಅದು ಯಶಸ್ವಿಯಾಗಲಿದೆ ಎಂಬುದನ್ನು ಅರಿತ ಜಿಲ್ಲಾಡಳಿತ, ಈಗ ಅವುಗಳ ಬಳಕೆಯತ್ತ ಕಾರ್ಯಕ್ರಮ ರೂಪಿಸಿದೆ.

1.95 ಲಕ್ಷ ಶೌಚಾಲಯ: 2012ರ ಬೇಸ್‌ಲೈನ್‌ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 1,95,974 ಕುಟುಂಬಗಳಿದ್ದು, ಇವುಗಳಲ್ಲಿ ಈ ವರೆಗೆ 1,95,974 ಕುಟುಂಬಗಳು ಶೌಚಾಲಯ ಹೊಂದಿವೆ. ಸಮೀಕ್ಷೆ ಮೊದಲು ಜಿಲ್ಲೆಯಲ್ಲಿ 63548 ಕುಟುಂಬಗಳು ಮಾತ್ರ ಶೌಚಾಲಯ ಹೊಂದಿದ್ದವು. ಈವರೆಗೆ ಹೊಸದಾಗಿ ಜಿಲ್ಲೆಯಲ್ಲಿ 1,32,426 ಶೌಚಾಲಯಗಳನ್ನು ಕಟ್ಟಲಾಗಿದ್ದು, ಎಲ್ಲ ಕುಟುಂಬಗಳು ಶೌಚಾಲಯ ಹೊಂದಿವೆ. ಎಲ್ಲ ಕುಟುಂಬಗಳ ಎಲ್ಲ ಸದಸ್ಯರು ಶೌಚಾಲಯ ಬಳಸಲು ಅರಿವು ಮೂಡಿಸಲಾಗುತ್ತಿದೆ. 

Advertisement

ದಾಸ್ತಾನು ಕೊಠಡಿ: ಜಿಲ್ಲೆಯಲ್ಲಿ ಮನೆಗೊಂದು ಶೌಚಾಲಯ ಕಟ್ಟಲಾಗಿದ್ದರೂ ಅನೇಕರು ಶೌಚಾಲಯ ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಮತ್ತೆ ಕೆಲವರು ಶೌಚಾಲಯಗಳನ್ನು ಕಟ್ಟಿಗೆ, ಹಾಳಾದ ವಸ್ತುಗಳ ದಾಸ್ತಾನು ಮಾಡಲು ಬಳಸುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಶೌಚಾಲಯ ಕಟ್ಟಡ ಬಳಕೆಯಾಗುವಂತೆ ಮಾಡಲು, ಜನರಿಗೆ ಶೌಚಾಲಯ ಬಳಕೆ ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ.

ಜಿಲ್ಲೆಯ 224 ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಎಲ್ಲ 698 ಹಳ್ಳಿಗಳನ್ನು ಜಿಲ್ಲಾಡಳಿತ ಬಯಲು ಬಹಿರ್ದೆಸೆಮುಕ್ತ ಮಾಡಿದೆ. ಜಿಲ್ಲಾಡಳಿತದ ಈ ಕಾರ್ಯ ಮೆಚ್ಚಿ ಇತ್ತೀಚೆಗೆ ಪರಿಸರ ಇಲಾಖೆ ಜಿಲ್ಲಾಡಳಿತಕ್ಕೆ ‘ಪರಿಸರ’ ಪ್ರಶಸ್ತಿ ನೀಡಿರುವುದು ಇಲ್ಲಿ ಸ್ಮರಣೀಯ.

ಹೂ ಕೊಟ್ಟು ಅರಿವು ಪಾಠ
ಜಿಲ್ಲೆಯ ಎಲ್ಲ 698 ಹಳ್ಳಿಗಳನ್ನು ಜಿಲ್ಲಾಡಳಿತ ಬಯಲು ಬಹಿರ್ದೆಸೆಮುಕ್ತವಾಗಿಸಲು ಶೌಚಾಲಯಗಳನ್ನು ಕಟ್ಟಲಾಗಿದೆ. ಹೀಗಾಗಿ ಇಲಾಖೆ ಈ ವರ್ಷ ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ನೀಡಿಲ್ಲ. ಬದಲಾಗಿ ಜಿಲ್ಲೆಯಲ್ಲಿ 100 ಸಮುದಾಯ ಶೌಚಾಲಯ, ಗ್ರಾಪಂಗಳಲ್ಲಿ 80 ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಗುರಿ ನೀಡಿದೆ. ಕಟ್ಟಿರುವ ಶೌಚಾಲಯ ಬಳಕೆ, ನಿರ್ವಹಣೆಯತ್ತ ಗಮನಹರಿಸಲು ಸೂಚಿಸಿದ್ದು, ಇದಕ್ಕಾಗಿ ಸ್ಥಳೀಯರ ಸಹಕಾರದೊಂದಿಗೆ ಹೂ ಕೊಡುವುದು, ಸೀಟಿ ಊದುವುದು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ.
 ಬಿ. ಗೋವಿಂದರಾಜ್‌, ಜಿಲ್ಲಾ
ಸಮಾಲೋಚಕರು, ಸ್ವಚ್ಛಭಾರತ್‌ ಮಿಷನ್‌

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next