ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ “ಮಾತುಕತೆ ವಿನಯ್ ಜೊತೆ’ ಎಂಬ ಹೆಸರಿನ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದಿದ್ದ, ಸದ್ಯ ಸಿಂಗಪೂರ್‌ನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗ ನಿರೂಪಕ ವಿನಯ್ ಭಾರದ್ವಾಜ್ ಈಗ ಚಿತ್ರ ನಿರ್ದೇಶಕನಾಗಿ ಪರಿಚಯವಾಗುತ್ತಿದ್ದಾರೆ. ಸಿಂಗಪೂರ್‌ನಲ್ಲಿ ಕೆಲಸ ಮಾಡುತ್ತಿರುವ ವಿನಯ್ ಭಾರದ್ವಾಜ್, ಸಮಯ ಸಿಕ್ಕಾಗಲೆಲ್ಲಾ ಕರ್ನಾಟಕಕ್ಕೆ ಬಂದು ಕನ್ನಡಪರ ಕೆಲಸಗಳನ್ನು ಮಾಡುತ್ತಿದ್ದರು. ಇನ್ನು ತಮ್ಮ ಜೊತೆಗಿನ ಸಂದರ್ಶನದಲ್ಲಿ ಚಿತ್ರತಾರೆಯರು, ಕಲಾವಿದರ ಮನದಾಳದ ಕೆಲವು ಮಾತುಗಳನ್ನು ಹೆಕ್ಕಿಕೊಂಡು “ಮುಂದಿನ ನಿಲ್ದಾಣ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ.
ಈ ಚಿತ್ರಕ್ಕೆ ವಿನಯ್ ಭಾರದ್ವಾಜ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಪ್ರೇಮ, ಸ್ನೇಹ-ಸಂಬಂಧಗಳು, ವೃತ್ತಿ ಜೀವನ ಮತ್ತು ಭಾವನೆಗಳನ್ನು ಪ್ರಚೋದಿಸುವಂತಹ ಆಧುನಿಕ ಜೀವನದ ಕಥೆ ಈ ಚಿತ್ರದಲ್ಲಿದ್ದು, ಮೂರು ಪಾತ್ರಗಳ ಮೂಲಕ ಚಿತ್ರದ ಕಥೆ ತೆರೆದುಕೊಳ್ಳಲಿದೆಯಂತೆ. “ಈ ಮೂರೂ ಪಾತ್ರಗಳೂ ಒಂದೊಂದು ವರ್ಗವನ್ನು ಪ್ರತಿನಿಧಿಸಲಿದ್ದು, ಅವುಗಳ ಪ್ರಯಾಣ ಹೇಗಿರುತ್ತದೆ? ಇದರಲ್ಲಿ ಯಾವುದು ಸರಿ? ಯಾವುದು ತಪ್ಪು? ಎನ್ನುವುದನ್ನು ನೋಡುಗರ ಯೋಚನೆಗೆ ಬಿಡಲಾಗಿದೆ. ಈಗಿನ ತಲೆಮಾರಿನವರು ಏನು ಮಾಡುತ್ತಿ¨ªಾರೆ ಎಂಬುದನ್ನು ರಿಯಾಲಿಟಿಯಲ್ಲಿ ಹೇಳಲಾಗುವುದು’ ಎನ್ನುತ್ತಾರೆ ವಿನಯ್ ಭಾರದ್ವಾಜ್. ಇತ್ತೀಚೆಗೆ ಮುಂದಿನ ನಿಲ್ದಾಣ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಚಿತ್ರದ ಕೆಲವು ವಿಶೇಷತೆಗಳ ಕುರಿತು ಮಾತನಾಡಿತು.
ಇಂದಿನ ಜನರೇಷನ್‌ಗೆ ಹೊಂದುವ ಸೂಕ್ಷ್ಮ ವಿಷಯ ಈ ಚಿತ್ರದಲ್ಲಿರಲಿದ್ದು, ನೋಡುಗರಿಗೆ ಎಲ್ಲೂ ಬೋರ್ ಹೊಡೆಸದಂತೆ ಒಂದಷ್ಟು ಮನರಂಜನಾತ್ಮಕ ಅಂಶಗಳನ್ನು ಇಟ್ಟುಕೊಂಡು, ಕಮರ್ಷಿಯಲ್ ಫಾರ್ಮೆಟ್‌ನಲ್ಲಿಯೇ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್‌ಗೆ ಪ್ಲಾನ್ ಮಾಡಿಕೊಳ್ಳಲಾಗಿದ್ದು, ಮುಂದಿನ ಏಪ್ರಿಲ್ ವೇಳೆಗೆ ಚಿತ್ರವನ್ನು ಪ್ರೇಕ್ಷಕರಿಗೆ ತೋರಿಸುವ ಯೋಜನೆ ಹಾಕಿಕೊಂಡಿದೆ.
“ಮುಂದಿನ ನಿಲ್ದಾಣ’ ಚಿತ್ರದಲ್ಲಿ ನಾಯಕನಾಗಿ ಪ್ರವೀಣ್ ತೇಜ್ ಮೂರು ಗೆಟಪ್‌ನ ಪಾತ್ರಗಳಲ್ಲಿ ಕಾಣಿಸಿಕೊಂಡರೆ, ನಾಯಕಿ ರಾಧಿಕಾ ಚೇತನ್ ಕುಂಚ ಕಲಾವಿದೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ನವಪ್ರತಿಭೆ ಅನನ್ಯ ಕಶ್ಯಪ್ ಇಂದಿನ ಯುವಜನತೆ ಏನು ಯೋಚನೆ ಮಾಡುತ್ತಾರೆ ಅದನ್ನು ಬಿಂಬಿಸುವ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಐದು ಜನ ಸಂಗೀತ ನಿರ್ದೇಶಕರು ಹಾಡುಗಳಿಗೆ ರಾಗ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಅಭಿಮನ್ಯು ಸದಾನಂದ ಛಾಯಾಗ್ರಹಣ, ಕಿರಣ್ ಕಾವೇರಪ್ಪ ಸಾಹಿತ್ಯ ಇದೆ. ಇಂಗ್ಲೆಂಡ್‌ನಲ್ಲಿರುವ ವೈದ್ಯ ಸುರೇಶ್, ದುಬೈ ವಾಸಿ ತಾರನಾಥ ರೈ, ಸಿಂಗಪೂರ್ ವಾಸಿ ಶೇಷ್ ಮತ್ತು ಬೆಂಗಳೂರು ನಿವಾಸಿ ಮುರಳಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.