ಶೃಂಗೇರಿ: ರಾಜ್ಯದಲ್ಲಿ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಶೃಂಗೇರಿ ಶಾರದಾಂಬೆಗೆ ಬುಧವಾರ ವಿಶೇಷ ಪೂಜೆ ಸಲ್ಲಿಸಿದರು. ಬುಧವಾರ ಹೆಲಿಕಾಪ್ಟರ್‌ನಲ್ಲಿ ಕೊರಡಕಲ್ಲಿಗೆ ಬಂದ ಸಚಿವರು, ಶೃಂಗೇರಿ ಪೀಠಕ್ಕೆ ಆಗಮಿಸಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ, ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥರು, ಕಿರಿಯ ಶ್ರೀಗಳಾದ ವಿಧುಶೇಖರ ಶ್ರೀಗಳ ಆಶೀರ್ವಾದ ಪಡೆದರು. ಸಂಜೆ ಕೊಪ್ಪ ತಾಲೂಕಿನ ಗೌರಿಗದ್ದೆಗೆ ಆಗಮಿಸಿ, ವಿನಯ ಗುರೂಜಿ ಅವರ ಆಶೀರ್ವಾದ ಪಡೆದರು. ಇದೇ ವೇಳೆ, ಶ್ರೀಗಳ ಜೊತೆ ಸಮಾಲೋಚನೆ ನಡೆಸಿದರು.
ಈ ಮಧ್ಯೆ, ಮಳೆ ದೇವರೆಂದೇ ಕರೆಯಲ್ಪಡುವ ಕಿಗ್ಗಾದ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಗುರುವಾರ ವಿವಿಧ ಪೂಜಾದಿಗಳು ನಡೆಯಲಿದ್ದು, ಡಿ.ಕೆ.ಶಿವಕುಮಾರ್ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಂದು ವಿಶೇಷ ಪೂಜೆ: ಶಾರದಾಂಬೆಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, “ರಾಜ್ಯದಲ್ಲಿ ಭೀಕರ ಬರ ತಲೆದೋರಿರುವ ಹಿನ್ನೆಲೆಯಲ್ಲಿ ಮಳೆಗಾಗಿ ದೇವರನ್ನು ಪ್ರಾರ್ಥಿಸಲು ಗುರುವಾರ ಕಿಗ್ಗಾಕ್ಕೆ ತೆರಳುತ್ತಿದ್ದೇನೆ. ಉತ್ತಮ ಮಳೆಯಾಗಲೆಂದು ಜೂ.6ರಂದು ರಾಜ್ಯದ ಹಲವೆಡೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ.
ಗುರುವಾರ ಬೆಳಗ್ಗೆ ಕಿಗ್ಗಾದಲ್ಲಿರುವ ಶ್ರೀ ಶಾಂತಾ ಸಮೇತ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪರ್ಜನ್ಯ ಜಪ, ಪರ್ಜನ್ಯ ಹೋಮ ನಡೆಯಲಿದೆ. ಸರಕಾರದ ಪ್ರತಿನಿಧಿ ಯಾಗಿ ಮುಜರಾಯಿ ಸಚಿವ ಟಿ.ಪಿ.ಪರಮೇಶ್ವರ ನಾಯ್ಕ ಜೊತೆ ಭಾಗವಹಿಸುತ್ತಿದ್ದೇನೆ. ಈ ಹಿಂದೆ ಇಂಧನ ಸಚಿವನಾಗಿದ್ದಾಗಲೂ ಮೂರು ಬಾರಿ ಕಿಗ್ಗಾದಲ್ಲಿ ಪೂಜೆ ಸಲ್ಲಿಸಿದ್ದೆ.
ಅದರಂತೆ ರಾಜ್ಯದಲ್ಲಿ ಉತ್ತಮ ಮಳೆಯಾಗಿತ್ತು’ ಎಂದು ತಿಳಿಸಿದರು. ಇದಕ್ಕೂ ಮೊದಲು ಕೊರಡಕಲ್ಲು ಹೆಲಿಪ್ಯಾಡಿಗೆ ಆಗಮಿಸಿದ ಸಚಿವರು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.
ಪರ್ಜನ್ಯ ಹೋಮಕೆ ವಿರೋಧ: ಸರ್ಕಾರದ ವತಿಯಿಂದ ನಡೆಸುತ್ತಿರುವ ಪರ್ಜನ್ಯ ಹೋಮವನ್ನು ಅಖೀಲ ಕರ್ನಾಟಕ ವಿಚಾರವಾದಿಗಳ ಸಂಘ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವಿರೋಧಿಸಿವೆ. ಮಳೆಗಾಗಿ ಸರ್ಕಾರ ನಡೆಸುತ್ತಿರುವ ವಿಶೇಷ ಪೂಜೆ ವಿರುದ್ಧ ಚಾಮರಾಜಪೇಟೆಯ ಮುಜರಾಯಿ ಇಲಾಖೆ ಆಯುಕ್ತರ ಕಚೇರಿ ಎದುರು ಎರಡೂ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.