Advertisement

ಇಂದಿನ ಮತದಾನಕ್ಕೆ ಮಳೆರಾಯ ಅಡ್ಡಿ ಸಾಧ್ಯತೆ!

11:29 PM Apr 17, 2019 | Team Udayavani |

ಬೆಂಗಳೂರು: ಬಿರು ಬೇಸಿಗೆಯ ನಡುವೆ ಬುಧವಾರದ ಮಳೆ ರಾಜ್ಯದ ಜನತೆಗೆ ತಂಪೆರೆದಿದ್ದು, ಗುರುವಾರವೂ ಮಳೆ ಮುಂದುವರಿಯುವ ಹಿನ್ನೆಲೆಯಲ್ಲಿ ಮತದಾರರು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯಾಹ್ನದೊಳಗೆ ಮತದಾನದ ಹಕ್ಕು ಚಲಾಯಿಸುವುದು ಉತ್ತಮ.

Advertisement

ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಗುರುವಾರ ಲೋಕಸಭಾ ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಮಳೆರಾಯ ಅಡ್ಡಿಪಡಿಸುವ ಸಾಧ್ಯತೆಯಿದೆ. ಮಧ್ಯಾಹ್ನ 3 ಗಂಟೆ ನಂತರ ಚುನಾವಣೆ ನಡೆಯಲಿರುವ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಬೆಳಗ್ಗೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಉತ್ತಮ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಒಳನಾಡಿನ ಹಲವು ಜಿಲ್ಲೆಗಳಲ್ಲಿ ಕಳೆದ ಹಲವು ದಿನಗಳಿಂದ ಮಳೆಯಾಗುತ್ತಿದ್ದು, ಬುಧವಾರ ತಮಿಳುನಾಡಿಗೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಗುರುವಾರವೂ ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗಗಳಲ್ಲಿ ಗುಡುಗು, ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನಿಂದ ಕನ್ಯಾಕುಮಾರಿಯವರೆಗೆ ನಿರ್ಮಾಣವಾಗಿರುವ ಕಡಿಮೆ ಒತ್ತಡದ ತಗ್ಗು (ಟ್ರಫ್) ಹಾಗೂ ಮೇಲ್ಮೆ„ ಸುಳಿಗಾಳಿಯ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಅದರಲ್ಲಿಯೂ ತಮಿಳುನಾಡಿಗೆ ಹತ್ತಿರವಿರುವ ಆನೇಕಲ್‌, ರಾಮನಗರ, ಕೋಲಾರ, ಚಾಮರಾಜನಗರ, ಬೆಂಗಳೂರು,

ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಗುರುವಾರ ಮಧ್ಯಾಹ್ನ ನಂತರ ಈ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದರು.

Advertisement

ಎಲ್ಲೆಲ್ಲಿ,ಎಷ್ಟು ಮಳೆ?: ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಜೋರು ಗಾಳಿಯೊಂದಿಗೆ ಆರಂಭವಾದ ಮಳೆಯಿಂದಾಗಿ ಹತ್ತಾರು ಮರಗಳು ಧರೆಗುರುಳಿದ್ದು, ಚಾಮರಾಜನಗರದಲ್ಲಿ 34.50 ಹಾಗೂ ಬೆಂಗಳೂರು ನಗರದಲ್ಲಿ 24.50 ಮಿಲಿ ಮೀಟರ್‌ ಮಳೆಯಾಗಿದೆ.

ಉಳಿದಂತೆ ಬೆಂಗಳೂರು ಗ್ರಾಮಾಂತರ 20.50, ರಾಮನಗರ 26.50, ಕೋಲಾರ 12.50, ಚಿಕ್ಕಬಳ್ಳಾಪುರ 17.50, ತುಮಕೂರು 3, ಚಾಮರಾಜನಗರ 34.50, ಮೈಸೂರು 7, ಮಂಡ್ಯ 6.60, ಬಳ್ಳಾರಿ 1.3, ಬೆಳಗಾವಿ 2.50, ಬಾಗಲಕೋಟೆ 2, ಧಾರವಾಡ 4, ಹಾಸನ 18, ಚಿಕ್ಕಮಗಳೂರು 1.50, ಕೊಡಗು 5, ಕೊಪ್ಪಳ, ಕಲಬುರಗಿ, ಬೀದರ್‌ ಹಾಗೂ ಹಾವೇರಿಯಲ್ಲಿ ತಲಾ 0.50 ಮಿ.ಮೀ. ಮಳೆಯಾಗಿದೆ. ಮುಂದಿನ 48 ಗಂಟೆಗಳಲ್ಲಿ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿಯಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ಮಳೆಗೆ ಇಬ್ಬರು ಬಲಿ
ಬೆಂಗಳೂರು: ರಾಜಧಾನಿಯಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ಇಬ್ಬರು ಯುವಕರು ಬಲಿಯಾಗಿದ್ದು 13 ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಹೆಬ್ಟಾಳ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯ ಲುಂಬಿನಿ ಗಾರ್ಡನ್‌ ಬಳಿ ದ್ವಿಚಕ್ರ ವಾಹನದ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ ಕೋರಿಯರ್‌ ಸಂಸ್ಥೆ ಉದ್ಯೋಗಿ ಕಿರಣ್‌ (28) ಮೃತಪಟ್ಟಿದ್ದಾನೆ.

ಮತ್ತೂಂದು ಪ್ರಕರಣದಲ್ಲಿ ಜಾಲಹಳ್ಳಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎಂಜಿನಿಯರಿಂಗ್‌ ವಿದ್ಯಾರ್ಥಿ ಆಶೀಶ್‌ ವರ್ಮಾ (21) ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next