Advertisement

ಇಂದು ಸಾರಿಗೆ ಸಚಿವರೊಂದಿಗೆ ಸಭೆ : ಬೇಡಿಕೆ ಈಡೇರಿದರೆ ಖಾಸಗಿ ಬಸ್‌ ಸಂಚಾರ

08:28 AM May 09, 2020 | Hari Prasad |

ಉಡುಪಿ: ಖಾಸಗಿ ಬಸ್‌ಗಳಿಗೆ ತೆರಿಗೆಯಲ್ಲಿ ವಿನಾಯಿತಿ ಕಲ್ಪಿಸುವುದು, ವಿಮೆ ಪಾವತಿ ಅವಧಿಯನ್ನು 2 ತಿಂಗಳ ಕಾಲ ವಿಸ್ತರಿಸುವುದು ಸಹಿತ ಹಲವಾರು ಬೇಡಿಕೆಗಳು ಶುಕ್ರವಾರ ಬೆಂಗಳೂರಿನಲ್ಲಿ ಸಾರಿಗೆ ಸಚಿವರ ನೇತೃತ್ವದಲ್ಲಿ ನಡೆಯುವ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ನಿರ್ಧಾರವಾಗಲಿವೆ. ಹಸುರು ವಲಯದಲ್ಲಿ ಬಸ್‌ಗಳ ಒಡಾಟಕ್ಕೆ ಸರಕಾರ ಈಗಾಗಲೇ ಅನುಮತಿ ನೀಡಿದೆಯಾದರೂ ವಿವಿಧ ಕಾರಣಗಳಿಂದ ಉಡುಪಿ ಜಿಲ್ಲೆಯಲ್ಲಿ ಬಸ್‌ಗಳು ಸಂಚಾರ ಆರಂಭಿಸಿಲ್ಲ.

Advertisement

ಕೆಎಸ್ಸಾರ್ಟಿಸಿ ಶೀಘ್ರ ವರದಿ
ಬುಧವಾರ ನಡೆದ ಕೆಎಸ್ಸಾರ್ಟಿಸಿ ಅಧಿಕಾರಿಗಳು, ಖಾಸಗಿ ಬಸ್‌ ಮಾಲಕರೊಂದಿಗಿನ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಕೆಎಸ್ಸಾರ್ಟಿಸಿ ಬಸ್‌ಗಳನ್ನು ಹೊರಡಿಸಲು ಆಯ್ದ ರೂಟ್‌ಗಳ ಸರ್ವೇ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಶೀಘ್ರ ವರದಿ ಬರಲಿದ್ದು, ಬಸ್‌ ಓಡಾಟ ಆರಂಭವಾಗುವ ಸಾಧ್ಯತೆಗಳಿವೆ.

ಹಲವು ಷರತ್ತು
ಬಸ್‌ ಸಂಚಾರ ಆರಂಭಿಸಬೇಕೆಂದರೆ ಒಂದು ಬಸ್ಸಿನಲ್ಲಿ ಶೇ. 50ಕ್ಕಿಂತ ಅಧಿಕ ಮಂದಿ ಪ್ರಯಾಣಿಸುವಂತಿಲ್ಲ, ಅಧಿಕ ದರ ವಸೂಲು ಮಾಡುವಂತಿಲ್ಲ, ಪ್ರಯಾಣಿಕರಿಗೆ ಮಾಸ್ಕ್ ಒದಗಿಸುವುದು, ಒಂದು ಟ್ರಿಪ್‌ ಆದ ಬಳಿಕ ಬಸ್‌ಗಳನ್ನು ಸ್ಯಾನಿಟೈಸ್‌ ಮಾಡುವುದು ಸಹಿತ ಹಲವಾರು ಷರತ್ತುಗಳಿವೆ. ಇದಕ್ಕೆ ಕೆಎಸ್ಸಾರ್ಟಿಸಿ ಒಪ್ಪಿದರೂ ಖಾಸಗಿಯವರಿಗೆ ಹೊರೆಯೆನಿಸುತ್ತಿದೆ. ಈ ಕಾರಣದಿಂದ ಬುಧವಾರದ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಸಾಧ್ಯವಾಗಿಲ್ಲ.

ಹಲವಾರು ತೊಡಕು
40ಕ್ಕಿಂತಲೂ ಹೆಚ್ಚು ದಿನಗಳಿಂದ ಬಸ್‌ಗಳು ಎಲ್ಲೆಲ್ಲೋ ನಿಂತಿವೆ. ಬಿಸಿಲಿನ ಹೊಡೆತ, ಚಾಲನೆ ಆಗದೆ ಇರುವುದು ಮೊದಲಾದ ಕಾರಣಗಳಿಂದ ಟಯರ್‌, ಬ್ಯಾಟರಿ ಇತ್ಯಾದಿ ಬಿಡಿ ಭಾಗಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಎಂಜಿನ್‌ ಆಯಿಲ್‌ ಸೋರಿಕೆ, ಬಾಡಿ ಪೈಂಟಿಂಗ್‌, ಗೇರ್‌ಬಾಕ್ಸ್‌ ಸಹಿತ ವಾಹನಗಳನ್ನು ಒಮ್ಮೆ ಸರ್ವಿಸ್‌ ಮಾಡಿಸಿದ ಬಳಿಕವಷ್ಟೇ ರಸ್ತೆಗಿಳಿಸಬೇಕಾಗುತ್ತದೆ.

ಖಾಸಗಿ ಬಸ್‌ ಮಾಲಕರ ಬೇಡಿಕೆಗಳೇನು?
– 2 ತಿಂಗಳ ತೆರಿಗೆಗೆ ವಿನಾಯಿತಿ ನೀಡಬೇಕು.
– ವಿಮೆ ಅವಧಿಯನ್ನು ಹೆಚ್ಚುವರಿಯಾಗಿ 2 ತಿಂಗಳ ಕಾಲ ವಿಸ್ತರಿಸುವುದು.
– ಬಸ್‌ ನೌಕರರಿಗೆ ವಿಶೇಷ ಪ್ಯಾಕೇಜ್‌ ಒದಗಿಸುವುದು.
– ಮುಂದಿನ 3 ತಿಂಗಳು ಕಾಲ ಲೀ.ಗೆ 10ರೂ. ರಿಯಾಯಿತಿ ದರದಲ್ಲಿ ಡೀಸೆಲ್‌ ಒದಗಿಸಬೇಕು.
– ಅನಿವಾರ್ಯ ಸಂದರ್ಭಗಳಲ್ಲಿ ಹೆಚ್ಚು ಪ್ರಯಾಣಿಕರನ್ನು ಹಾಕಿದರೆ ಯಾವುದೇ ಕಾರಣಕ್ಕೂ ಕೋವಿಡ್‌-19 ಪ್ರಕರಣ ದಾಖಲಿಸಬಾರದು.
– ಬಸ್‌ಗಳನ್ನು ಸ್ಯಾನಿಟೈಸ್‌ ಮಾಡಲು ಆಯಾ ಜಿಲ್ಲಾಡಳಿತ, ಸ್ಥಳಿಯಾಡಳಿತ ವ್ಯವಸ್ಥೆ ಮಾಡಬೇಕು.
– ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಪ್ರಯಾಣಿಕರೇ ತರಬೇಕು.

Advertisement

ಇಂದು ನಿರ್ಧಾರ
ಖಾಸಗಿ ಬಸ್‌ ಮಾಲಕರ ವಿವಿಧ ಬೇಡಿಕೆಗಳು ಇಂದು ಸಾರಿಗೆ ಸಚಿವ ಲಕ್ಷಣ ಸವದಿ ಅವರ ನೇತೃತ್ವದಲ್ಲಿ ನಡೆಯುವ ಸಾರಿಗೆ ಇಲಾಖೆಯ ಸಭೆಯಲ್ಲಿ ನಿರ್ಧಾರವಾಗಲಿವೆ. ಈ ಪೈಕಿ ಎಲ್ಲ ಬೇಡಿಕೆಗಳ ಪೈಕಿ ಶೇ. 80ರಷ್ಟು ಈಡೇರಿದರೂ ಖಾಸಗಿ ಬಸ್‌ಗಳ ಓಡಾಟಕ್ಕೆ ದಿನಾಂಕ ನಿಗದಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ತೆರಿಗೆ ರಿಯಾಯಿತಿ ಅಥವಾ ಯಾನ ದರ ಹೆಚ್ಚಿಸುವ ಬಗ್ಗೆ ಇಂದಿನ ಸಭೆಯಲ್ಲಿ ತೀರ್ಮಾನವಾಗಲಿದೆ. ಶೇ. 50ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಬೇಕು ಎಂಬ ನಿಯಮದಿಂದ ಬಸ್‌ ಮಾಲಕರಿಗೆ ನಷ್ಟವಾಗಲಿದೆ.
– ರಾಜವರ್ಮ ಬಲ್ಲಾಳ್‌, ಅಧ್ಯಕ್ಷರು, ಕೆನರಾ ಬಸ್‌ ಮಾಲಕರ ಸಂಘ

ಷರತ್ತುಗಳಂತೆ ಸಂಚಾರ ಆರಂಭಿಸಿದರೆ ಮೊದಲೇ ನಷ್ಟದಲ್ಲಿರುವ ಸಾರಿಗೆ ಉದ್ಯಮಕ್ಕೆ ಮತ್ತಷ್ಟು ಹೊಡೆತ ಬೀಳಲಿದೆ. ಬೇಡಿಕೆಗಳನ್ನು ಸಚಿವರ ಮುಂದಿಡಲಿದ್ದೇವೆ. ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.
– ಕುಯಿಲಾಡಿ ಸುರೇಶ್‌ ನಾಯಕ್‌, ಅಧ್ಯಕ್ಷರು, ಉಡುಪಿ ಸಿಟಿ ಬಸ್‌, ಮಾಲಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next