Advertisement

ಉಡುಪಿ: ಲಾಕ್‌ ಡೌನ್‌ ಅಥವಾ ಗಡಿ ಬಂದ್‌: ಇಂದು ಜಿಲ್ಲಾಡಳಿತದ ನಿರ್ಧಾರ

01:06 AM Jul 14, 2020 | Hari Prasad |

ಉಡುಪಿ: ಕೋವಿಡ್ 19 ಸೋಂಕು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಕೂಡ ಲಾಕ್‌ ಡೌನ್‌ ಅಥವಾ ಜಿಲ್ಲೆಯ ಗಡಿಗಳನ್ನು ಬಂದ್‌ ಮಾಡುವ ಸಾಧ್ಯತೆ ಹೆಚ್ಚಿದೆ.

Advertisement

ಮಂಗಳವಾರ ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಶಾಸಕರ ಸಭೆ ಕರೆಯಲಾಗಿದ್ದು, ಅದರಲ್ಲಿ ಜಿಲ್ಲಾಧಿಕಾರಿಯವರು ಅಂತಿಮ ನಿರ್ಧಾರ ತಳೆಯಲಿದ್ದಾರೆ.

ಪ್ರಾಯಃ ಗಡಿಗಳನ್ನು ಬಂದ್‌ ಮಾಡುವ ನಿರ್ಧಾರವನ್ನು ತಳೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮುಖ್ಯಮಂತ್ರಿಗಳು ಸೋಮವಾರ ಕೋವಿಡ್ 19 ಸೋಂಕು ಹೆಚ್ಚಿರುವ 11 ಜಿಲ್ಲೆಗಳ ಜಿಲ್ಲಾಧಿಕಾರಿ, ಎಸ್‌ಪಿ, ಜಿ.ಪಂ. ಸಿಇಒ ಅವರ ಜತೆ ವೀಡಿಯೋ ಸಂವಾದ ನಡೆಸಿದ್ದು ಆಯಾ ಜಿಲ್ಲೆಗಳಲ್ಲಿ ಲಾಕ್‌ ಡೌನ್‌ ಮಾಡಬೇಕೋ? ಬೇಡವೋ ಎಂಬ ಕುರಿತು ನಿರ್ಧಾರ ತಳೆಯುವ ಅಧಿಕಾರವನ್ನು ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದಾರೆ.

ಲಾಕ್‌ಡೌನ್‌ಗೆ ನಿರ್ಧರಿಸಿದರೂ ಜನರಿಗೆ ಒಂದು ದಿನದ ಅವಕಾಶ ಕೊಡಲಾಗುತ್ತದೆ. ಲಾಕ್‌ ಡೌನ್‌ ಮಾಡಿದರೂ ಎಸೆಸೆಲ್ಸಿ ಮೌಲ್ಯಮಾಪನ ನಿರಾತಂಕವಾಗಿ ಮುಂದುವರಿಯುತ್ತವೆ. ಶಿಕ್ಷಕರಿಗೆ ಬಂದು ಹೋಗುವ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

Advertisement

ಬಸ್‌ಗಳಲ್ಲಿ ಅಂತರ: ಪ್ರಕರಣ
ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಹಿನ್ನೆಲೆಯಲ್ಲಿ 15ರಿಂದ 20 ಪ್ರಕರಣಗಳನ್ನು ಸಾರಿಗೆ ಅಧಿಕಾರಿಗಳು ದಾಖಲಿಸಿದ್ದಾರೆ. ಸಮೂಹ ಸಾರಿಗೆಯಲ್ಲಿ ಸಾಮಾಜಿಕ ಅಂತರ ಕಾಪಾಡಲೇಬೇಕು. ಸಮೂಹ ಸಾರಿಗೆ ಬೇಕೋ ಬೇಡವೋ ಎಂಬ ವಿಷಯವನ್ನೂ ಮಂಗಳವಾರದ ಸಭೆಯಲ್ಲಿ ಚರ್ಚೆಗೆ ಇಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಬಸ್‌ ಸಂಚಾರ ಕಡ್ಡಾಯವಲ್ಲ
ಕೆಲವು ಕಡೆ ಬಸ್‌ಗಳೇ ಬರುತ್ತಿಲ್ಲ ಎಂದು ಅವರ ಗಮನ ಸೆಳೆದಾಗ, “ನಾವು ಸರಕಾರದ ನಿಯಮ ಪಾಲನೆ ಮಾಡಬೇಕೆಂದು ಮಾತ್ರ ಹೇಳಬಹುದೇ ವಿನಾ ನಿರ್ದಿಷ್ಟ ಮಾರ್ಗದಲ್ಲಿ ಬಸ್‌ ಹಾಕಲೇಬೇಕೆಂದು ಹೇಳುವಂತಿಲ್ಲ’ ಎಂದರು.

ಮದುವೆ: ಉಲ್ಲಂಘಿಸಿದರೆ ಕೇಸ್‌
ಸರಕಾರದ ನಿಯಮ ಪಾಲನೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಮದುವೆಯಲ್ಲಿ 50 ಜನರಿಗಿಂತ ಹೆಚ್ಚು ಜನರು ಸೇರಿದ್ದಾರೋ ಎಂಬುದನ್ನು ಅಧಿಕಾರಿಗಳು ಹೋಗಿ ನೋಡುತ್ತಾರೆ. ಸಾರ್ವಜನಿಕರಿಂದ ದೂರು ಬಂದ ಸಂದರ್ಭವೂ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. 50 ಜನರಿಗಿಂತ ಹೆಚ್ಚು ಜನರು ಸೇರಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆ, ಸಮಾರಂಭ ಸಲ್ಲದು
50 ಜನರಿಗಿಂತ ಹೆಚ್ಚಿಗೆ ಸೇರಬಾರದು ಎಂಬುದು ಮದುವೆಗೆ ಮಾತ್ರ ಕೊಟ್ಟ ಅವಕಾಶ. ಸಂಘ-ಸಂಸ್ಥೆಗಳು 50 ಜನ ಸೇರಿಸಿ ಸಭೆ ನಡೆಸುತ್ತೇವೆಂದರೆ ಅದು ತಪ್ಪು. ಯಾವುದೇ ಸಭೆ, ಸಮಾರಂಭಗಳಿಗೆ ಅವಕಾಶಗಳಿಲ್ಲ. ಒಂದು ವೇಳೆ ನಡೆದರೆ ಕ್ರಮ ಕೈಗೊಳ್ಳಲು ತಹಶೀಲ್ದಾರರಿಗೆ ನಿರ್ದೇಶನ ನೀಡಿದ್ದೇನೆ ಎಂದರು.

ಸಾರ್ವಜನಿಕ ಹಬ್ಬ ಇಲ್ಲ
ಸರಕಾರದ ಸೂಚನೆ ಪ್ರಕಾರ ಯಾವುದೇ ಹಬ್ಬ ಹರಿದಿನಗಳನ್ನು ಸಾರ್ವಜನಿಕವಾಗಿ ಆಚರಿಸುವಂತಿಲ್ಲ. ಮನೆಗಳಲ್ಲಿ ಮಾಡಬಹುದು ಎಂದರು.

ದ.ಕ.-ಉಡುಪಿ ಗಡಿಬಂದ್‌ ಇಲ್ಲ: ಸಚಿವ ಕೋಟ
ಕುಂದಾಪುರ:
ಉಡುಪಿಯಲ್ಲಿ ಸೋಂಕು ಚಿಕಿತ್ಸೆ ಹಾಗೂ ಹರಡುವಿಕೆ ನಿಯಂತ್ರಣದಲ್ಲಿದೆ; ಗುಣವಾಗುವ ಪ್ರಮಾಣದಲ್ಲಿ ಏರಿಕೆಯೂ ಇದೆ. ಆದ್ದರಿಂದ ಜಿಲ್ಲೆಯಲ್ಲಿ ಲಾಕ್‌ ಡೌನ್‌ ಆವಶ್ಯಕತೆ ಸದ್ಯದ ಮಟ್ಟಿಗೆ ಇಲ್ಲ. ದ.ಕ.ದಲ್ಲಿ ಲಾಕ್‌ ಡೌನ್‌ ಇದ್ದರೂ ಉಡುಪಿ-ಮಂಗಳೂರು ನಡುವೆ ಓಡಾಟಕ್ಕೆ ಸಮಸ್ಯೆ ಆಗುವುದಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಕುಂದಾಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next