Advertisement

ಜಿಲ್ಲಾ ಬಿಜೆಪಿಯ ಬಣಜಗಳಕ್ಕೆ ಇಂದು ಫುಲ್‌ಸ್ಟಾಪ್‌?

03:12 PM Aug 07, 2017 | Team Udayavani |

ದಾವಣಗೆರೆ: ನರೇಂದ್ರ ಮೋದಿ ಪ್ರಧಾನಿಯಾಗಿ 2 ವರ್ಷ ಪೂರೈಸಿದ್ದರ ನಿಮಿತ್ತ ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ವಿಕಾಸ ಪರ್ವ ಕಾರ್ಯಕ್ರಮದಿಂದ ಆರಂಭಗೊಂಡಿದ್ದ ಜಿಲ್ಲಾ ಬಿಜೆಪಿಯಲ್ಲಿನ ಬಣ ಜಗಳಕ್ಕೆ ಇದೀಗ ಕೊನೆ ಅಂತ್ಯ ಹಾಡುವ ಸಮಯ ಬಂದಂತಾಗಿದೆ.

Advertisement

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಅರವಿಂದ್‌ ಲಿಂಬಾವಳಿ, ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್‌ ಸಮ್ಮುಖದಲ್ಲಿ ಸೋಮವಾರ ಶಾಮನೂರು ಬಳಿಯ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದ ಜಯದೇವಪ್ಪ ಸಭಾಭವನದಲ್ಲಿ ಎರಡೂ ಬಣಗಳ ನಾಯಕರ ಸಭೆ ಬಣಗಳ ಒಗ್ಗೂಡಿಕೆಗೆ ಮತ್ತಷ್ಟು ಪುಷ್ಟಿ ನೀಡಿದೆ. ಸೋಮವಾರದ ಸಭೆಯಲ್ಲಿ ಮಾಜಿ ಸಚಿವ, ಪಕ್ಷದ ವರಿಷ್ಠ ಎಸ್‌.ಎ. ರವೀಂದ್ರನಾಥ್‌, ಸಂಸದ ಜಿ.ಎಂ. ಸಿದ್ದೇಶ್ವರ್‌, ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ, ಪಕ್ಷದ ಜಿಲ್ಲಾಧ್ಯಕ್ಷ ಯಶವಂತ್‌ ರಾವ್‌ ಜಾಧವ್‌ ಸೇರಿದಂತೆ ಎಲ್ಲಾ ವರಿಷ್ಠರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಲ್ಲಿಗೆ ಕಮಲದ ನಾಯಕರು ಒಗ್ಗೂಡುವುದು ಬಹುತೇಕ ಖಚಿತ ಎಂಬ ಮಾತಿದೆ. ಭಾನುವಾರ ಚಿತ್ರದುರ್ಗ ಜಿಲ್ಲೆ ಭೀಮಸಮುದ್ರದಲ್ಲಿ ನಡೆದ ಸಂಸದ ಜಿ.ಎಂ ಸಿದ್ಧೇಶ್ವರ್‌ ಸಹೋದರ ಜಿ.ಎಸ್‌. ಪ್ರಸನ್ನಕುಮಾರ್‌ ಪುತ್ರಿ ಹಾಗೂ ಬಿಜೆಪಿ ಮುಖಂಡ ಮುರುಗೇಶ್‌ ನಿರಾಣಿ ಪುತ್ರನ ನಿಶ್ಚಿತಾರ್ಥದಲ್ಲಿ ನಗುಮೊಗದಿಂದ ಪಾಲ್ಗೊಂಡಿದ್ದ ಜಿಲ್ಲೆಯ ವರಿಷ್ಠರು, ಅದೇ ವೇದಿಕೆ ಮೂಲಕವೇ ಅಧಿಕೃತವಾಗಿ ಒಂದಾಗಿದ್ದೇವೆ ಎಂಬುದನ್ನು ತೋರಿಸಿದ್ದಾರೆ. 

ಪ್ರಧಾನಿ ಮೋದಿಯವರ ವಿಕಾಸ ಪರ್ವ ಕಾರ್ಯಕ್ರಮದ ವೇಳೆ ಮಾಜಿ ಸಚಿವ ಎಸ್‌ .ಎ. ರವೀಂದ್ರನಾಥ್‌ ಸೇರಿದಂತೆ ಜಿಲ್ಲೆಯ ವರಿಷ್ಠರಿಗೆ ಮತ್ತವರ ಬೆಂಬಲಿಗರಿಗೆ ಪ್ರಾಶಸ್ತ,  ಸೂಕ್ತ ಜವಾಬ್ದಾರಿ ನೀಡಲಿಲ್ಲ ಎಂಬ ಕಾರಣಕ್ಕೆ ಆರಂಭವಾದ ಬಣ ಜಗಳ ಕೊನೆಗೆ ವಿವಿಧ ಮಜಲುಗಳನ್ನು ಪಡೆದುಕೊಂಡಿತು. ಪಕ್ಷದ ವರಿಷ್ಠರಿಬ್ಬರು ಪರಸ್ಪರ ವಿರುದ್ಧ ಮುಖಮಾಡಿಕೊಂಡು ತಮ್ಮ ತಮ್ಮ ಕಾರ್ಯದಲ್ಲಿ ತೊಡಗಿಕೊಂಡರು. ಇದೇ ವೇಳೆ
ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಯಶವಂತರಾವ್‌ ಜಾಧವ್‌ ಆಯ್ಕೆಯಾದಾಗ ಮುನಿಸು ತಾರಕಕ್ಕೇರಿತು. ಜಿಲ್ಲಾ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ಬಹಿರಂಗವಾಗಿಯೇ ಯಶವಂತರಾವ್‌ ಜಾಧವ್‌ರನ್ನು ಅಧ್ಯಕ್ಷರನ್ನಾಗಿ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

ನೂತನ ಅಧ್ಯಕ್ಷರ ಆಯ್ಕೆಯಾದ ದಿನದಂದೇ ಭಿನ್ನ ನಾಯಕರು, ಕಾರ್ಯಕರ್ತರ ಸಭೆ ನಡೆಸಿ, ತಮ್ಮ ಬಲ ಪ್ರದರ್ಶನ ತೋರಿದರು. ಆದರೆ, ಇನ್ನೊಂದು ಕಡೆ ಇದ್ಯಾವುದಕ್ಕೂ ಜಗ್ಗದೆ ಇಂದಲ್ಲ ನಾಳೆ ನಾವೆಲ್ಲಾ ಒಂದಾಗುತ್ತೇವೆ ಎಂಬ ಮಂತ್ರ ಪಠಿಸಿದ ನೂತನ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಅಧಿಕಾರ ಸ್ವೀಕಾರದ ವೇಳೆ ಎಲ್ಲರನ್ನೂ ಒಗ್ಗೂಡಿಸುವ ಆಸೆ ಇಟ್ಟುಕೊಂಡರು. ಇದಕ್ಕಾಗಿ ಒಮ್ಮೆ ನಿಗದಿಯಾಗಿದ್ದ ದಿನಾಂಕವನ್ನು ಮುಂದೂಡಿದರು. ಆದರೆ, ಇದು ಯಾವುದೇ ಫಲ ನೀಡಲಿಲ್ಲ. ರವೀಂದ್ರನಾಥ್‌ ಸೇರಿದಂತೆ ವರಿಷ್ಠರಾದ ಡಾ| ಎ.ಎಚ್‌. ಶಿವಯೋಗಿಸ್ವಾಮಿ,
ಮಾಜಿ ಶಾಸಕ ಎಂ. ಬಸವರಾಜನಾಯ್ಕ ತಮ್ಮ ಬೆಂಬಲಿಗರೊಂದಿಗೆ ಕಾರ್ಯಕ್ರಮದಿಂದ ದೂರ ಉಳಿದರು.

Advertisement

ಜಿಲ್ಲೆಯಲ್ಲಿ ಆದ ಬಿಕ್ಕಟ್ಟು ರಾಜ್ಯಮಟ್ಟದಲ್ಲೂ ಆದಾಗ ಉದ್ಭವವಾದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ‌ ಶಾಖೆ ಇಲ್ಲೂ ಜೋರಾಗಿ ಆರಂಭವಾಯಿತು. ಎಸ್‌.ಎ. ರವೀಂದ್ರನಾಥ್‌ ಇತರರು ಬ್ರಿಗೇಡ್‌ ಚಟುವಟಿಕೆಯಲ್ಲಿ ಸಕ್ರಿಯರಾದರು. ಆಗಾಗ ಸುದ್ದಿಗೋಷ್ಠಿ, ಸಮಯ ದೊರೆತಾಗ ಲೆಲ್ಲ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದರು. ಆರೋಪ- ಪ್ರತ್ಯಾರೋಪದ ಝರಿ ಬಲು ಜೋರಾಗಿಯೇ ಹರಿಯಿತು. ಜಿಲ್ಲಾ ಮುಖಂಡರ ಒಗ್ಗೂಡಿಸುವ ನಿಟ್ಟಿನಲ್ಲಿ ಹಲವು ಸುತ್ತಿನ ಸಂಧಾನ ಯತ್ನ ನಡೆದಿದ್ದವು. ಪಕ್ಷದ ಜಿಲ್ಲಾ ಉಸ್ತುವಾರಿ ಗೋ. ಮಧುಸೂದನ್‌, ವಿಧಾನ ಪರಿಷತ್‌ನ ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ ಸೇರಿದಂತೆ ಹಲವು ಗಣ್ಯರು ಇಬ್ಬರ ನಡುವೆ ಬೆಸುಗೆ ಹಾಕುವ ಯತ್ನಮಾಡಿದರು. ಆದರೆ, ಇದು ಫಲಿಸಿರಲಿಲ್ಲ. ಇದೀಗ ಎಲ್ಲವೂ ಸರಿಹೋಗುವ ಕಾಲ ಬಂದಂತಿದೆ. ಸೋಮವಾರ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲಾ ನಾಯಕರು ಪಾಲ್ಗೊಳ್ಳುವುದು ಬಹುತೇಕ ಖಚಿತ ಆಗಿದೆ. ಅಲ್ಲಿಗೆ ಬಿಜೆಪಿಯ ಒಳ, ಬಣ ಜಗಳಕ್ಕೆ ತೆರೆ ಬೀಳುವ ಎಲ್ಲ ಲಕ್ಷಣ ಕಂಡು ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next