ನವದೆಹಲಿ: ದೇಶದ ರೈತರ ಬವಣೆ ತೀರಿಸುವ ನಿಟ್ಟಿನಲ್ಲಿ ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸೋಮವಾರ ಬಂಪರ್ ಯೋಜನೆ ಪ್ರಕಟಿಸುವ ಸಾಧ್ಯತೆ ಇದೆ.
ತೆಲಂಗಾಣ ಮತ್ತು ಒಡಿಶಾ ಮಾದರಿಯಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಇಂತಿಷ್ಟು ಹಣ ಹಾಕುವ ಯೋಜನೆ ಘೋಷಿಸುವ ಸಂಭವವಿದೆ ಎಂದು ಹೇಳಲಾಗಿದೆ. ಈ ರಾಜ್ಯಗಳಲ್ಲಿ ಪ್ರತಿ ರೈತರ ಅಕೌಂಟ್‌ಗೆ ತಲಾ 4 ಸಾವಿರ ರೂ. ಹಾಕಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸೋಮವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ಇದರಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈಗಾಗಲೇ ಘೋಷಣೆ ಮಾಡಿರುವಂತೆ 2022ರ ಒಳಗಾಗಿ ದೇಶದ ರೈತರ ಆದಾಯ ವೃದ್ಧಿಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಭರವಸೆಗೆ ಪೂರಕವಾಗಿ ಸೋಮವಾರದ ಕೇಂದ್ರ ಸಂಪುಟದಲ್ಲಿ ಕೈಗೊಳ್ಳಲಿರುವ ನಿರ್ಧಾರ ಇರಲಿದೆ ಎಂದು ಹೇಳಲಾಗಿದೆ. ಏಪ್ರಿಲ್-ಮೇ ನಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸಂಪುಟ ನಿರ್ಧಾರ ದೂರಗಾಮಿ ಪರಿಣಾಮ ಬೀರಲಿದೆ.
ಫೆ.1ರಂದು ಮಂಡನೆಯಾಗುವ ಮಧ್ಯಂತರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಪೂರಕವಾಗುವ ಅಂಶಗಳನ್ನು ಪ್ರಕಟಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅದಕ್ಕಿಂತ ನಾಲ್ಕು ದಿನಗಳು ಮೊದಲೇ ಸರ್ಕಾರದ ವತಿಯಿಂದ ಮಹತ್ವದ ನಿರ್ಧಾರ ಪ್ರಕಟವಾಗಲಿದೆ. ಕೇಂದ್ರ ಕೃಷಿ ಸಚಿವಾಲಯ ಕೃಷಿ ಕ್ಷೇತ್ರದ ಸಮಸ್ಯೆ ನಿವಾರಿಸಲು ಅಲ್ಪಾವಧಿ ಮತ್ತು ದೀರ್ಘಕಾಲೀನ ಯೋಜನೆಗಳನ್ನು ಶಿಫಾರಸು ಮಾಡಿದೆ. ಅವುಗಳ ಬಗ್ಗೆ ಪ್ರಧಾನಿ ನೇತೃತ್ವದ ಕೇಂದ್ರ ಸಂಪುಟ ಸಭೆಯಲ್ಲಿ ಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಸಂಭಾವ್ಯ ಕ್ರಮಗಳೇನು?: ರೈತರಿಗೆ ಭದ್ರತೆ ಇಲ್ಲದೆ ಮತ್ತು ಬಡ್ಡಿ ರಹಿತ ಸಾಲ, ಜತೆಗೆ ಆದಾಯ ವೃದ್ಧಿಸುವ ಕ್ರಮಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ. 3 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ನೀಡಲೂ ಕೇಂದ್ರ ಕೃಷಿ ಸಚಿವಾಲಯ ಈಗಾಗಲೇ ನೀತಿ ಆಯೋಗದ ಜತೆಗೆ ಚರ್ಚೆ ನಡೆಸಿದೆ. ಭದ್ರತೆ ಇಲ್ಲದೆ ಸಾಲ ನೀಡುವ ಯೋಜನೆಯಡಿ 2ಲಕ್ಷ ರೂ. ಅಥವಾ 3 ಲಕ್ಷ ರೂ.ನೀಡುವ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಗಳಿವೆ. ತೆಲಂಗಾಣ ಮತ್ತು ಒಡಿಶಾ ರಾಜ್ಯ ಸರ್ಕಾರಗಳು ರೈತರ ಖಾತೆಗೆ 4 ಸಾವಿರ ರೂ. ನೀಡುವ ಯೋಜನೆ ಜಾರಿಗೊಳಿಸಿರುವ ರೀತಿಯಲ್ಲಿ ಕೇಂದ್ರ ಸಂಪುಟ ಕೂಡ ಅದೇ ಮಾದರಿಯಲ್ಲಿ ಯೋಜನೆಗೆ ಸಮ್ಮತಿ ನೀಡಲಿದೆ ಎನ್ನಲಾಗುತ್ತಿದೆ. ಅದಕ್ಕಾಗಿ ಐದು ಎಕರೆ ವರೆಗೆ ಜಮೀನು ಇರುವವರಿಗೆ ಮಾತ್ರ ಈ ಯೋಜನೆ ಎಂದು ಮಿತಿಗೊಳಿಸುವ ಸಾಧ್ಯತೆಯೂ ಇದೆ. ಕೃಷಿಗೆ ತಗಲುವ ವೆಚ್ಚ, ರಸಗೊಬ್ಬರಗಳ ಖರೀದಿ ಮತ್ತು ಇತರ ಖರ್ಚು ವೆಚ್ಚಗಳ ಶೇ.50ರಷ್ಟನ್ನು ನೀಡುವ ಬಗ್ಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಹಲವು ಸಚಿವರು ಈಗಾಗಲೇ ಪ್ರತಿಪಾದಿಸಿದ್ದಾರೆ.
ಆದಾಯ ದ್ವಿಗುಣಕ್ಕೆ ಕ್ರಮ
ದೇಶದ ಕೃಷಿಕರಿಗೆ ಉತ್ತಮ ದರ್ಜೆಯ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರ ವ್ಯವಸ್ಥೆಗಳನ್ನು ನೀಡುವ ಮೂಲಕ ಅವರ ಆದಾಯವನ್ನು 2022ರ ಒಳಗಾಗಿ ದ್ವಿಗುಣಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಒತ್ತಾಸೆಗೆ ಅನುಗುಣವಾಗಿ ಈ ಘೋಷಣೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ. ಬೆಳೆ ವಿಮೆಗೆ ವಿಧಿಸಲಾಗುತ್ತಿರುವ ಪ್ರೀಮಿಯಂ ಮೊತ್ತವನ್ನು ಮನ್ನಾ ಮಾಡುವ ವಿಚಾರವೂ ಕೇಂದ್ರದ ಮುಂದೆ ಇದೆ.
ಮಧ್ಯಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಸೋಲನುಭವಿಸಿದ ಬಳಿಕ ಕೇಂದ್ರ ಸರ್ಕಾರ ರೈತರ ಸಮಸ್ಯೆ ಪರಿಹರಿಸಲು ಗಂಭೀರ ಚಿಂತನೆ ನಡೆಸಿದೆ. ಅದಕ್ಕೆ ಪೂರಕವಾಗಿ ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಸಿಂಗ್ ನೀತಿ ಆಯೋಗದ ಸದಸ್ಯರ ಜತೆಗೆ ಈ ಬಗ್ಗೆ ನಿರಂತರವಾಗಿ ಸಮಾಲೋಚನೆ ನಡೆಸುತ್ತಿದ್ದಾರೆ. ರೈತರು ಬೆಳೆದ ಬೆಲೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆಯ ಜತೆಗೆ ಹೆಚ್ಚುವರಿಯಾಗಿ ಕೇಂದ್ರ ಸಂಪುಟದ ಘೋಷಣೆಗಳು ಇರಲಿವೆ.
21.6 ಕೋಟಿ- ಸಣ್ಣ ಮತ್ತು ಅತಿ ಸಣ್ಣ ರೈತರ ಸಂಖ್ಯೆ
15 ಸಾವಿರ ಕೋಟಿ ರೂ.- ಬೊಕ್ಕಸಕ್ಕೆ ಹೊರೆಯಾಗುವ ಮೊತ್ತ
ಏನೇನು ಕ್ರಮಗಳ ನಿರೀಕ್ಷೆ
– ತೆಲಂಗಾಣ, ಮಧ್ಯಪ್ರದೇಶ ಮಾದರಿಯಲ್ಲಿ ರೈತರ ಖಾತೆಗೆ ನೇರ ನಗದು ವರ್ಗಾವಣೆ
– ಮಧ್ಯಮ, ಸಣ್ಣ ರೈತರಿಗೆ ಭದ್ರತೆ ರಹಿತ ಮತ್ತು ಬಡ್ಡಿ ಇಲ್ಲದ ಸಾಲ
– ಬಡ್ಡಿ ಇಲ್ಲದ ಸಾಲ ಯೋಜನೆಗೆ 3 ಲಕ್ಷ ರೂ. ನಿಗದಿ ಸಂಭವ
– ಭದ್ರತೆ ಇಲ್ಲದ ಸಾಲಕ್ಕೆ 2 ಅಥವಾ 3 ಲಕ್ಷ ರೂ. ಮಿತಿ ಹೇರಿಕೆ
– ಕೃಷಿ ವೆಚ್ಚದ ಶೇ.50ನ್ನು ನೀಡುವ ಬಗ್ಗೆ ಕ್ರಮ