Advertisement

ಮಕ್ಕಳಲ್ಲಿ “ಸ್ವ-ಲೀನತೆ’ಬಗ್ಗೆ ನಿರ್ಲಕ್ಷ್ಯ ಬೇಡ

06:25 AM Apr 02, 2018 | |

ಉಡುಪಿ: ಆಟಿಸಂ (ಸ್ವ-ಲೀನತೆ) ಎನ್ನುವುದು ಭಾರತ ಸಹಿತ ವಿಶ್ವದಾದ್ಯಂತದ ಒಂದು ಆರೋಗ್ಯ ಸಮಸ್ಯೆ. ಈ ಕಾಯಿಲೆಯನ್ನು ಮಕ್ಕಳಿರುವಾಗ ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಮಾಡಿ ಚಿಕಿತ್ಸೆ ಕೊಡಿಸದೇ ಇದ್ದರೆ ಭವಿಷ್ಯ ಮಂಕಾಗುವ ಅಪಾಯವಿದೆ. 
 
ಹುಟ್ಟಿನಿಂದ ಬರುವ ಕಾಯಿಲೆ ಇದಾಗಿದ್ದು, ಅದನ್ನು ಪತ್ತೆ ಹಚ್ಚಿ ಮಕ್ಕಳಿಗೆ ಚಿಕಿತ್ಸೆ ನೀಡುವ ಅಗತ್ಯವಿದೆ. ಸಾಮಾನ್ಯವಾಗಿ ಮಕ್ಕಳು ಎರಡು-ಮೂರನೇ ವಯಸ್ಸಿನವರು ಆಗಿರುವಾಗ ಇದು ಪತ್ತೆಯಾಗ ಬಹುದು. ಆಟಿಸಂಗೆ ತುತ್ತಾದ ಮಕ್ಕಳ ಜತೆ ಹೊಂದಿಕೊಳ್ಳುವುದು ಅಗತ್ಯವಾಗಿದ್ದು, ಅದಕ್ಕಾಗಿ ಹೆತ್ತವರೂ ಬದಲಾಗಬೇಕು. ಶಾಲೆ, ಮನೆಯಲ್ಲೂ ಮಕ್ಕಳಿಗೆ ಪೂರಕವಾಗಿ ಇರಬೇಕಾಗುತ್ತದೆ. 
 
ಏನಿದು ಕಾಯಿಲೆ?
ಮಕ್ಕಳ ಬೆಳವಣಿಗೆಯಲ್ಲಿನ ತೊಂದರೆ ಆಟಿಸಂ. ಇದಕ್ಕೆ ಮಿದುಳಿನಲ್ಲಿನ ತೊಂದರೆ ಕಾರಣವಾಗಿರಬಹುದು. ಹುಟ್ಟುವ ಸಂದರ್ಭ ತಲೆಗೆ ಆಮ್ಲಜನಕ, ರಕ್ತದ ಪೂರೈಕೆ ಕೊರತೆ ವಂಶವಾಹಿಯಲ್ಲಿ ಸಮಸ್ಯೆ ಆಗುವುದರಿಂದ ಅಥವಾ ಮಿದುಳಿಗೆ ವೈರಸ್‌ ಸೋಂಕಿದರೆ, ಗರ್ಭದಲ್ಲಿದ್ದಾಗ ತಾಯಿಗೆ ರುಬೆಲ್ಲಾದಂತಹ ಸೋಂಕು ಬಂದಾಗ ಆಟಿಸಂ ತಗಲಬಹುದು. 

Advertisement

ಗುರುತಿಸುವಿಕೆ ನಿರೀಕ್ಷಿತವಾಗಿಲ್ಲ
ಭಾರತದಲ್ಲಿ 10 ಸಾವಿರಕ್ಕೆ 23,ಅಂದರೆ ಶೇ. 0.23ರಷ್ಟು ಮಕ್ಕಳು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ವಿಶ್ವ ಮಟ್ಟದಲ್ಲಿ ಇದರ ಅನುಪಾತ ಶೇ. 1.47 ಇದೆ. ಭಾರತದಲ್ಲಿ  ಆಟಿಸಂ ಕಾಯಿಲೆ ಗುರುತಿಸುವಿಕೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಹಾಗಾಗಿ ಭಾರತದಲ್ಲಿ ಅನುಪಾತ ಕಮ್ಮಿ ತೋರಿಸುತ್ತಿದೆ ಎಂದು ಅಂತಾರಾಷ್ಟ್ರೀಯ ವೈದ್ಯಕೀಯ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಕರಾವಳಿಯಲ್ಲಿ ಬೆಂಗಳೂರಿನ ಡೀಲ್‌Ø ಕಮ್ಯುನಿಕೇಶನ್‌ ಸಂಸ್ಥೆಯ ಡಾ| ಪ್ರತಿಭಾ ಕಾರಂತ್‌ ಅವರು ಆಟಿಸಂ ಮಕ್ಕಳ ಬಗ್ಗೆ ಮುತುವರ್ಜಿ ವಹಿಸಿದ್ದಾರೆ. 
 
ಶುರುವಾಗಲಿದೆ ಆಟಿಸಂ ಕೇಂದ್ರ  
ಪಾಂಬೂರಿನ ಮಾನಸ ಶಾಲೆಯಲ್ಲಿ ಡಾ| ಎ.ವಿ. ಬಾಳಿಗಾ ಆಸ್ಪತ್ರೆ ಮತ್ತು ಮಣಿಪಾಲದ ಕೆಎಂಸಿ ಸಹಯೋಗದಲ್ಲಿ ಆಟಿಸಂ ಸೆಂಟರ್‌ ಅನ್ನು ಆರಂಭಿಸಲು ಯೋಜಿಸಲಾಗಿದ್ದು, ಇದೇ ತಿಂಗಳಲ್ಲಿ ಸೆಂಟರ್‌ನ ಉದ್ಘಾಟನೆಯೂ ನಡೆಯಲಿದೆ.

ಮಕ್ಕಳಲ್ಲಿ “ಆಟಿಸಂ’ ಲಕ್ಷಣಗಳು
– ಮಕ್ಕಳಲ್ಲಿ ಮಾತಿನ ಬೆಳವಣಿಗೆ ತಡವಾಗುವುದು.
– ಕಣ್ಣಲ್ಲಿ ಕಣ್ಣಿಟ್ಟು ನೋಡದೇ ಇರುವುದು.
– ಆಟದ ಸಾಮಾನುಗಳ ಜತೆ ಆಟವಾಡದೇ ಇರುವುದು.
– ಅತಿಯಾಗಿ ಚಟುವಟಿಕೆಯಿಂದಿರುವುದು.
– ಬೇರೆ ಮಕ್ಕಳ ಜತೆ ಆಟಕ್ಕೆ ಹೋಗದಿರುವುದು.
– ಮಾಡಿದ್ದನ್ನೇ ಮಾಡುತ್ತಾ ಇರುವುದು.
– ತುಂಬಾ ಗಲಾಟೆ, ವಿಪರೀತ ಸಿಟ್ಟು ಮಾಡಿಕೊಳ್ಳುವುದು.

ಚಿಕಿತ್ಸೆ ಏನು? 
ಆಟಿಸಂ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ.ಥೆರಪಿ ಮಾತ್ರ. ಫಿಸಿಯೋಥೆರಪಿ,ಆಕ್ಯುಪೇಶನಲ್‌ ಥೆರಪಿ,ಸ್ಪೀಚ್‌ ಥೆರಪಿ ಮಾಡಬೇಕು.ಸದ್ಯ ಈ ಚಿಕಿತ್ಸೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಇದೆ.

ಅವಗಣನೆ ಬೇಡ 
ಆಟಿಸಂ ಲಕ್ಷಣ ಪತ್ತೆ ಆದಲ್ಲಿ ಕೂಡಲೇ ಮಕ್ಕಳ ತಜ್ಞರ ಬಳಿ ಕರೆದೊಯ್ದು ಪರೀಕ್ಷಿಸಿ. ನಿರ್ಲಕ್ಷ್ಯ ಮಾಡಬೇಡಿ. ಆಟಿಸಂಗೆ ತುತ್ತಾಗಿ ಸೂಕ್ತ ಆರೈಕೆ, ಥೆರಪಿ ಸಿಗದೇ ಹೋದಲ್ಲಿ ಅಂತಹ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಮಾಜದಲ್ಲಿ ಅವರು ಯಾರೊಂದಿಗೂ ಬೆರೆಯಲು ಇಷ್ಟಪಡದೆ ಒಂಟಿತನಕ್ಕೆ ಮೊರೆ ಹೋಗಬಹುದು. ಆಕ್ರಮಣಶೀಲರಾಗಿ ಬಿಡಬಹುದು.
– ಡಾ| ಪಿ.ವಿ. ಭಂಡಾರಿ,
ಪ್ರಖ್ಯಾತ ಮಾನಸಿಕ ತಜ್ಞ.

Advertisement

– ಚೇತನ್‌ ಪಡುಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next