Advertisement

ವಿದ್ಯಾರ್ಥಿಗಳೇ ದುಡುಕದಿರಿ, ಫ‌ಲಿತಾಂಶವೇ ಅಂತಿಮವಲ್ಲ!​​​​​​​

06:20 AM May 07, 2018 | Team Udayavani |

ಉಡುಪಿ: ಪರೀಕ್ಷಾ ಫ‌ಲಿತಾಂಶ ಎಂದರೆ ಸಾಕಷ್ಟು ಕುತೂಹಲ, ಆತಂಕ ಇದ್ದೇ ಇರುತ್ತದೆ. ಹೆತ್ತವರು ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದರಿಂಧ ಮಕ್ಕಳಿಗೂ ಒತ್ತಡದ ವಾತಾವರಣ ನಿರ್ಮಾಣವಾಗುತ್ತದೆ. ಪರಿಣಾಮ ಫ‌ಲಿತಾಂಶದಲ್ಲಿ ಏರುಪೇರಾದರೆ, ಕೆಲವು ಮಕ್ಕಳು ದುಡುಕಿನ ನಿರ್ಧಾರ ಕೈಗೊಳ್ಳುತ್ತಾರೆ. ಇದಕ್ಕೆ  ಹೆತ್ತವರೂ ಪರೋಕ್ಷ ಕಾರಣರಾಗುತ್ತಿದ್ದಾರೆ. ಆದ್ದರಿಂದ ಫ‌ಲಿತಾಂಶದ ದಿನ ದುರಂತವಾಗಿ ಆಗುವ ಮೊದಲು ಮಕ್ಕಳನ್ನು ನೋಡುವ ದೃಷ್ಟಿಕೋನ ಹೆತ್ತವರು ಬದಲಿಸಬೇಕು.

Advertisement

ದುಡುಕುವುದು ಬೇಡ
ಫ‌ಲಿತಾಂಶದ ಹಿಂದಿನ ದಿನ ಅತಿಯಾದ ಉದ್ವೇಗ, ಆತಂಕ ಬೇಡ. ಎನಿಸಿದಷ್ಟು ಅಂಕ ದೊರೆಯದೇ ಇದ್ದರೆ ಇನ್ನು ಎಲ್ಲವೂ ಮುಗಿಯಿತು ಎಂದು ಗಾಬರಿಪಡುವ ಅಗತ್ಯವೇ ಇಲ್ಲ. ಅಂಕಗಳು ಬದುಕನ್ನು ನಿರ್ಧರಿಸುವುದಿಲ್ಲ. ಕಡಿಮೆ ಅಂಕ ಬಂದರೆ ಮುಂದೆ ಹೇಗೆ ಸರಿಪಡಿಸಬಹುದು ಎಂಬುದನ್ನು ಶಿಕ್ಷಕರು, ಸ್ನೇಹಿತರ ಜತೆ ಕುಳಿತು ಚರ್ಚಿಸಿ ಮುಂದುವರಿಯಿರಿ, ಯಶಸ್ಸು ಖಂಡಿತ.  
  
ಅವಕಾಶಗಳಿವೆ.. 
ನಿರೀಕ್ಷಿತ ಅಂಕ ದೊರೆಯದೆ ಇದ್ದರೆ ಏಕಾಏಕಿ ದಿಕ್ಕುತೋಚದಂತಾಗಬೇಕಾಗಿಲ್ಲ. ಎಸೆಸ್ಸೆಲ್ಸಿ ಮತ್ತು ಪಿಯುಸಿ ಎರಡರಲ್ಲೂ ಮರು ಎಣಿಕೆ, ಮರು ಮೌಲ್ಯಮಾಪನ ಮತ್ತು ಪೂರಕ ಪರೀಕ್ಷೆಯ ಅವಕಾಶವಿದೆ. ಕೆಲವೊಮ್ಮೆ ಕಣ್ತಪ್ಪಿನಿಂದ ಅಂಕಗಳು ವ್ಯತ್ಯಾಸವಾಗಿರಬಹುದು. 73ರ ಬದಲು 37 ಆಗಿರಬಹುದು. ಆದರೆ ಇವುಗಳ ಬಗ್ಗೆ ದುಡುಕದೆ ಮುಂದಾಲೋಚನೆ ಉತ್ತಮ. 
 
ಶಿಕ್ಷಕರ ಪಾತ್ರವೇನು?
ತಮ್ಮ ವಿದ್ಯಾರ್ಥಿಗಳ ಫ‌ಲಿತಾಂಶದ ಬಗ್ಗೆ ಶಿಕ್ಷಕರಿಗೆ ಕುತೂಹಲ ಸಹಜ. ಫ‌ಲಿತಾಂಶ ಪ್ರಕಟವಾದ ಬಳಿಕವಂತೂ ಶಿಕ್ಷಕರು ತಮ್ಮ ಎಲ್ಲ ವಿದ್ಯಾರ್ಥಿಗಳನ್ನು ಕೂಡ ಸಮಾನವಾಗಿ ಕಾಣುವುದು ಅತ್ಯಗತ್ಯ. ಅನುತ್ತೀರ್ಣರಾದ ಅಥವಾ ನಿರೀಕ್ಷೆಗಿಂತ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮಾತನಾಡಿಸುತ್ತಾ ಅವರಲ್ಲಿ ಆತ್ಮಸ್ಥೈರ್ಯ ತುಂಬಿಸುವ ಕೆಲಸ ಮಾಡಬೇಕು. ಮರು ಮೌಲ್ಯಮಾಪನದ ಬಗ್ಗೆ ತಿಳಿಹೇಳಬೇಕು. ಮಕ್ಕಳ ಭವಿಷ್ಯದಲ್ಲಿ  ನಮ್ಮದೂ ಒಂದು ಪಾಲಿದೆ ಎಂಬುದನ್ನು ಮರೆಯಬಾರದು.  

ಹೆತ್ತವರಿಗೆ ಕಿವಿಮಾತು
-  ವಿದ್ಯಾರ್ಥಿಗಳೊಂದಿಗೆ ಮಾತನಾಡಿ. 
-  ಫ‌ಲಿತಾಂಶದ ಬಗ್ಗೆ ಆತಂಕವಿದ್ದರೆ ದೂರ ಮಾಡಿ. ಧೈರ್ಯ ತುಂಬಿ.
-  ಇತರ ಮಕ್ಕಳೊಂದಿಗೆ ಹೋಲಿಸದಿರಿ
-  ಕಡಿಮೆ ಅಂಕ ಬಂದರೂ  ಮಗುವಿಗೆ  ಬೇರೆ ಪ್ರತಿಭೆ ಇದೆ ಎಂಬುದನ್ನು ನಿರ್ಲಕ್ಷ್ಯ ಮಾಡದಿರಿ.
-  ಸ್ನೇಹಿತರೊಂದಿಗೆ ಮಕ್ಕಳು ಬೆರೆಯಲಿ, ಅದಕ್ಕೆ ಅಡ್ಡಿ ಬೇಡ.
-  ಮಕ್ಕಳು ಮೆಚ್ಚಿನ ಶಿಕ್ಷಕರ ಜತೆ ಮಾತನಾಡಲು ಅವಕಾಶ ಕೊಡಿ . 

ದುಡುಕದಿರಿ
22 ವರ್ಷದವರೆಗೆ ಮೆದುಳಿನ ಪ್ರಿಫ್ರಂಟಲ್‌ ಕಾರ್ಟೆಕ್ಸ್‌ ಪೂರ್ಣವಾಗಿ ಬೆಳೆದಿರುವುದಿಲ್ಲ. ಆದ್ದರಿಂದ ದುಡುಕುತನವಿರುತ್ತದೆ. ಆದ್ದರಿಂದ ಹೆತ್ತವರು ಸೂಕ್ಷ್ಮವಾಗಿರಬೇಕು. ಪರೀಕ್ಷೆ ಎನ್ನುವುದು ಶಿಕ್ಷಣ ವ್ಯವಸ್ಥೆಯ ಒಂದು ಭಾಗ. ಅದೇ ಜೀವನ ಎಂದುಕೊಳ್ಳಬಾರದು. 
– ಡಾ| ವಿರೂಪಾಕ್ಷ ದೇವರಮನೆ, ಮನೋವೈದ್ಯರು

– ಸಂತೋಷ್‌ ಬೊಳ್ಳೆಟ್ಟು 

Advertisement
Advertisement

Udayavani is now on Telegram. Click here to join our channel and stay updated with the latest news.

Next