ಬೆಂಗಳೂರು: ಕೋರಮಂಗಲದ 100 ಅಡಿ ಮುಖ್ಯ ರಸ್ತೆಯಲ್ಲಿರುವ ಈಜೀಪುರ ಮುಖ್ಯ ರಸ್ತೆ -ಒಳವರ್ತುಲ ರಸ್ತೆ ಜಂಕ್ಷನ್‌ನಿಂದ ಸೋನಿ ವರ್ಲ್ಡ್ ಜಂಕ್ಷನ್ ಮಾರ್ಗವಾಗಿ ಕೇಂದ್ರೀಯ ಸದನ ಜಂಕ್ಷನ್‌ವರೆಗೆ ಮೇಲ್ಸೇತುವೆ ನಿರ್ಮಾಣ ಯೋಜನೆಗೆ ಮುಖ್ಯಮಂತ್ರಿಗಳು ಜುಲೈ 24ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ, 204 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲು ಪಾಲಿಕೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈಗಾಗಲೇ ಯೋಜನೆಯ ಟೆಂಡರ್‌ಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಈ ಮೇಲ್ಸೇತುವೆ ಇಂದಿರಾನಗರ ಹಾಗೂ ಎಲೆಕ್ಟ್ರಾನಿಕ್ ಸಿಟಿ ನಡುವೆ ಸಂಪರ್ಕ ಕಲ್ಪಿಸಲಿದೆ.
ಮೇಲ್ಸೇತುವೆ ನಿರ್ಮಾಣ ಕಮಗಾರಿಯನ್ನು ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ನೀಡಲಾಗಿದೆ. ನಿರ್ಮಾಣಕ್ಕೆ 30 ತಿಂಗಳ ಅವಧಿ ನಿಗದಿಪಡಿಸಲಾಗಿದೆ. ನಂತರದಲ್ಲಿ ಈ ಭಾಗದಲ್ಲಿನ ಶೇ.39.69ರಷ್ಟು ವಾಹನ ದಟ್ಟಣೆ ಕಡಿಮೆಯಾಗಲಿದೆ ಎಂದು ಪಾಲಿಕೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಈ ಭಾಗದಲ್ಲಿ ಬರುವ ಈಜೀಪುರ ಮುಖ್ಯರಸ್ತೆ – ಒಳವರ್ತುಲ ರಸ್ತೆ, ಸೋನಿ ವರ್ಲ್ಡ್, ಕೇಂದ್ರೀಯ ಸದನ, ಕೋರಮಂಗಲ 8ನೇ ಮುಖ್ಯ ರಸ್ತೆ, ಕೋರಮಂಗಲ 60 ಅಡಿ ರಸ್ತೆ, ಕೋರಮಂಗಲ 5ನೇ ಬ್ಲಾಕ್ – 1ನೇ ಅಡ್ಡರಸ್ತೆ ಹಾಗೂ ಕೋರಮಂಗಲ ಬಿಡಿಎ ವಾಣಿಜ್ಯ ಸಂಕೀರ್ಣ ಜಂಕ್ಷನ್‌ಗಳನ್ನು ಗುತ್ತಿಗೆದಾರರು ನಿರ್ವಹಣೆ ಮಾಡಬೇಕಾಗುತ್ತದೆ.
ಯೋಜನೆ ವಿವರ
-ಯೋಜನೆ ವೆಚ್ಚ 204 ಕೋಟಿ ರೂ.
-ಮೇಲ್ಸೇತುವೆ ಉದ್ದ 2.40 ಕಿಲೋ ಮೀಟರ್
-ಪಥಗಳ ಸಂಖ್ಯೆ ದ್ವಿಮುಖ ಸಂಚಾರದ 4 ಪಥಗಳು
-ಮೇಲ್ಸೇತುವೆಯ ಎತ್ತರ 5.50 ಮೀಟರ್
-ಮೇಲ್ಸೇತುವೆ ಅಗಲ 2×7.50 ಮೀಟರ್
-ಯೋಜನೆಗೆ ಅಗತ್ಯವಿರುವ ಭೂಮಿಯ ವಿಸ್ತೀರ್ಣ 4819.26 ಚದರ ಮೀಟರ್