Advertisement
ಐದು ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಆಡಳಿತಾರೂಡ ಪಕ್ಷಕ್ಕೆ ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲು ವಿಧೇಯಕ ಸಂಸತ್‌ನಲ್ಲಿ ಅನುಮೋದನೆಗೊಂಡಿರುವುದು ಮುಂದಿನ ಚುನಾವಣೆಯಲ್ಲಿ ಧನಾತ್ಮಕವಾಗಿ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲೋಕಸಭಾ ಸ್ಥಾನ ಗೆದ್ದುಕೊಳ್ಳಲು ಅನುಕೂಲವಾಗಲಿದೆ. ಇತರ ಹಿಂದುಳಿದ ವರ್ಗಗಳ ಆಯೋಗ (ಒಬಿಸಿ)ಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದ್ದು, ದಲಿತರು ಮತ್ತು ಬುಡಕಟ್ಟು ವರ್ಗಗಳ ಜನರ ಮೇಲಿನ ದೌರ್ಜನ್ಯ ಕಾಯ್ದೆಯನ್ನು ಬಲವರ್ಧನೆ ಮಾಡಿದ್ದು, ರೈತರ ಕಲ್ಯಾಣಕ್ಕಾಗಿ ಕೈಗೊಂಡಿರುವ ಹಲವು ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಬಿಜೆಪಿ ಮೂಲಗಳು ಹೇಳಿವೆ. 2014ರ ಚುನಾವಣೆಯಲ್ಲಿ ಬಿಜೆಪಿ 283 ಸ್ಥಾನಗಳನ್ನು ಗೆದ್ದು ಇತ್ತೀಚಿನ ವರ್ಷಗಳಲ್ಲಿ ಬಹುಮತ ಸಾಧಿಸಿದ ಒಂದೇ ಪಕ್ಷ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಅದನ್ನು ಉಳಿಸಿಕೊಂಡು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಪಕ್ಷದ ಅಧ್ಯಕ್ಷ ಅಮಿತ್ ಶಾ ಚುನಾವಣಾ ತಂತ್ರ ರೂಪಿಸಿದ್ದಾರೆ.
ರಾಮಲೀಲಾ ಮೈದಾನದಲ್ಲಿ ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ಪ್ರಧಾನ ಮಂತ್ರಿಗಳ ಕಚೇರಿ ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲಿಂದಲೇ ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ಸಂಬಂಧಿಸಿದ ದೈನಂದಿನ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ. ಸೌತ್ ಬ್ಲಾಕ್‌ನಲ್ಲಿರುವ ಪ್ರಧಾನಿ ಕಚೇರಿಯಲ್ಲಿ ಯಾವ ರೀತಿಯಲ್ಲಿ ವ್ಯವಸ್ಥೆ ಇರಲಿದೆಯೋ ಅದನ್ನೇ ಯಥಾವತ್ ಅಳವಡಿಸಿಕೊಳ್ಳಲಾಗುತ್ತದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗಾಗಿ ಪ್ರತ್ಯೇಕ ಲಾಂಜ್‌ಗಳನ್ನು ನಿರ್ಮಿಸಲಾಗುತ್ತದೆ. ಅಲ್ಲಿ ಸಂಪೂರ್ಣ ವೈ-ಫೈ ವ್ಯವಸ್ಥೆ ಇರಲಿದೆ. ಇದರ ಜತೆಗೆ ಪಕ್ಷದ ಅಧ್ಯಕ್ಷ ಅಮಿತ್ ಶಾಗೂ ತಾತ್ಕಾಲಿಕ ಕಚೇರಿ ವ್ಯವಸ್ಥೆ ಮಾಡಲಾಗಿದೆ.