Advertisement

ಇಂದಿನಿಂದ ಭಕ್ತರ ಪ್ರವೇಶ: ವಿವಿಧ ದೇವಸ್ಥಾನಗಳಲ್ಲಿ ಸಕಲ ಸಿದ್ಧತೆ

12:16 AM Jun 08, 2020 | Sriram |

ಉಡುಪಿ: ಕೋವಿಡ್-19 ಕಾರಣದ ಲಾಕ್‌ಡೌನ್‌ ಆರಂಭವಾದಂದಿನಿಂದ ಭಕ್ತರ ಪ್ರವೇಶಕ್ಕೆ ಅವಕಾಶ ಕೊಡದ ದೇವಸ್ಥಾನಗಳು ಸೋಮವಾರದಿಂದ ಭಕ್ತರ ಪ್ರವೇಶಕ್ಕೆ ಅವಕಾಶ ಕೊಡುತ್ತಿವೆ.

Advertisement

ಸುಮಾರು ಎರಡೂವರೆ ತಿಂಗಳ ಬಳಿಕ ದೇವಸ್ಥಾನಗಳು ತೆರೆದುಕೊಳ್ಳುತ್ತಿರುವುದ ರಿಂದ ಕೊಲ್ಲೂರು, ಮಂದಾರ್ತಿ, ಕಮಲಶಿಲೆ, ಕೋಟೇಶ್ವರ, ಕುಂದೇಶ್ವರ, ಆನೆಗುಡ್ಡೆ, ಹಟ್ಟಿಯಂಗಡಿ, ಶ್ರೀಕ್ಷೇತ್ರ ಚಂಡಿಕಾಂಬಾ ದೇವಸ್ಥಾನ, ಸೌಕೂರು ದುರ್ಗಾಪರಮೇಶ್ವರಿ ದೇಗುಲ, ಕ್ರೋಢ
ಶಂಕರನಾರಾಯಣ ದೇಗುಲ, ಕೊಡವೂರು ಶಂಕರನಾರಾಯಣ, ಕಾಪು, ಎಲ್ಲೂರು, ಪಡುಬಿದ್ರಿ, ಕಟಪಾಡಿ ದೇವಸ್ಥಾನ, ಉಡುಪಿ ಆಸುಪಾಸಿನ ದೇವಿ ದೇವಸ್ಥಾನ ಗಳು ಸೇರಿದಂತೆ ಬಹುತೇಕ ದೇವಸ್ಥಾನಗಳ ಆಡಳಿತ ಮಂಡಳಿಗಳು ಭಕ್ತರನ್ನು ಸ್ವಾಗತಿಸಲು ಸಿದ್ಧತೆ ನಡೆಸಿವೆ.

ಊಟ, ತೀರ್ಥ ಸೇವೆ ಇಲ್ಲ
ಸ್ಯಾನಿಟೈಸರ್‌ ಬಳಕೆ, ಮಾಸ್ಕ್ ಧರಿಸಿ ಒಳಪ್ರವೇಶಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು ಇತ್ಯಾದಿ ಷರತ್ತುಗಳನ್ನು ಪಾಲಿಸಲು ದೇವಸ್ಥಾನಗಳು ಕಟಿಬದ್ಧವಾಗಿವೆ. ಅನ್ನದಾಸೋಹ ನಡೆಯುತ್ತಿದ್ದ ಬಹುತೇಕ ದೇವಸ್ಥಾನಗಳಲ್ಲಿ ಅನ್ನ ದಾಸೋಹವನ್ನು ಆರಂಭಿಸುತ್ತಿಲ್ಲ. ಸರಕಾರದ ನಿಯಮಾವಳಿ ಪ್ರಕಾರ ತೀರ್ಥ ಪ್ರಸಾದಗಳ ವಿತರಣೆ, ಯಾವುದೇ ಸೇವಾದಿಗಳೂ ನಡೆಯುತ್ತಿಲ್ಲ.

ಕುಳಿತುಕೊಳ್ಳುವಂತಿಲ್ಲ
ಭಕ್ತರು ದೇವರ ವಿಗ್ರಹಕ್ಕೆ ಕೈ ಮುಗಿ ಯಲು ಮಾತ್ರ ಅವಕಾಶ, ಕುಳಿತು ಕೊಳ್ಳುವಂತಿಲ್ಲ. ನಮಸ್ಕಾರ ಮಾಡುವಾಗ ಆರು ಅಡಿ ಅಂತರ ಕಾಪಾಡಿಕೊಳ್ಳಬೇಕು ಎಂಬ ನಿಯಮ ಜಾರಿಗೊಳಿಸಲು ಸರಕಾರ ನಿರ್ದೇಶನ ನೀಡಿದೆ.

ಶ್ರೀಕೃಷ್ಣಮಠದಲ್ಲಿಲ್ಲ
ಶ್ರೀಕೃಷ್ಣಮಠದಲ್ಲಿ ಸೋಮವಾರದಿಂದ ದರ್ಶನಾವಕಾಶ ಇಲ್ಲ. ಇನ್ನೂ 20-30 ದಿನ ಬಿಟ್ಟು ಆಗಿನ ವಾತಾವರಣ ನೋಡಿ ಭಕ್ತರಿಗೆ ದರ್ಶನಾವಕಾಶ ಕಲ್ಪಿಸಲಾಗುತ್ತದೆ.

Advertisement

ಮಾರಣಕಟ್ಟೆಯಲ್ಲಿ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಜೂ. 15ರ ಸಂಕ್ರಾಂತಿ ಬಳಿಕ ಭಕ್ತರಿಗೆ ಪ್ರವೇಶ ನೀಡಲು ನಿರ್ಧರಿಸಲಾಗಿದೆ.

ಹೊರ ಪ್ರಾಕಾರದಲ್ಲಿ ದರ್ಶನ
ಉಡುಪಿ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನ, ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಗರ್ಭಗುಡಿ ಹೊರಗಿನ ಪ್ರಾಕಾರವನ್ನು ಪ್ರವೇಶಿಸಲು ಅನುಮತಿ ಇಲ್ಲ. ಹೊರ ಪ್ರಾಕಾರದಲ್ಲಿಯೇ ಸ್ಟೀಲ್‌ ಗೇಟ್‌ಗೆ ಬೀಗ ಹಾಕಲಾಗುತ್ತದೆ. ಅಲ್ಲಿಂದಲೇ ದೇವರ ದರ್ಶನ ಮಾಡಬೇಕು. ಮಂಗಳಾರತಿ ಮಾಡಿದ ಆರತಿ ಸ್ವೀಕರಿಸುವ ಕ್ರಮವನ್ನೂ ಕೈಬಿಡಲಾಗಿದೆ. ಮಂಗಳಾರತಿ ನೋಡಲು ಮಾತ್ರ ಅವಕಾಶವಿದೆ. ಕುಂದಾಪುರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲಾಕ್‌ಡೌನ್‌ ಅವಧಿಯಂತೆ ಮುಂದುವರಿಯಲಿದೆ.

“ಸೋಂಕಿದೆ ಎಚ್ಚರಿಕೆ’ ನಾಮಫ‌ಲಕ
“ಸಮೀಪ ನಿಂತಿರುವವರಿಗೆ ಸೋಂಕಿರಬಹುದು, ಎಚ್ಚರಿಕೆ’ ಎಂಬ ನಾಮಫ‌ಲಕವನ್ನು ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದಲ್ಲಿ ಅಳವಡಿಸಲಾಗುತ್ತದೆ. ಇಂತಹ ನಾಲ್ಕೈದು ಫ‌ಲಕಗಳನ್ನು ಹಾಕಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಧರ್ಮದರ್ಶಿ
ಡಾ| ನಿ.ಬೀ. ವಿಜಯ ಬಲ್ಲಾಳ್‌ ತಿಳಿಸಿದ್ದಾರೆ.

ಪುರಾಣಗಳ ಸಂದೇಶ ಸರಕಾರದಿಂದ ಜಾರಿ!
ಧರ್ಮಶಾಸ್ತ್ರ, ಪುರಾಣಗಳಲ್ಲಿ ದೇವರು, ಗುರುಗಳಲ್ಲಿ ಹೋಗುವಾಗ ಬರಿಗೈಯಲ್ಲಿ ಹೋಗಬಾರದು ಎಂಬ ಸಂದೇಶವಿದೆ. ಇದೇ ವೇಳೆ ಏನೂ ಇಲ್ಲದಾಗ ಕೈಮುಗಿದು ಹೋಗಬೇಕೆಂಬ ನಿರ್ದೇಶನವೂ ಇದೆ. ಶ್ರದ್ಧಾಭಕ್ತಿಯಿಂದ ಕೈಮುಗಿಯುವುದೂ ಅತಿ ದೊಡ್ಡ ಸೇವೆ ಎಂಬ ಪರಿಕಲ್ಪನೆಯನ್ನು ಶಾಸ್ತ್ರಗಳು ಸಾರಿವೆ. ಈಗ ಈ ಸಂದೇಶವನ್ನು ಕೊರೊನಾ ವೈರಸ್‌ ಸರಕಾರದ ಮೂಲಕ ಜಾರಿಗೊಳ್ಳುವಂತೆ ನೋಡಿಕೊಂಡಿದೆ. ಆದೇಶ ಕೊಟ್ಟ ಸರಕಾರಕ್ಕೂ ಈ ಶಾಸ್ತ್ರ ಸಂದೇಶ ಗೊತ್ತಿರಲಿಕ್ಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next