Advertisement

ಇಂದು ಸಿಹಿ ಊಟದೊಂದಿಗೆ ಶಾಲೆಗಳ ಪುನಾರಂಭ

12:48 PM May 28, 2018 | |

ಚಿಕ್ಕಬಳ್ಳಾಪುರ: 2017-18ನೇ ಸಾಲಿನ ವಾರ್ಷಿಕ ಪರೀಕ್ಷೆಗಳ ಮುಗಿದ ಬಳಿಕ ಬರೋಬ್ಬರಿ ಎರಡು ತಿಂಗಳ ಕಾಲ ಬೇಸಿಗೆ ರಜೆಗಳನ್ನು ಕಳೆದ ವಿದ್ಯಾರ್ಥಿಗಳು ಸೋಮವಾರದಿಂದ ತಮ್ಮ ಶಾಲೆಗಳತ್ತ ಮುಖ ಮಾಡಲಿದ್ದು, ಜಿಲ್ಲಾದ್ಯಂತ ಶೈಕ್ಷಣಿಕ ವರ್ಷದ ಪುನಾರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

Advertisement

ಈಗಾಗಲೇ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಶೈಕ್ಷಣಿಕ ವರ್ಷದ ಪುನಾರಂಭಕ್ಕೆ ಬೇಕಾದ ಎಲ್ಲಾ ರೀತಿಯ
ಸಿದ್ಧತೆಗಳನ್ನು ಕೈಗೊಂಡಿದ್ದು, ವಾರದ ಹಿಂದೆ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಹಾಗೂ ಪ್ರೌಢ ಶಾಲಾ ಮುಖ್ಯ
ಶಿಕ್ಷಕರ ಸಭೆ ಕರೆದು ಶಾಲೆಗಳ ಪುನಾರಂಭದ ವೇಳೆ ಹಾಗೂ ವರ್ಷವೀಡಿ ಕೈಗೊಳ್ಳಬೇಕಾದ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಬಗ್ಗೆ ಸಲಹೆ, ಸೂಚನೆ ಹಾಗೂ ಇಲಾಖೆ ಹೊರಡಿಸಿರುವ ಶೈಕ್ಷಣಿಕ ವರ್ಷದ ಸುತ್ತೋಲೆಗಳನ್ನು ಒದಗಿಸಲಗಿದೆ.

1,596 ಸರ್ಕಾರಿ ಶಾಲೆ: ಜಿಲ್ಲಾದ್ಯಂತ ಒಟ್ಟು 1,596 ಸರ್ಕಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳು ಇದ್ದು ಜಿಲ್ಲೆಯ ಆರು ತಾಲೂಕುಗಳಲ್ಲಿ 107 ಸರ್ಕಾರಿ ಪ್ರೌಢಶಾಲೆಗಳು ಇವೆ. ಆ ಪೈಕಿ ಬಾಗೇಪಲ್ಲಿ ತಾಲೂಕಿನಲ್ಲಿ 307 ಪ್ರಾಥಮಿಕ ಹಾಗೂ 20 ಸರ್ಕಾರಿ ಪ್ರೌಢಶಾಲೆಗಳಿದ್ದರೆ, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 249 ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ 14 ಪ್ರೌಢ ಶಾಲೆಗಳು, ಚಿಂತಾಮಣಿ ತಾಲೂಕಿನಲ್ಲಿ 360 ಸರ್ಕಾರಿ ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ 23 ಪ್ರೌಡ ಶಾಲೆಗಳಿವೆ. ಗೌರಿಬಿದನೂರು ತಾಲೂಕಿನಲ್ಲಿ 309 ಹಿರಿಯ ಹಾಗೂ 22 ಪ್ರೌಢಶಾಲೆಗಳಿವೆ. ಗುಡಿಬಂಡೆ ತಾಲೂಕಿನಲ್ಲಿ 108 ಹಿರಿಯ ಪ್ರಾಥಮಿಕ ಹಾಗೂ 11 ಪ್ರೌಢ ಶಾಲೆಗಳಿದ್ದರೆ ಶಿಡ್ಲಘಟ್ಟದಲ್ಲಿ 263 ಹಿರಿಯ ಪ್ರಾಥಮಿಕ ಹಾಗೂ 17 ಸರ್ಕಾರಿ ಪ್ರೌಢ ಶಾಲೆಗಳಿವೆ.
 
ಮೊದಲ ದಿನ ಮಕ್ಕಳಿಗೆ ಸಿಹಿ ಊಟ: ಶಾಲೆ ಆರಂಭಗೊಳ್ಳುವ ದಿನದಂದು ಸೋಮವಾರ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ಊಟ ತಯಾರಿಸಿ ಬಡಿಸುವಂತೆ ಅಯಾ ಶಾಲಾ ಮುಖ್ಯ ಶಿಕ್ಷಕರಿಗೆ ಸುತ್ತೋಲೆ ಮೂಲಕ ಸೂಚಿಸಲಾಗಿದೆ.
 
ಮಕ್ಕಳನ್ನು ಭವ್ಯವಾಗಿ ಸ್ವಾಗತಿಸಿ ಶಾಲಾ ಆರಂಭೋತ್ಸವವನ್ನು ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರ ಸಹಭಾಗಿತ್ವದಲ್ಲಿ ಹಬ್ಬದಂತೆ ಆಚರಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ ಶಿವಣ್ಣರೆಡ್ಡಿ ತಿಳಿಸಿದರು.

ವರ್ಷವೀಡಿ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಮೊದಲ ದಿನ ಶಿಕ್ಷಕರು ಕಾರ್ಯ ಯೋಜನೆ ರೂಪಿಸಲಿದ್ದಾರೆ. ಅಧಿಕೃತವಾಗಿ ಮಂಗಳವಾರ ತರಗತಿಗಳು ಆರಂಭಗೊಳ್ಳಲಿವೆ. ಮಳೆಗಾಲ ಶುರುವಾಗಿರುವುದರಿಂದ ಪಾಳು ಬಿದ್ದ ಶಾಲಾ ಕೊಠಡಿಗಳನ್ನು ಹಾಗೂ ಮೇಲ್ಛಾಣಿಗಳನ್ನು ಪರಿಶೀಲಿಸುವಂತೆ ಅಯಾ ತಾಲೂಕಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ ಎಂದು ತಿಳಿದು ಬಂದಿದೆ.

ಶಾಲೆ ತಲುಪಿದ ಪಠ್ಯ ಪುಸ್ತಕ, ಸಮವಸ್ತ್ರ ಜಿಲ್ಲೆಯಲ್ಲಿರುವ ಒಟ್ಟು 1,596 ಸರ್ಕಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ
ಶಾಲೆಗಳು ಹಾಗೂ 107 ಸರ್ಕಾರಿ ಪ್ರೌಢಶಾಲೆಗಳಲ್ಲಿ ಒಟ್ಟು ಅಂದಾಜು ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 2018-19ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಬೇಕಾದ 1 ರಿಂದ 10 ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ತಾಲೂಕುವಾರು ವಿದ್ಯಾರ್ಥಿಗಳಿಗೆ ಅನುಗುಣವಾಗಿ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಶಾಲೆಗಳಿಗೆ ಸರಬರಾಜು ಮಾಡಿದ್ದು, ಶಾಲೆ ಆರಂಭದ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಎಸ್‌ಡಿಎಂಸಿ ಸಮಿತಿ ಅಧ್ಯಕ್ಷರ ಹಾಗೂ ಸದಸ್ಯರ ಸಮ್ಮುಖದಲ್ಲಿ ಅಯಾ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲು ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್‌.ಶಿವಣ್ಣರೆಡ್ಡಿ “ಉದಯವಾಣಿ’ಗೆ ತಿಳಿಸಿದರು.

Advertisement

ಮಕ್ಕಳ ದಾಖಲಾತಿ ಆಂದೋಲನ ಚುರುಕು ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಹಾಜರಾತಿ ಪ್ರಮಾಣ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ 2018-19ನೇ ಸಾಲಿಗೆ ಮಕ್ಕಳ ದಾಖಲಾತಿ ಆಂದೋಲನವನ್ನು ಚುರುಕುಗೊಳಿಸಿದೆ. ಅಯಾ ಶಾಲೆಗಳ ಮುಖ್ಯ ಶಿಕ್ಷಕರ ನೇತೃತ್ವದಲ್ಲಿ ಸಹ ಶಿಕ್ಷಕರು ದಾಖಲಾತಿ ಆಂದೋಲನದಲ್ಲಿ ತೊಡಗಿದ್ದು, ಜೊತೆಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಪತ್ತೆ ಕಾರ್ಯದಲ್ಲಿ ಶಿಕ್ಷಕರು ಮಗ್ನರಾಗಿದ್ದಾರೆ. ಕಳೆದ ವರ್ಷದಲ್ಲಿ ಶಾಲೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಯಾರ ಕೂಡ ಶಾಲೆಯಿಂದ ಹೊರಗುಳಿಯಬಾರದು ಹಾಗೂ ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಿ ಶಾಲಾ ದಾಖಲಾತಿ ಹೆಚ್ಚಿಸುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next