Advertisement

ರಾಜ್ಯದಲ್ಲಿ ಮೋದಿ ಗರ್ಜನೆ ಆರಂಭ

06:00 AM Feb 04, 2018 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪರಿವರ್ತನಾ ಯಾತ್ರೆ ಸಮಾರೋಪದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಆಗಮಿಸುತ್ತಿದ್ದು, ಈ ಮೂಲಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

Advertisement

ರಾಜ್ಯದ 224 ಕ್ಷೇತ್ರಗಳನ್ನು ಪರಿವರ್ತನಾ ಯಾತ್ರೆ ಮೂಲಕ ಸಂಚರಿಸಿ ಬಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರ ತಂಡಕ್ಕೆ ನರೇಂದ್ರ ಮೋದಿ ಆಗಮನ “ಟಾನಿಕ್‌’ನಂತಾಗಿದೆ.
ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಬೃಹತ್‌ ಸಮಾವೇಶದಲ್ಲಿ ನಾಲ್ಕು ಲಕ್ಷ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನಕ್ಕೆ ರಾಜ್ಯ ಬಿಜೆಪಿ ಸಜ್ಜಾಗಿದೆ. ನರೇಂದ್ರ ಮೋದಿ ಭಾಗಿಯಾಗುವ ಸಮಾವೇಶ ಐತಿಹಾಸಿಕವಾಗಿಸಲು ರಾಜ್ಯದ ಸಮಸ್ತ ಬಿಜೆಪಿ ನಾಯಕರು ಕಳೆದೊಂದು ವಾರದಿಂದ ಶ್ರಮಿಸಿದ್ದಾರೆ.

ನರೇಂದ್ರ ಮೋದಿಯವರ ಪರಿವರ್ತನಾ ಯಾತ್ರೆಯ ಸಮಾರೋಪ ಭಾಷಣ, ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲು ಬಿಜೆಪಿ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ತಂದುಕೊಡಲಿದೆ ಎಂಬ ನಿರೀಕ್ಷೆ ರಾಜ್ಯ ನಾಯಕರದ್ದಾಗಿದೆ.
ಭಾನುವಾರ ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ಮೋದಿ ಪರಿವರ್ತನಾ ಯಾತ್ರೆಯ ಸಮಾರೋಪ ಭಾಷಣ ಮಾಡಲಿದ್ದು, ವಿಪಕ್ಷ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸುವ ಸಾಧ್ಯತೆ ಇದೆ.

ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಮಹದಾಯಿ ವಿವಾದ ಕುರಿತು ಸಮಾವೇಶದಲ್ಲಿ ಮೋದಿ ಅವರು ಪ್ರಸ್ತಾಪಿಸಿ ಪರಿಹಾರದ ಭರವಸೆ ನೀಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಮೋದಿ ಅವರು ಮಹದಾಯಿ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಈಗಾಗಲೇ ಪರೋಕ್ಷವಾಗಿ ಹೇಳಿದ್ದಾರೆ. ಆದರೂ ಪ್ರಧಾನಿ ಈ ಬಗ್ಗೆ ಪ್ರಸ್ತಾಪಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

ಬಿಜೆಪಿ ಶಕ್ತಿ ಪ್ರದರ್ಶನ:
ನವೆಂಬರ್‌ ಮೊದಲ ವಾರ ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ನಿರೀಕ್ಷೆಯಷ್ಟು ಜನ ಸೇರಿರಲಿಲ್ಲ. ಕಾರ್ಯಕ್ರಮದ ನಂತರ ಅಮಿತ್‌ ಶಾ ಅವರು ರಾಜ್ಯ ಬಿಜೆಪಿ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಹೀಗಾಗಿ ಸಮಾರೋಪ ಸಮಾರಂಭ ಯಾವುದೇ ರೀತಿಯ ಮುಜುಗರಕ್ಕೆ ಸಿಲುಕದಂತೆ ಬಿಜೆಪಿ ನಾಯಕರು ಎಚ್ಚರಿಕೆ ವಹಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಅರಮನೆ ಮೈದಾನವನ್ನು ಹತ್ತು ದಿನಗಳಿಂದ ಸಜ್ಜುಗೊಳಿದ್ದಾರೆ. ರಾಜಧಾನಿ ಸೇರಿ 30 ಜಿಲ್ಲೆಯ ಸುಮಾರು 4 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸಮಾರೋಪಕ್ಕೆ ಕರೆತರಲು ಬಿಜೆಪಿ ನಾಯಕರು ಕಂಕಣತೊಟ್ಟಿದ್ದಾರೆ. ಈ ಮೂಲಕ ಪ್ರಧಾನಿಯವರ ಮುಂದೆ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.

Advertisement

ಅರಮನೆ ಮೈದಾನದ ಸುತ್ತಲೂ ಬಿಜೆಪಿ ಬಾವುಟ ರಾರಾಜಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಕಟೌಟ್‌, ಅಮಿತ್‌ ಶಾ, ಯಡಿಯೂರಪ್ಪ, ಸದಾನಂದಗೌಡ, ಅನಂತಕುಮಾರ್‌ ಮೊದಲಾದ ನಾಯಕರ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಸ್ಯಾಂಕಿ ರಸ್ತೆಯ ವಿಂಡ್ಸರ್‌ ಮ್ಯಾನರ್‌ ವೃತ್ತದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಬಾವುಟಗಳು ಹಾರಾಡುತ್ತಿವೆ. ಕಾರ್ಯಕ್ರಮಕ್ಕೆ ಆಗಮಿಸುವ ಕಾರ್ಯಕರ್ತರಿಗೆ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.

ನರೇಂದ್ರಮೋದಿ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರ್ಯಕರ್ತರಿಗೆ ರಾಜ್ಯದ ವಿವಿಧೆಡೆಯಿಂದ ಹತ್ತು ರೈಲುಗಳಲ್ಲಿ ಪ್ರತ್ಯೇಕ ಬೋಗಿಗಳನ್ನು ಕಾಯ್ದಿರಿಸಲಾಗಿದೆ.

ವೇದಿಕೆ ನಿರ್ವಹಣೆಗೆ ಸಮಿತಿ
ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿರುವ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಅವರ ಸ್ವಾಗತ ವ್ಯವಸ್ಥೆಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ ತುಳಸಿ ಮುನಿರಾಜು ಗೌಡ, ವಿಧಾನ ಪರಿಷತ್‌ ಸದಸ್ಯ ಲೆಹರ್‌ ಸಿಂಗ್‌, ಮುಖಂಡರಾದ ವೆಂಕಟಸ್ವಾಮಿ ರೆಡ್ಡಿ, ಎಂ.ವೇಣುಗೋಪಾಲ್‌ ಮತ್ತು ಆರ್‌.ಪ್ರಕಾಶ್‌ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಅದೇ ರೀತಿ ಸಮಾವೇಶ ನಡೆಯಲಿರುವ ವೇದಿಕೆಯ ಸಮೀಪದಲ್ಲಿ ವೇದಿಕೆ ಏರುವವರನ್ನು ಹೊರತುಪಡಿಸಿ ಉಳಿದವರು ಬಾರದಂತೆ ನೋಡಿಕೊಳ್ಳಲು ಮುಖಂಡರಾದ ಸುಬ್ಬನರಸಿಂಹ, ಎಂ.ಜಯದೇವ್‌, ಎಸ್‌.ಮುನಿರಾಜು ಮತ್ತು ಪಿ.ಎನ್‌.ಸದಾಶಿವ ಅವರನ್ನೊಳಗೊಂಡ ಸಮಿತಿ ಕಾರ್ಯನಿರ್ವಹಿಸಲಿದೆ.

ಮೋದಿ ಆಗಮನ 2.30ಕ್ಕೆ
ಪರಿವರ್ತನಾ ಯಾತ್ರೆಯ ಸಮಾರೋಪ ವೇದಿಕೆಯಲ್ಲಿ ಪ್ರಧಾನಿ ಮೋದಿ ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರ್‌ರಾವ್‌, ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌, ಸಹ ಉಸ್ತುವಾರಿ ಪಿಯೂಷ್‌ ಗೋಯೆಲ…, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್‌, ರಮೇಶ್‌ ಜಿಗಜಿಣಗಿ, ನಿರ್ಮಲಾ ಸೀತಾರಾಮನ್‌ ಸೇರಿ ರಾಜ್ಯ ಹಾಗೂ ಕೇಂದ್ರದ ನಾಯಕರು ಭಾಗವಹಿಸಲಿದ್ದಾರೆ. ಭಾನುವಾರ ಮಧ್ಯಾಹ್ನ 2.30ಕ್ಕೆ ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಎಚ್‌ಎಎಲ… ವಿಮಾನ ನಿಲ್ದಾಣಕ್ಕೆ ಮೋದಿ ಅವರು ಆಗಮಿಸಲಿದ್ದಾರೆ. ಅಲ್ಲಿಂದ ನೇರವಾಗಿ ಅವರನ್ನು ಅರಮನೆ ಮೈದಾನಕ್ಕೆ ಹೆಲಿಕಾಪ್ಟರ್‌ ಮೂಲಕ ಕರೆತರುವ ವ್ಯವಸ್ಥೆ ಮಾಡಲಾಗಿದೆ.

ಊಟ, ಸ್ವತ್ಛತಾ ನಿರ್ವಹಣೆಗೆ ತಂಡ
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನೇತೃತ್ವದಲ್ಲಿ ಊಟದ ವ್ಯವಸ್ಥೆಗೆ ಸಮಿತಿ ರಚಿಸಲಾಗಿದೆ. ಆರು ಅಡುಗೆ ಮನೆಯಲ್ಲಿ 600 ಮಂದಿ ಆಹಾರ ಸಿದ್ಧಪಡಿಸುವ ವ್ಯವಸ್ಥೆಯಾಗಿದ್ದು, ವಿತರಣೆಗೆ 250 ಕೌಂಟರ್‌ ತೆರೆಯಲಾಗಿದೆ. ಇದಕ್ಕಾಗಿ 2000 ಕಾರ್ಯಕರ್ತರ ತಂಡ ರಚಿಸಲಾಗಿದೆ. ಸ್ವತ್ಛತೆಗೆ ಆದ್ಯತೆ ನೀಡುವ ಉದ್ದೇಶದಿಂದ ಬಿಬಿಎಂಪಿ ಸದಸ್ಯ ಮಂಜುನಾಥ್‌ ನೇತೃತ್ವದ ತಂಡ ಸ್ವತ್ಛತೆಯ ಬಗ್ಗೆ ಮುತುವರ್ಜಿ ವಹಿಸಲಿದೆ. 800 ಕಾರ್ಯಕರ್ತರು, 200ಕ್ಕೂ ಹೆಚ್ಚು ಸಿಬ್ಬಂದಿ ಸ್ವತ್ಛತೆಯ ನಿರ್ವಹಣೆ ಮಾಡಲಿ¨ªಾರೆ. ಯುವ ಮೋರ್ಚಾ ಅಧ್ಯಕ್ಷ ಸಪ್ತಗಿರಿ ಗೌಡ ನೇತೃತ್ವದಲ್ಲಿ ಭದ್ರತಾ ತಂಡ ರಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next