Advertisement

ಇಂದು ಸರಣಿ ನಿರ್ಣಾಯಕ ಹೋರಾಟ; ಹರ್ಷಲ್‌, ಚಹಲ್‌ ಫಾರ್ಮ್ ಕಡೆ ಗಮನ

11:32 AM Sep 25, 2022 | Team Udayavani |

ಹೈದರಾಬಾದ್‌: ಆತಿಥೇಯ ಭಾರತ ಮತ್ತು ಆಸ್ಟ್ರೇಲಿಯವು ರವಿ ವಾರ ನಡೆಯುವ ಟಿ20 ಸರಣಿಯ ನಿರ್ಣಾಯಕ ಮೂರನೇ ಪಂದ್ಯಕ್ಕೆ ಎಲ್ಲ ರೀತಿಯಲ್ಲಿ ಸಜ್ಜುಗೊಂಡಿದೆ. ಈ ಮಹತ್ವದ ಪಂದ್ಯದಲ್ಲಿ ಎಲ್ಲರ ಗಮನವು ಪ್ರಮುಖ ಬೌಲರ್‌ಗಳಾದ ಹರ್ಷಲ್‌ ಪಟೇಲ್‌, ಯಜುವೇಂದ್ರ ಚಹಲ್‌ ಅವರ ಫಾರ್ಮ್ ಬಗ್ಗೆ ಇರಲಿದೆ.

Advertisement

ನಾಗ್ಪುರದಲ್ಲಿ ಶುಕ್ರವಾರ ಒದ್ದೆ ಅಂಗಳದಿಂದಾಗಿ ಎಂಟು ಓವರ್‌ಗಳಿಗೆ ಸೀಮಿತಗೊಂಡ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಭಾರತ ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಮೊದಲ ಪಂದ್ಯವನ್ನು ಆಸ್ಟ್ರೇಲಿಯ 4 ವಿಕೆಟ್‌ಗಳಿಂದ ಜಯಿಸಿತ್ತು. ಬ್ಯಾಟಿಂಗ್‌ ಅಬ್ಬರದಿಂದ ಭಾರತ ಗೆಲುವು ಸಾಧಿ ಸಿತ್ತು. ಆದರೆ ಪ್ರವಾಸಿ ತಂಡದ ಬ್ಯಾಟಿಂ ಗನ್ನು ಕಟ್ಟಿಹಾಕಬೇಕಾದರೆ ಹರ್ಷಲ್‌ ಮತ್ತು ಚಹಲ್‌ ಸಹಿತ ನಮ್ಮ ಬೌಲರ್‌ಗಳು ಪರಿಣಾಮಕಾರಿಯಾಗಿ ದಾಳಿ ಸಂಘಟಿಸಬೇಕಾಗಿದೆ.

ನಾಗ್ಪುರ ಪಂದ್ಯದಲ್ಲಿ ಭಾರತ ಉತ್ತಮ ರೀತಿಯಲ್ಲಿ ಆಟ ಆರಂಭಿಸಿತ್ತು. ಅಕ್ಷರ್‌ ಪಟೇಲ್‌ ನಿಖರ ದಾಳಿ ಸಂಘಟಿಸಿ ಆಸ್ಟ್ರೇಲಿಯದ ರನ್‌ವೇಗಕ್ಕೆ ಕಡಿವಾಣ ಹಾಕಿದ್ದರು. ಆದರೆ ಆಬಳಿಕ ಆಸ್ಟ್ರೇಲಿಯ ಸಿಡಿದ ಕಾರಣ 5 ವಿಕೆಟಿಗೆ 90 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ಭಾರತ 7.2 ಓವರ್‌ಗಳಲ್ಲಿ ಜಯಭೇರಿ ಬಾರಿಸಿತ್ತು.

ಜಸ್‌ಪ್ರೀತ್‌ ಬುಮ್ರಾ ಬೌಲಿಂಗ್‌ ದಾಳಿಯ ಜವಾಬ್ದಾರಿಯನ್ನು ವಹಿಸು ವುದು ಖಚಿತವಾಗಿದೆ. ಆದರೆ ಡೆತ್‌ ಓವರ್‌ಗಳಲ್ಲಿ ಭುವನೇಶ್ವರ್‌ ಕುಮಾರ್‌ ಅವರ ಕಳಪೆ ನಿರ್ವಹಣೆ ನಿಜಕ್ಕೂ ಚಿಂತೆಗೆ ಕಾರಣವಾಗಿದೆ. ಅವರು ಏಷ್ಯಾ ಕಪ್‌ ಮತ್ತು ಆಸ್ಟ್ರೇಲಿಯ ವಿರುದ್ಧದ ಮೊದಲ ಪಂದ್ಯದಲ್ಲೂ ಬಹಳಷ್ಟು ಒದ್ದಾಡಿದ್ದರು. ಈ ಕಾರಣದಿಂದಾಗಿ ದ್ವಿತೀಯ ಪಂದ್ಯಕ್ಕೆ ಅವರನ್ನು ಕೈಬಿಡಲಾಗಿತ್ತು.

ಡೆತ್‌ ಓವರ್‌ ಸ್ಪೆಷಲಿಸ್ಟ್‌ ಹರ್ಷಲ್‌ ಗಾಯದಿಂದ ಮರಳಿದ್ದರೂ ಶ್ರೇಷ್ಠ ನಿರ್ವಹಣೆ ದಾಖಲಿಸಲು ಕೆಲವು ಪಂದ್ಯಗಳಲ್ಲಿ ಆಡಬೇಕಾದ ಅಗತ್ಯವಿದೆ. ಕಳೆದ ಆರು ಓವರ್‌ಗಳಲ್ಲಿ ಸರಾಸರಿ 13.50ರಂತೆ ಅವರು 81 ರನ್‌ ನೀಡಿ ದುಬಾರಿ ಬೌಲರ್‌ ಎಂದೆನಿಸಿಕೊಂಡಿದ್ದಾರೆ. ನಿಖರ ದಾಳಿ ಸಂಘಟಿಸಲು ಅವರು ಒದ್ದಾ ಡುತ್ತಿದ್ದಾರೆ. ಸ್ಪಿನ್‌ ದಾಳಿಯೇ ಭಾರತದ ಶಕ್ತಿಯಾಗಿರುವ ಕಾರಣ ಚಹಲ್‌, ಹರ್ಷಲ್‌ ಉತ್ತಮ ನಿರ್ವಹಣೆ ನೀಡಬೇಕಾಗಿದೆ. ಅಕ್ಷರ್‌ ಪಟೇಲ್‌ ಮತ್ತು ಬುಮ್ರಾ ಉತ್ತಮ ಫಾರ್ಮ್ ನಲ್ಲಿರುವುದು ಭಾರತಕ್ಕೆ ಸಮಾಧಾನ ತಂದಿದೆ.

Advertisement

ಸ್ಥಿರ ನಿರ್ವಹಣೆ ಅಗತ್ಯ
ಬ್ಯಾಟಿಂಗ್‌ನಲ್ಲಿ ಅಗ್ರ ಕ್ರಮಾಂಕದ ಆಟಗಾರರಾದ ರೋಹಿತ್‌, ರಾಹುಲ್‌ ಮತ್ತು ಕೊಹ್ಲಿ ಇನ್ನಷ್ಟು ಸ್ಥಿ ನಿರ್ವಹಣೆ ನೀಡಬೇಕಾದ ಅಗತ್ಯವಿದೆ. ಈ ಮೂವರು ಒಟ್ಟಿಗೆ ಸಿಡಿಯಲಿಲ್ಲ. ಸೂರ್ಯಕುಮಾರ್‌ ಯಾದವ್‌ ಕಳೆದ ಕೆಲವು ಪಂದ್ಯಗಳಲ್ಲಿ ನೀರಸವಾಗಿ ಆಡುತ್ತಿದ್ದರೆ ಹಾರ್ದಿಕ್‌ ಪಾಂಡ್ಯ ಮ್ಯಾಚ್‌ ವಿನ್ನಿಂಗ್‌ ನಿರ್ವಹಣೆ ನೀಡುತ್ತಿದ್ದಾರೆ. ಗಾಯಗೊಂಡ ರವೀಂದ್ರ ಜಡೇಜ ಅವರ ಬದಲಿಗೆ ಆಡುತ್ತಿರುವ ಅಕ್ಷರ್‌ ಪಟೇಲ್‌ಗೆ ನಿರ್ಣಾಯಕ ಪಂದ್ಯದಲ್ಲೂ ಆಡುವ ಅವಕಾಶ ನೀಡುವ ಸಾಧ್ಯತೆಯಿದೆ. ರಿಷಬ್‌ ಪಂತ್‌ ಬಿಟ್ಟರೆ ಅವರೊಬ್ಬರೇ ತಂಡದಲ್ಲಿರುವ ಎಡಗೈ ಬ್ಯಾಟ್ಸ್‌ಮನ್‌ ಆಗಿದ್ದಾರೆ.

ಬೌಲಿಂಗ್‌ ಬಗ್ಗೆ ಚಿಂತೆ
ಇನ್ನೊಂದು ಕಡೆ ಆಸ್ಟ್ರೇಲಿಯ ಕೂಡ ತನ್ನ ಬೌಲಿಂಗ್‌ ಪಡೆಯ ಬಗ್ಗೆ ಚಿಂತೆ ಮಾಡುತ್ತಿದೆ. ದ್ವಿತೀಯ ಪಂದ್ಯದಲ್ಲಿ ಭಾರತೀಯರ ಬ್ಯಾಟಿಂಗ್‌ ವೈಭವಕ್ಕೆ ಕಡಿವಾಣ ಹಾಕಲು ಆಸೀಸ್‌ ಬೌಲರ್‌ಗಳು ವಿಫ‌ಲರಾಗಿರುವುದೇ ಚಿಂತೆಗೆ ಕಾರಣವಾಗಿದೆ. ಗಾಯಗೊಂಡ ನಥನ್‌ ಎಲಿಸ್‌ ಅವರ ಅನುಪಸ್ಥಿತಿಯಲ್ಲಿ ಪ್ಯಾಟ್‌ ಕಮ್ಮಿನ್ಸ್‌, ಹೇಝಲ್‌ವುಡ್‌, ಡೇನಿಯಲ್‌ ಸ್ಯಾಮ್ಸ್‌ ಮತ್ತು ಆಲ್‌ರೌಂಡರ್‌ ಕ್ಯಾಮರಾನ್‌ ಗ್ರೀನ್‌ ದುಬಾರಿಯಾಗಿದ್ದರು. ಫಿಂಚ್‌ ಮತ್ತು ವೇಡ್‌ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರೆ ಬಿಗ್‌ ಹಿಟ್ಟರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಕಳಪೆ ಫಾರ್ಮ್ ಮುಂದುವರಿದಿದೆ. ಎರಡು ಪಂದ್ಯಗಳಲ್ಲಿ ಅವರು ಒಂದೇ ರನ್‌ ಗಳಿಸಿದ್ದರು.

ಉಭಯ ತಂಡಗಳು
ಭಾರತ: ರೋಹಿತ್‌ ಶರ್ಮ (ನಾಯಕ), ಕೆಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡ, ರಿಷಬ್‌ ಪಂತ್‌, ದಿನೇಶ್‌ ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ, ಆರ್‌. ಅಶ್ವಿ‌ನ್‌, ಯಜುವೇಂದ್ರ ಚಹಲ್‌, ಅಕ್ಷರ್‌ ಪಟೇಲ್‌, ಭುವನೇಶ್ವರ್‌ ಕುಮಾರ್‌, ಹರ್ಷಲ್‌ ಪಟೇಲ್‌, ದೀಪಕ್‌ ಚಹರ್‌, ಜಸ್‌ಪ್ರೀತ್‌ ಬುಮ್ರಾ, ಉಮೇಶ್‌ ಯಾದವ್‌.

ಆಸ್ಟ್ರೇಲಿಯ: ಆರನ್‌ ಫಿಂಚ್‌ (ನಾಯಕ), ಸೀನ್‌ ಅಬೋಟ್‌, ಆಸ್ಟನ್‌ ಅಗರ್‌, ಪ್ಯಾಟ್‌ ಕಮ್ಮಿನ್ಸ್‌, ಟಿಮ್‌ ಡೇವಿಡ್‌, ನಥನ್‌ ಎಲ್ಲಿಸ್‌, ಕ್ಯಾಮರಾನ್‌ ಗ್ರೀನ್‌, ಜೋಶ್‌ ಹೇಝಲ್‌ವುಡ್‌, ಜೋಶ್‌ ಇಂಗ್ಲಿಷ್‌, ಗ್ಲೆನ್‌ ಮ್ಯಾಕ್ಸ್‌ ವೆಲ್‌, ಕೇನ್‌ ರಿಚಡ್ಸನ್‌, ಡೇನಿಯಲ್‌ ಸ್ಯಾಮ್ಸ್‌, ಸ್ಟೀವ್‌ ಸ್ಮಿತ್‌, ಮ್ಯಾಥ್ಯೂ ವೇಡ್‌, ಆ್ಯಡಮ್‌ ಝಂಪ.

Advertisement

Udayavani is now on Telegram. Click here to join our channel and stay updated with the latest news.

Next