Advertisement
2022ರ ಪಂದ್ಯಾವಳಿಯಲ್ಲಿ ರೋಹಿತ್ ಶರ್ಮ ಬಳಗದ್ದು ಈವರೆಗೆ ವಿನ್‌ಲೆಸ್ ಆಟ. ಸೋಲಿನ ಮೇಲೆ ಸೋಲು. ಆತಿಥೇಯ ತಂಡವೆಂಬ ಹೆಗ್ಗಳಿಕೆ ಹೊಂದಿದ್ದರೂ ಆಡಿದ ನಾಲ್ಕೂ ಪಂದ್ಯಗಳಲ್ಲೂ ಲಾಗ ಹಾಕಿದೆ.
Related Articles
ಮುಂಬೈ ತನ್ನ ಹಿಂದಿನ ಪಂದ್ಯದಲ್ಲಿ ಆರ್‌ಸಿಬಿಗೆ 7 ವಿಕೆಟ್‌ಗಳಿಂದ ಶರಣಾಗಿತ್ತು. ಇನ್ನೊಂದೆಡೆ ಪಂಜಾಬ್ 6 ವಿಕೆಟ್‌ಗಳಿಂದ ನೂತನ ತಂಡವಾದ ಗುಜರಾತ್ ವಿರುದ್ಧ ಎಡವಿತ್ತು. ಹೀಗಾಗಿ ಪಂಜಾಬ್‌ಗೂ ಇಲ್ಲಿ ಗೆಲುವಿನ ಹಳಿ ಏರುವ ಅಗತ್ಯವಿದೆ.
Advertisement
ಎಲ್ಲ ತಂಡಗಳಂತೆ ಮುಂಬೈ ಬ್ಯಾಟಿಂಗ್ ಸರದಿಯಲ್ಲೂ ಈ ಬಾರಿ ಬಹಳಷ್ಟು ಬದಲಾವಣೆ ಕಂಡುಬಂದಿದೆ. ಉಳಿದ ಕೆಲವು ತಂಡಗಳು ಕೂಡಲೇ ಪರಿಸ್ಥಿತಿಗೆ ಹೊಂದಿಕೊಂಡರೆ ರೋಹಿತ್ ಪಡೆ ಮಾತ್ರ ಪರದಾಡುತ್ತಲೇ ಇದೆ.
ಮುಂಬೈ ಬ್ಯಾಟಿಂಗ್ ಲೈನ್‌ಅಪ್ ತೀರಾ ಕಳಪೆಯೇನಲ್ಲ. ರೋಹಿತ್ ಶರ್ಮ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ, ಡಿವಾಲ್ಡ್ ಬ್ರೇವಿಸ್, ಕೈರನ್ ಪೊಲಾರ್ಡ್… ಹೀಗೆ ಸಾಗುತ್ತದೆ.
ಆದರೆ ಆರ್‌ಸಿಬಿ ಎದುರಿನ ಕಳೆದ ಪಂದ್ಯದಲ್ಲಿ 79ಕ್ಕೆ 6 ವಿಕೆಟ್ ಉದುರಿಸಿಕೊಂಡದ್ದು ಮುಂಬೈ ಬ್ಯಾಟಿಂಗ್ ಸಂಕಟವನ್ನು ತೆರೆದಿಟ್ಟಿದೆ. ಸೂರ್ಯಕುಮಾರ್ ಅಜೇಯ 68 ರನ್ ಮಾಡಿದ್ದರಿಂದ ಮೊತ್ತ ನೂರೈವತ್ತರ ಗಡಿ ದಾಟಿತ್ತು.
ಇಲ್ಲಿ ಎಲ್ಲರೂ ಬಿಗ್ ಹಿಟ್ಟರ್‌ಗಳೇ. ಆದರೆ ಯಾರೂ ದೊಡ್ಡ ಇನ್ನಿಂಗ್ಸ್ ಕಟ್ಟುತ್ತಿಲ್ಲ, ಉತ್ತಮ ಜತೆಯಾಟವನ್ನೂ ನಿಭಾಯಿಸುತ್ತಿಲ್ಲ. ಆರಂಭದಲ್ಲಿ ರೋಹಿತ್ ಸಿಡಿದು ನಿಂತರೆ, ಕೊನೆಯಲ್ಲಿ ಪೊಲಾರ್ಡ್ ಸ್ಫೋಟಿಸಿದರೆ ಮುಂಬೈ ತಂಡದ ಬಹುತೇಕ ಚಿಂತೆ ದೂರಾದಂತೆ.
ದೊಡ್ಡ ಮೊತ್ತದ ಚಿಂತೆಮುಂಬೈ ಮೇಲುಗೈ ಸಾಧಿಸಬೇಕಾದರೆ ದೊಡ್ಡ ಮೊತ್ತ ದಾಖಲಾಗಬೇಕಾದ ಅಗತ್ಯವಿದೆ. ಕಾರಣ, ಮುಂಬೈ ಬೌಲಿಂಗ್ ಕಳೆದ ಸಲದಷ್ಟು ಘಾತಕವಾಗಿಲ್ಲ. ಮೊದಲ ಪಂದ್ಯದಲ್ಲಿ ಚೆನ್ನಾಗಿ ದಂಡಿಸಿಕೊಂಡ ಬುಮ್ರಾ ಇನ್ನೂ ಲಯ ಕಂಡುಕೊಂಡಿಲ್ಲ. ಆರ್‌ಸಿಬಿ ವಿರುದ್ಧ ಮೊದಲ ಬೌಲಿಂಗ್ ಬದಲಾವಣೆ ರೂಪದಲ್ಲಿ ದಾಳಿಗೆ ಇಳಿದು ವಿಕೆಟ್ ಲೆಸ್ ಎನಿಸಿದ್ದರು. ಬಾಸಿಲ್ ಥಂಪಿ, ಜೈದೇವ್ ಉನಾದ್ಕತ್, ಸ್ಪಿನ್ನರ್ ಮುರುಗನ್ ಅಶ್ವಿನ್ ಭಾರೀ ಅಪಾಯಕಾರಿಗಳಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಟ್ರೆಂಟ್ ಬೌಲ್ಟ್ ತಂಡದಿಂದ ಬೇರ್ಪಟ್ಟಿದ್ದರ ಪರಿಣಾಮ ಈಗ ಅರಿವಿಗೆ ಬರುತ್ತಿದೆ. ಒಟ್ಟಾರೆ ಮುಂಬೈ ಸಾಧ್ಯವಾದಷ್ಟು ಬೇಗ ಗೆಲುವಿನ ಖಾತೆ ತೆರೆಯಬೇಕಿದೆ. ಇಲ್ಲವಾದರೆ 10 ತಂಡಗಳ ಪೈಪೋಟಿಯಲ್ಲಿ ರೋಹಿತ್ ಬಳಗ ತೀವ್ರ ಹಿನ್ನಡೆಗೆ ಸಿಲುಕಿ ಬೇಗನೇ ಕೂಟದಿಂದ ಹೊರಬೀಳುವ ಅಪಾಯಕ್ಕೆ ಸಿಲುಕುವುದು ಖಂಡಿತ. ಪಂಜಾಬ್ ಬ್ಯಾಟಿಂಗ್ ಬಲಿಷ್ಠ
ಮುಂಬೈಗೆ ಹೋಲಿಸಿದರೆ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಹೆಚ್ಚು ಬಲಿಷ್ಠ. ಅಗರ್ವಾಲ್, ಧವನ್, ಬೇರ್‌ಸ್ಟೊ, ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮ… ಹೀಗೆ ಅಗ್ರ ಕ್ರಮಾಂಕ ಆಕರ್ಷಣೀಯ. ಆದರೆ ಶಾರೂಖ್ ಖಾನ್ ಮತ್ತು ಒಡೀನ್ ಸ್ಮಿತ್ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿಡಿದು ನಿಂತಿಲ್ಲ. ಆದರೂ ಗುಜರಾತ್ ಎದುರಿನ ಕಳೆದ ಪಂದ್ಯದಲ್ಲಿ 9ಕ್ಕೆ 189 ರನ್ ಪೇರಿಸುವಲ್ಲಿ ಯಶಸ್ವಿಯಾಗಿತ್ತು. ಇದನ್ನು ಉಳಿಸಿಕೊಳ್ಳಲು ಮಾತ್ರ ಸಾಧ್ಯವಾಗಿರಲಿಲ್ಲ. ಕಾರಣ, ಸಾಮಾನ್ಯ ಮಟ್ಟದ ಬೌಲಿಂಗ್. ಗುಜರಾತ್ ನಾಲ್ಕೇ ವಿಕೆಟಿಗೆ 190 ರನ್ ಬಾರಿಸಿ ಗೆದ್ದು ಬಂದಿತು. ಕಾಗಿಸೊ ರಬಾಡ ಅವರಿಗೆ ಸೂಕ್ತ ಜತೆಗಾರನ ಕೊರತೆ ಇದೆ. ಬಹುಶಃ ಸಂದೀಪ್ ಶರ್ಮ ಬಂದರೆ ಕಾಂಬಿನೇಶನ್ ಸರಿಹೊಂದೀತು. ವೈಭವ್ ಅರೋರಾ, ಆರ್ಷದೀಪ್ ಸಿಂಗ್, ರಾಹುಲ್ ಚಹರ್, ಸ್ಮಿತ್ ಗುಜರಾತ್ ವಿರುದ್ಧ ಯಾವುದೇ ಪರಿಣಾಮ ಬೀರಿರಲಿಲ್ಲ.