ಬೆಂಗಳೂರು: ರಾಜಧಾನಿ ಬೆಂಗಳೂರು ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಸಜ್ಜುಗೊಂಡಿದೆ. ಇಸ್ಕಾನ್ ಬೆಂಗಳೂರು ವತಿಯಿಂದ ರಾಜಾಜಿನಗರದ ವೆಸ್ಟ್‌ಆಫ್ ಕಾರ್ಡ್ ರಸ್ತೆಯಲ್ಲಿರುವ ಇಸ್ಕಾನ್ ದೇವಸ್ಥಾನದಲ್ಲಿ ಬೆಳಗ್ಗೆ 9ರಿಂದ ರಾತ್ರಿ 10 ಗಂಟೆವರೆಗೆ ದರ್ಶನ ಇರುತ್ತದೆ.
ಹಾಗೆಯೇ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ಸೇವೆ, ವಿಷ್ಣು ಸಹಸ್ರನಾಮ ಪಠಣ, ಮಕ್ಕಳಿಗಾಗಿ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿರುವ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಲಿದ್ದು, ವೀರಗಾಸೆ, ಪೂಜಾಕುಣಿತ, ತಮಟೆ ವಾದನ, ಮಹಿಳಾ ನಗಾರಿ, ಡೊಳ್ಳು ಕುಣಿತ, ಕಂಸಾಳೆ, ಗಾರಡಿ ಗೊಂಬೆ, ಚಿಟ್ಟಿ ಮೇಳ, ಕಂಬು ಕಹಳೆ, ಪಟಾ ಕುಣಿತ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಿರ್ಮಾಣ ದೇವಾಲಯಗಳ ವಿಶ್ವಸ್ಥ ಮಂಡಳಿಯಿಂದ ಕೃಷ್ಣಾಷ್ಟಮಿ ಅಂಗವಾಗಿ ವಿಷ್ಣು ಸಹಸ್ರನಾಮ, ಕೃಷ್ಣಾಷ್ಟೋತ್ತರಶತನಾಮಾರ್ಚನೆ, ಪ್ರಾದುರ್ಭಾವ ಕಾಲದಲ್ಲಿ ಸಪರಿವಾರನಾದ ಹಾಗೂ ಅಘ ಪ್ರದಾನ ನಡೆಯಲಿದೆ.ಇಂದಿರಾನಗರದ ಚಿನ್ಮಯ ಮಿಷನ್‌ನಿದ ಶ್ರೀ ಕೃಷ್ಣ ಜಯಂತಿ ಮಹೋತ್ಸವದ ಅಂಗವಾಗಿ ಅಭಿಷೇಕ, ವಿಷ್ಣುಹೋಮ, ಭಜನೆ, ಮಧ್ಯರಾತ್ರಿ ನಾಮಜಪ ಹಾಗೂ ಆರತಿ ನಡೆಯಲಿದೆ.
ಪರ್ಯಾಯ ಮಾರ್ಗ ಬಳಸಲು ಮನವಿ: ಇಸ್ಕಾನ್‌ನಲ್ಲಿ ಕೃಷ್ಣ ಜನ್ಮಾಷ್ಟಮಿ ಉತ್ಸವ ಇರುವುದರಿಂದ ಸೆ.2ರಂದು ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಸ್ಯಾಂಡಲ್ ಸೋಫ್ ಪ್ಯಾಕ್ಟರಿ ವೃತ್ತ, ಪಶ್ಚಿಮ ಕಾರ್ಡ್ ರಸ್ತೆ, ಡಾ.ರಾಜ್‌ಕುಮಾರ್ ರಸ್ತೆಯಲ್ಲಿ (ಓರಾಯನ್ ಮಾಲ್) ವಾಹನ ಸಂಚಾರ ಅಧಿಕವಾಗಿರುತ್ತದೆ.
ಆದ್ದರಿಂದ ಸಾರ್ವಜನಿಕ ವಾಹನ ಸವಾರರು ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ಸ್ಯಾಂಡಲ್ ಸೋಫ್ ಪ್ಯಾಕ್ಟರಿ ವೃತ್ತ, ಪಶ್ಚಿಮ ಕಾರ್ಡ್ ರಸ್ತೆ, ಡಾ.ರಾಜ್ ಕುಮಾರ್ ರಸ್ತೆಯನ್ನು ಹೊರತು ಪಡಿಸಿ ಪರ್ಯಾಯ ಮಾರ್ಗದಲ್ಲಿ ಹಾದು ಹೋಗುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.