Advertisement
ಪಶ್ಚಿಮಘಟ್ಟವೆಂಬ ನಿಧಿಜೀವವೈವಿಧ್ಯ ತಾಣವೆನಿಸಿರುವ ಪಶ್ಚಿಮ ಘಟ್ಟ 4,500 ಜಾತಿಯ ಹೂ ಬಿಡುವ ಸಸ್ಯಗಳು, 650 ಜಾತಿಯ ಮರಗಳನ್ನು ಒಳಗೊಂಡಿದೆ. ಈ ಸಹ್ಯಾದ್ರಿ ಪರ್ವತ ಶ್ರೇಣಿ ಪ್ರಪಂಚದ 34 ಗ್ರೀನ್ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದೆ. ಕೇರಳ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಗುಜರಾತ್ ಸಹಿತ ಭಾರತದ ಕೊಂಕಣ ಕರಾವಳಿಯ ಉದ್ದಕ್ಕೂ 1,600 ಕಿ.ಮೀ. ವಿಸ್ತಾರವಾಗಿ ಹರಡಿಕೊಂಡಿರುವ ಪಶ್ಚಿಮಘಟ್ಟ ಅತ್ಯಮೂಲ್ಯ ಸಸ್ಯ ಮತ್ತು ಪ್ರಾಣಿ ಸಂಕುಲಗಳ ಬೀಡು. ಈ ಘಟ್ಟ ಶ್ರೇಣಿಯ ಅರ್ಧಕ್ಕೂ ಅಧಿಕ ಭಾಗ ಕರ್ನಾಟಕದಲ್ಲಿದೆ.
ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದಗಳು ಸೇರಿ 325 ಪ್ರಾಣಿ ಸಂಕುಲ, 139 ತಳಿಯ ಸಸ್ತನಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ. ಇದರಲ್ಲಿ ಅಳಿವಿನಂಚಿನಲ್ಲಿರುವ ಪುನುಗು ಬೆಕ್ಕು ಮತ್ತು ಸಿಂಗಳೀಕಗಳು ಸೇರಿವೆ. ಕರ್ನಾಟಕದ ವ್ಯಾಪ್ತಿಯಲ್ಲಿನ ಪಶ್ಚಿಮಘಟ್ಟ 6 ಸಾವಿರಕ್ಕೂ ಅಧಿಕ ಆನೆಗಳ ಆವಾಸ ಸ್ಥಾನವಾಗಿದೆ. ದೇಶದಲ್ಲಿಯೇ ಹೆಚ್ಚಿನ ಸಂಖ್ಯೆಯ ಹುಲಿಗಳು ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹರಡಿ ಕೊಂಡಿರುವ ಪಶ್ಚಿಮ ಘಟ್ಟಗಳಲ್ಲಿವೆ. ಜಿಂಕೆ, ಕರಡಿ, ಚಿರತೆ, ಕಾಡುಹಂದಿ ಮೊದಲಾದ ಪ್ರಾಣಿಗಳು ಕೇರಳ ಮತ್ತು ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಸಾಮಾನ್ಯ ವಾಗಿವೆ. ಬಹುದೊಡ್ಡ ಜೀವ ವೈವಿಧ್ಯ ಹೊಂದಿರುವ ಪಶ್ಚಿಮಘಟ್ಟವನ್ನು ಗಣಿಗಾರಿಕೆ, ಕೈಗಾರಿಕೆ ಮತ್ತು ಇತರೆಲ್ಲ ರೀತಿಯ ಅಭಿವೃದ್ಧಿ ಚಟುವಟಿಕೆಯಿಂದ ಮುಕ್ತವಾಗಿಸಿ ಅದನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಕಾಡು ಒತ್ತುವರಿಗೆ ಕಡಿವಾಣ ಅಗತ್ಯ
ಮಲೆನಾಡು, ಕರಾವಳಿ ಭಾಗದಲ್ಲಿ ವಿಪರೀತ ಕಾಡುಗಳ ಒತ್ತುವರಿ, ನೀರಾವರಿ ಯೋಜನೆ, ಹೆದ್ದಾರಿ ವಿಸ್ತರಣೆ ಕಾಮಗಾರಿಗಳಿಂದಾಗಿ ವನ್ಯಜೀವಿಗಳ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮಗಳುಂಟಾ ಗುತ್ತಿವೆ. ಅಲ್ಲದೆ ಕಾಡು ಪ್ರಾಣಿಗಳು ಜನ ವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಆಹಾರ, ಔಷಧ, ಸುಗಂಧ ದ್ರವ್ಯಕ್ಕಾಗಿ ವನ್ಯಜೀವಿಗಳ ಚರ್ಮ, ಉಗುರು, ಕೊಂಬು, ದಂತಗಳ ಮಾರಾಟವು ಅಕ್ರಮವಾಗಿ ನಡೆಯುತ್ತಿರುವುದರಿಂದ ಹಲವು ಪ್ರಾಣಿಗಳ ಸಂತತಿ ಅಳಿವಿ ನಂಚಿನಲ್ಲಿವೆ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಪ್ರಕೃತಿ ಯಲ್ಲಿ ಅಸಮತೋಲನ ಕಂಡುಬರಲಿದೆ ಮತ್ತು ಮುಂದಿನ ಪೀಳಿಗೆ ಬಹು ದೊಡ್ಡ ಗಂಡಾಂತರ ಎದುರಿಸ ಬೇಕಾಗುತ್ತದೆ. ಅಳಿವಿನಂಚಿನ ಪ್ರಭೇದಗಳ ಸಂರಕ್ಷಣೆ
ಕಾಡು ಪ್ರಾಣಿಗಳು ಮತ್ತು ಸಸ್ಯಗಳು ಆಂತರಿಕ ಮೌಲ್ಯ ಹೊಂದಿದೆ. ವನ್ಯಜೀವಿಗಳು ಪರಿಸರ ವ್ಯವಸ್ಥೆಗಳನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಜಗತ್ತಿನ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ವನ್ಯಜೀವಿ ದಿನಾಚರಣೆಯ ಧ್ಯೇಯವಾಗಿದೆ. 2003 ಡಿ.3 ರಲ್ಲಿ ನಡೆದ ವಿಶ್ವಸಂಸ್ಥೆಯ 68ನೇ ಅಧಿವೇಶನದಲ್ಲಿ ಮಾ.3 ಅನ್ನು ವಿಶ್ವ ವನ್ಯಜೀವಿ ದಿನವೆಂದು ಘೋಷಿಸಲಾಯಿತು. “ಪರಿಸರ ವ್ಯವಸ್ಥೆ ಮರುಸ್ಥಾಪನೆಗಾಗಿ ಅಳಿವಿನಂಚಿನ ಪ್ರಭೇದಗಳ ಸಂರಕ್ಷಣೆ’ ಎಂಬ ಧ್ಯೇಯದೊಂದಿಗೆ ಈ ವರ್ಷ ವಿಶ್ವ ವನ್ಯಜೀವಿ ದಿನವನ್ನು ಆಚರಿಸಲಾಗುತ್ತಿದೆ.
Advertisement
ಸಿಂಗಳೀಕ ಸಂತತಿಯ ಉಳಿವಿಗೆ ಪ್ರಯತ್ನ ಅಗತ್ಯ ಕೋತಿಗಳ ಜಾತಿಯಲ್ಲಿ ಅತ್ಯಂತ ಶಿಸ್ತುಬದ್ಧ ಜೀವನಕ್ರಮ ಹೊಂದಿರುವ ಸಿಂಗಳೀಕದ ಸಂತತಿ ಅಳಿವಿನಂಚಿನಲ್ಲಿರುವ ಬಗ್ಗೆ ವಿಶ್ವ ಸಂಸ್ಥೆ ವನ್ಯಜೀವಿ ಮಂಡಳಿ ಕಳವಳನ್ನು ವ್ಯಕ್ತಪಡಿಸಿತ್ತು. ಭಾರತ ಸರಕಾರ ಇದನ್ನು ಶೆಡ್ನೂಲ್1ರ ಭಾಗ 1ರಲ್ಲಿ ವಿಶೇಷ ಸಂರಕ್ಷಣ ಜೀವಿ ಎಂದು ಗುರುತಿಸಿದೆ. ಪ್ರಪಂಚದಲ್ಲಿ ಎಲ್ಲಿಯೂ ಕಾಣ ಸಿಗದ ಈ ವಿಶೇಷ ಜಾತಿಯ ಮಂಗ ಭಾರತದಲ್ಲಿ ಅದರ ಲ್ಲಿಯೂ ಮಧ್ಯ ಪಶ್ಚಿಮಘಟ್ಟದಲ್ಲಿ ಮಾತ್ರ ಕಾಣಸಿಗುತ್ತದೆ. ಕೇರಳ, ತಮಿಳುನಾಡು, ಕರ್ನಾಟಕದ ಕೆಲವು ಅರಣ್ಯ ಪ್ರದೇಶ ಗಳು ಮಾತ್ರ ಇವುಗಳ ವಾಸ ಸ್ಥಾನ. ಪರಿಸರ ತಜ್ಞರು, ಅರಣ್ಯ ಇಲಾಖೆಯ ಅಂದಾಜಿನ ಪ್ರಕಾರ ಸದ್ಯ ದೇಶದಲ್ಲಿ 3 ಸಾವಿರ ದಿಂದ 3,500 ಸಿಂಗಳೀಕಗಳಿವೆ. ಸದಾ ಮರದಿಂದ ಮರಕ್ಕೆ ಜಿಗಿಯುತ್ತಾ ತಮ್ಮ ಬದುಕು ಕಂಡುಕೊಳ್ಳುತ್ತಿದ್ದ ಸಿಂಗಳೀಕ ಗಳ ಜೀವನ ಕ್ರಮ ಈಗ ಬದಲಾಗಿದೆ. ಜನ ಓಡಾಟ ವಿರುವ ಪ್ರದೇಶ, ಅರಣ್ಯ ಪ್ರದೇಶಗಳಲ್ಲಿನ ರಸ್ತೆಗಳಲ್ಲೂ ಇವೀಗ ಕಾಣಸಿಗುತ್ತಿವೆ. ಮನುಷ್ಯರು ನೀಡುವ ಕುರು ಕಲು ತಿಂಡಿಯ ಆಸೆಗೆ ಕೈಚಾಚುತ್ತಿವೆ. ಇದರಿಂದ ಅವುಗಳ ಆರೋಗ್ಯ, ಜೀವನಕ್ರಮದ ಮೇಲೆ ಪ್ರತಿಕೂಲ ಪರಿಣಾಮಗಳುಂಟಾಗುತ್ತಿದ್ದು ವರ್ಷಗಳು ರುಳಿದಂತೆಯೇ ಇವುಗಳ ಸಂಖ್ಯೆ ಕ್ಷೀಣಿಸುತ್ತಲೇ ಸಾಗಿದೆ. ಹೀಗಾಗಿ ದೇಶದಲ್ಲಿ ಸಿಂಗಳೀಕ ಸಂತತಿಯ ಉಳಿವಿಗಾಗಿ ಕೇಂದ್ರ, ರಾಜ್ಯ ಸರಕಾರ ವಿಶೇಷ ಒತ್ತು ನೀಡಬೇಕು. ಕೃತಕ ಬುದ್ಧಿಮತ್ತೆ ಬಳಕೆ
ಕೃತಕ ಬುದ್ಧಿಮತ್ತೆ( ಆರ್ಟಿಫಿಶಿಯಲ್ ಇಂಟಲಿಜೆನ್ಸಿ-ಎಐ) ತಂತ್ರಜ್ಞಾನದ ಮೂಲಕ ವನ್ಯಜೀವಿಗಳ ರಕ್ಷಣೆ ಮತ್ತು ದಟ್ಟಾರಣ್ಯದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳನ್ನು ಸುಲಭದಲ್ಲಿ ಪತ್ತೆ ಹಚ್ಚಿ, ನಿಯಂತ್ರಿಸಲು ಸಾಧ್ಯ. ಮುಂಬಯಿ ಮೂಲದ ವನ್ಯಜೀವಿ ಸಂರಕ್ಷಣ ಟ್ರಸ್ಟ್ ಎಐ ತಂತ್ರಜ್ಞಾನ ಅಳವಡಿಸಿಕೊಂಡು ಮಾನವ-ಪ್ರಾಣಿ ಸಂಘರ್ಷ ತಪ್ಪಿಸುವ ಕಾರ್ಯ ಮಾಡುತ್ತಿದೆ. ಅರಣ್ಯ ಗಡಿ ಪ್ರದೇಶದ ರಕ್ಷಣೆ, ವನ್ಯಜೀವಿ ಕಾರಿಡಾರ್ ನಿರ್ಮಾಣ ಮತ್ತು ನಿರ್ವಹಣೆ ಇತ್ಯಾದಿಗಳಲ್ಲಿ ಈ ಹೊಸ ತಂತ್ರಜ್ಞಾನ ಹೆಚ್ಚು ಪರಿಣಾಮಕಾರಿಯಾಗಿದೆ. - ಅವಿನ್ ಶೆಟ್ಟಿ