Advertisement

ಜಿಲ್ಲೆಯಲ್ಲಿ ಮತ್ತೆ ಹೆಲಿಟೂರಿಸಂ ಆರಂಭ ನಿರೀಕ್ಷೆ

11:14 PM Sep 26, 2021 | Team Udayavani |

ಉಡುಪಿ: ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ್ದ ಹೆಲಿಟೂರಿಸಂ ಕೋವಿಡ್‌ದಿಂದ ಸ್ಥಗಿತಗೊಂಡಿದ್ದು, ಮತ್ತೆ ಆರಂಭವಾಗಿ ಜನರಿಗೆ ವೈಮಾನಿಕ ನೋಟ ಕಣ್ತುಂಬುವ ಅವಕಾಶ ಸಿಗುವ ನಿರೀಕ್ಷೆ ಹೊಂದಲಾಗಿದೆ.

Advertisement

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿಯಿಂದ 2016ರಲ್ಲಿ ಉಡುಪಿಯಲ್ಲಿ ಆರಂಭಗೊಂಡಿದ್ದ ಹೆಲಿಟೂರಿಸಂ ಕೊರೊನಾ ಕಾರಣದಿಂದಾಗಿ 2019ರಲ್ಲಿ ಸ್ಥಗಿತಗೊಂಡಿತ್ತು. ಈಗ ಕೊರೊನಾ ಸೋಂಕು ಇಳಿಮುಖವಾಗಿದ್ದು, ಸರಕಾರವೂ ಬಹುತೇಕ ಎಲ್ಲ ಚಟುವಟಿಕೆಗಳಿಗೆ ಅನುಮತಿ ಕಲ್ಪಿಸಿದ ಹಿನ್ನೆಲೆಯಲ್ಲಿ ಈ ಹೆಲಿಟೂರಿಸಂ ಮತ್ತೆ ಆರಂಭವಾಗುವ ಸಾಧ್ಯತೆಯಿದೆ.

ಹೊಸಬಗೆಯ ಅನುಭವ
ಆದಿಉಡುಪಿ ಹೆಲಿಪ್ಯಾಡ್‌ ಹಾಗೂ ಕೋಟದ ಯುವ ಮೆರಿಡಿಯನ್‌ನಲ್ಲಿ ಹೆಲಿಕಾಪ್ಟರ್‌ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗಿತ್ತು. ಇದರಿಂದಾಗಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗಿತ್ತು. ಈ ಬಗ್ಗೆ ದಿನಕ್ಕೆ ನೂರಾರು ಕರೆಗಳೂ ಬುಕ್ಕಿಂಗ್‌ಗಾಗಿ ಬರುತ್ತಿದ್ದವು.
ದುಬಾರಿಯಾದರೂ ಅಚ್ಚುಮೆಚ್ಚು

ಹೆಲಿಟೂರಿಸಂಗೆ ಒಂದು ದಿನಕ್ಕೆ 1.5ಲ.ರೂ. ವೆಚ್ಚದ ಇಂಧನ ಬೇಕಾಗುತ್ತದೆ. ಪೈಲಟ್‌ ಖರ್ಚು-ವೆಚ್ಚ ಸೇರಿಸಿ ದಿನಕ್ಕೆ 2 ಲ.ರೂ. ವೆಚ್ಚ ಅಗತ್ಯ. ದುಬಾರಿಯಾದರೂ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಆರಂಭಗೊಂಡ ಹೆಲಿಟೂರಿಸಂಗೆ ಉತ್ತಮ ಸ್ಪಂದನೆ ದೊರಕಿದೆ.

ಈ ಮೂಲಕ ಸ್ಥಳೀಯ ಮಲ್ಪೆ ಬೀಚ್‌ಗಳಿಗೂ ಪ್ರವಾಸಿಗರು ತೆರಳಿ ಆನಂದಿಸು ತ್ತಾರೆ. ಇದು ಜಿಲ್ಲೆಯ ಒಟ್ಟು ಆರ್ಥಿಕ ಪ್ರಗತಿಗೂ ಕಾರಣವಾಗಿದೆ.

Advertisement

ಇದನ್ನೂ ಓದಿ:ಲಡಾಖ್‌ನ ಪೂರ್ವ ಭಾಗದಲ್ಲಿ ಚೀನಾ ಸೇನೆಯ ಡ್ರೋನ್‌ ಹಾರಾಟ

ಈ ಬಾರಿ ಪಶ್ಚಿಮಘಟ್ಟ ಕಣ್ತುಂಬುವ ಭಾಗ್ಯ
ಹೆಲಿಕಾಪ್ಟರ್‌ ಮೂಲಕ ಉಡುಪಿ, ಮಣಿಪಾಲ, ಮಲ್ಪೆ , ಸೈಂಟ್‌ಮೇರಿಸ್‌ಗಳನ್ನಷ್ಟೇ ನೋಡುವ ಅವಕಾಶ ಇತ್ತು. ಮುಂದಿನ ದಿನಗಳಲ್ಲಿ ಇದರ ಜತೆಗೆ ಕೊಡಚಾದ್ರಿ ಸಹಿತ ಪಶ್ಚಿಮಘಟ್ಟಗಳನ್ನೂ ನೋಡುವ ಸೌಭಾಗ್ಯ ಪ್ರವಾಸಿಗರಿಗೆ ಸಿಗಲಿದೆ. ಕಾಪು ದ್ವೀಪಸ್ತಂಭ ತೋರಿಸುವ ಆಲೋಚನೆಯೂ ಇದೆ. ಹಿಂದೆ 6ರಿಂದ 8 ನಿಮಿಷಗಳ ಹಾರಾಟವಿದ್ದರೆ ಮುಂದಿನ ದಿನಗಳಲ್ಲಿ ಪಶ್ಚಿಮಘಟ್ಟ ಹಾರಾಟಕ್ಕೆ 14 ನಿಮಿಷಗಳ ಅವಧಿ ತೆಗೆದುಕೊಳ್ಳಲಾಗುತ್ತದೆ. ಇದಕ್ಕೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ ಎನ್ನುತ್ತಾರೆ ಆಯೋಜಕರು.

ಸಭೆಯಲ್ಲಿ ಪ್ರಸ್ತಾವ
ಜಿಲ್ಲೆಯಲ್ಲಿ ಹೆಲಿಟೂರಿಸಂ ಅನ್ನು ಮತ್ತೆ ಆರಂಭಿಸುವ ಬಗ್ಗೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಲ್ಲಿ ಪ್ರಸ್ತಾವ ಮಾಡಲಾಗುವುದು. ಅನುಮತಿ ಸಿಕ್ಕರೆ ಈ ವರ್ಷಾಂತ್ಯಕ್ಕೆ ಆರಂಭವಾಗುವ ಸಾಧ್ಯತೆ ಇದೆ.
-ಕ್ಲಿಫ‌ರ್ಡ್‌ ಲೋಬೋ ಜೆ., ಸಹಾಯಕ ನಿರ್ದೇಶಕರು (ಪ್ರಭಾರ)
ಪ್ರವಾಸೋದ್ಯಮ ಇಲಾಖೆ, ಉಡುಪಿ

ಉತ್ತಮ ಸ್ಪಂದನೆ
ಹೆಲಿಟೂರಿಸಂ ಆರಂಭ ಆದಾಗಿನಿಂದ ಉತ್ತಮ ಸ್ಪಂದನೆ ದೊರೆತಿದೆ. ಜಿಲ್ಲೆ , ಹೊರಜಿಲ್ಲೆ, ಹೊರರಾಜ್ಯಗಳಿಂದಲೂ ಹಲವು ಮಂದಿ ಪ್ರವಾಸಿಗರು ಆಗಮಿಸಿ ಮಲ್ಪೆ , ಸೈಂಟ್‌ಮೇರಿಸ್‌, ಉಡುಪಿ-ಮಣಿಪಾಲದ ವೈಮಾನಿಕ ನೋಟವನ್ನು ಆಸ್ವಾದಿಸಿದ್ದಾರೆ.
-ಸುದೇಶ್‌ ಶೆಟ್ಟಿ,, ಎಂ.ಡಿ., ಮಂತ್ರ ಟೂರಿಸಂ ಡೆವಲಪ್‌ಮೆಂಟ್‌ ಕಂಪೆನಿ

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next