ಕೊಪ್ಪ: ಕಮ್ಮರಡಿಯಲ್ಲಿ ಜ.12 ಮತ್ತು 13ರಂದು ನಡೆಯಲಿರುವ ಕೊಪ್ಪ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕೆ ಭರದ ಸಿದ್ದತೆ ನಡೆಯುತ್ತಿದೆ.
ಸುಭಾಷ್‌ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದ್ದು, ಕುಸುರಿಗೆ ಕೃಷ್ಣಪ್ಪಗೌಡ ಮಂಟಪ ಎಂದು ಹೆಸರಿಡಲಾಗಿದೆ. ಕಾರ್ಯಕ್ರಮ ನಡೆಯುವ ಮುಖ್ಯ ವೇದಿಕೆಗೆ ಸಂತ ಶಿಶುನಾಳ ಶರೀಫರ ಹೆಸರಿಡಲಾಗಿದೆ.
ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹೊರಡುವ ಸ್ಥಳದಿಂದ ಸಾಹಿತ್ಯ ಸಮ್ಮೇಳನ ವೇದಿಕೆಯವರೆಗೆ ಮೂರು ಕಡೆ ಮಹಾದ್ವಾರಗಳನ್ನು ನಿರ್ಮಿಸಲಾಗಿದ್ದು, ಅವುಗಳಿಗೆ ಚಾವಲ್ಮನೆ ಪಟೇಲ್ ಸುಬ್ಬಣ್ಣ ನಾಯ್ಕ, ಉಂಟುಗೋಡು ಯು.ಪಿ. ವೆಂಕಟೇಶ್ ಹಾಗೂ ರಾಘವೇಂದ್ರ ಸ್ವಾಮಿ ಭಕ್ತವೃಂದದ ಹೆಸರಿಡಲಾಗಿದೆ.
ವೇದಿಕೆಯ ಬಲಭಾಗದಲ್ಲಿ 60ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಲಾಗಿದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾಗುವ ದಾರಿ, ಸಮ್ಮೇಳನ ನಡೆಯುವ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದ ತುಂಬಾ ಸಮ್ಮೇಳಕ್ಕೆ ಸ್ವಾಗತಕೋರುವ, ಶುಭಕೋರುವ ಬ್ಯಾನರ್, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಕಮ್ಮರಡಿ ಪೇಟೆ ಹಾಗೂ ಸಮ್ಮೇಳನದ ಸ್ಥಳದಲ್ಲಿ ಬಂಟಿಂಗ್ಸ್, ವಿದ್ಯುದ್ದೀಪಗಳಿಂದ ಸಿಂಗರಿಲಾಗಿದೆ. ಇಡೀ ಕಮ್ಮರಡಿ ಮದುವಣಗಿತ್ತಿಯಂತೆ ಸಾಹಿತ್ಯ ಜಾತ್ರೆಗೆ ಅಲಂಕಾರಗೊಂಡಿದೆ.
ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎನ್. ರಾಮಸ್ವಾಮಿ ನೇತೃತ್ವದಲ್ಲಿ ವಿವಿಧ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಾಹಿತ್ಯ ಪರಿಷತ್ ಅಧ್ಯಕ್ಷರು, ಪದಾಕಾರಿಗಳು, ಕಮ್ಮರಡಿ ಗ್ರಾಮಸ್ಥರು ಹಗಲಿರುಳೆನ್ನದೇ ಸಮ್ಮೇಳನದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.