ಅಭಿಮಾನಿಗಳ ಪಾಲಿನ ಪ್ರೀತಿಯ ಸಾಹಸ ಸಿಂಹ, ವಿಷ್ಣುದಾದ ಅಗಲಿ ಇಂದಿಗೆ (ಡಿ.30) ಬರೋಬ್ಬರಿ 14 ವರ್ಷ. ಇಷ್ಟು ವರ್ಷಗಳಲ್ಲಿ ಅಭಿಮಾನಿಗಳು ಅವರನ್ನು ನೆನೆಯದ ದಿನವಿಲ್ಲ. ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಲೇ ಬಂದಿದ್ದಾರೆ. ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ವಿಷ್ಣು ಹೆಸರನ್ನು ಚಿರಸ್ಥಾಯಿಯನ್ನಾಗಿಸಿದ್ದಾರೆ.
ಆದರೆ, ಅಭಿಮಾನಿಗಳಿಗೆ ಒಂದು ಬೇಸರ ಮಾತ್ರ ಇದ್ದೇ ಇದೆ. ಅದು ಸಮಾಧಿ ಕುರಿತಾಗಿದ್ದು. ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರವಾದ ಜಾಗದಲ್ಲೇ ಅವರ ಸಮಾಧಿ ನಿರ್ಮಾಣವಾಗಬೇಕೆಂಬುದು. ಆ ನಿಟ್ಟಿನಲ್ಲಿ ಹೋರಾಟ ನಡೆಯುತ್ತಲೇ ಇದೆ. ಇಂದು ಕುಟುಂಬ ವರ್ಗ ಮೈಸೂರಿನಲ್ಲಿರುವ ವಿಷ್ಣು ಸ್ಮಾರಕದಲ್ಲಿ ಪೂಜೆ ಸಲ್ಲಿಸಿದರೆ, ಅಭಿಮಾನಿಗಳು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾದಿಗೆ ಪೂಜೆ ಸಲ್ಲಿಸಲಿದ್ದಾರೆ.
ಇನ್ನು, ಪ್ರೀತಿ, ಒಂಚೂರು ಸಿಟ್ಟು, ಅಪಾರ ವಿನಯ, ಕಿಂಚಿತ್ ಸಂಕೋಚ, ಮುಚ್ಚುಮರೆಯಿಲ್ಲದ ಮಾತು, ಮನಗೆಲ್ಲುವ ಮಂದಹಾಸ- ಇವೆಲ್ಲದರ ಮೊತ್ತವಾಗಿದ್ದವರು ವಿಷ್ಣುವರ್ಧನ್. ಸಂಪತ್ ಕುಮಾರ್ ಆಗಿ ಚಿತ್ರರಂಗಕ್ಕೆ ಬಂದು “ವಂಶವೃಕ್ಷ’ದಲ್ಲಿ ಪುಟ್ಟ ಪಾತ್ರ ಮಾಡಿ, ರಾಮಾಚಾರಿಯಾಗಿ ಎದ್ದು ನಿಂತ ವಿಷ್ಣುವರ್ಧನ್ ಮತ್ತೆ ತಿರುಗಿ ನೋಡಲಿಲ್ಲ. ಇನ್ನೂರು ಚಿತ್ರಗಳ ಗಡಿ ದಾಟಿದ ವಿಷ್ಣುವರ್ಧನ್ ಚಾರಿತ್ರಿಕ, ಪೌರಾಣಿಕ, ಸಾಮಾಜಿಕ ಪಾತ್ರಗಳಲ್ಲಿ ನಟಿಸಿ ಗೆದ್ದವರು.
ಅಭಿಮಾನಿಗಳ ಪಾಲಿಗೆ “ಸಾಹಸ ಸಿಂಹ’, ಹೆಣ್ಮಕ್ಕಳ ಪಾಲಿಗೆ “ಬಂಧನ’ದ ಭಗ್ನಪ್ರೇಮಿ, “ಬಿಳಿಗಿರಿಯ ಬನ’ದ ಬಂಡಾಯಗಾರ, “ಹೊಂಬಿಸಿಲು’ ಚಿತ್ರದ ನಿಷ್ಪಾಪಿ, “ಸಿಡಿದೆದ್ದ ಸಹೋದರ’, “ಬಂಗಾರದ ಜಿಂಕೆ’ಯ ಬೆನ್ನಟ್ಟಿದ ಪ್ರೇಮಿ, “ಇಂದಿನ ರಾಮಾಯಣ’ದ ನ್ಯಾಯವಂತ, ದೆವ್ವಕ್ಕೆ ಸಡ್ಡು ಹೊಡೆದ “ಆಪ್ತಮಿತ್ರ’- ಹೀಗೆ ವಿಷ್ಣು ಎಲ್ಲ ಪಾತ್ರಗಳಲ್ಲೂ ನಟಿಸಿ ಗೆದ್ದವರು. ಅಪಾರ ಹಾಸ್ಯಪ್ರಜ್ಞೆ, ತುಂಬು ಮಾನವೀಯತೆ, ಸರಳ ಸಜ್ಜನಿಕೆಯ ವಿಷ್ಣು ಅವರಿಲ್ಲದೇ 14 ವರ್ಷ ಕಳೆದಿದೆ. ಆದರೆ, ಅಭಿಮಾನಿಗಳ ಹೃದಯದಲ್ಲಿ ಯಜಮಾನರು ಅಜರಾಮರ.
ಬಲಗೈಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು ಎಂಬಂತಿದ್ದವರು ವಿಷ್ಣು … ಯಾವತ್ತೂ ಅವರು ತಾವು ಮಾಡಿದ ಸಹಾಯದ ಕುರಿತು ಹೇಳಿಕೊಂಡವರೇ ಅಲ್ಲ. ವಿವಾದಗಳು ಅವರನ್ನು ಬೆನ್ನಟ್ಟಿ ಬಂದಾಗಲೂ ವಿಷ್ಣು ಮೌನಿಯಾಗಿದ್ದರು.
ಅಂಬರೀಷ್ ಮತ್ತು ಅವರ ಸ್ನೇಹ ಚಿತ್ರರಂಗಕ್ಕೊಂದು ಮಾದರಿ ಎಂಬಂತಿತ್ತು. ವಿಷ್ಣುವರ್ಧನ್ ನಟಿಸಿದ ಚಿತ್ರಗಳ ಪೈಕಿ ನೆನಪಲ್ಲಿ ಉಳಿಯುವಂಥ ಚಿತ್ರಗಳ ಪಟ್ಟಿ ಸಾಕಷ್ಟು ದೊಡ್ಡದಿದೆ.
“ಮುತ್ತಿನಹಾರ’ ಕನ್ನಡ ಚಿತ್ರರಂಗದಲ್ಲೇ ಒಂದು ಮೈಲಿಗಲ್ಲು. “ಬಂಧನ’, “ಆಪ್ತಮಿತ್ರ’, “ಆಪ್ತರಕ್ಷಕ’ಗಳ ನಡುವೆಯೇ ಅವರು “ಗಂಧರ್ವಗಿರಿ’ಯಂಥ ಸಿನಿಮಾ ಮಾಡಿದವರು. “ಹರಕೆಯ ಕುರಿ’ಯಂಥ ಅರ್ಥಪೂರ್ಣ ಚಿತ್ರದಲ್ಲಿ ನಟಿಸಿದವರು. ಕನ್ನಡದಲ್ಲಷ್ಟೇ ಅಲ್ಲದೇ, ಹಿಂದಿ, ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸಿದ್ದ ವಿಷ್ಣು, ಯಾವತ್ತೂ ಚಿತ್ರರಂಗದ ನಾಯಕನೆಂದು ತಮ್ಮನ್ನು ಕರೆದುಕೊಂಡವರೇ ಅಲ್ಲ. ನಾನು ತುಂಬ ಚಿಕ್ಕವನು, ನಾನು ಹಿಂದೆಯೇ ಇರಬೇಕು ಅನ್ನುತ್ತಿದ್ದವರು ಅವರು. ಎಲ್ಲರನ್ನೂ ಮುಂದೆ ಬಿಟ್ಟುಕೊಂಡು, “ಸ್ನೇಹಲೋಕ’ ಎಂಬ ತಂಡ ಕಟ್ಟಿ, ಸಮಾನಮನಸ್ಕರನ್ನು ಒಂದಾಗಿಸಿದ ಖ್ಯಾತಿಯೂ ಅವರದ್ದೇ.