Advertisement

ಇಂದು ಮಹಾಶಿವರಾತ್ರಿ: ಶಿವನೇಕೆ ಸ್ವಯಂಭು..?

09:49 AM Mar 01, 2022 | Team Udayavani |

ಪಾರ್ವತಿ ತನ್ನ ಅಚಲವಾದ ಭಕ್ತಿಯಿಂದ ಶಿವನನ್ನು ಮೆಚ್ಚಿಸಿ ಮದುವೆಗೆ ಒಪ್ಪಿಸಿದ ನಂತರ ಅವರಿಬ್ಬರ ಮದುವೆಗೆ ಅದ್ದೂರಿ ಸಿದ್ಧತೆ ನಡೆಯತೊಡಗಿತು. ಅವರ ಮದುವೆಯಲ್ಲಿ ಒಂದು ಸುಂದರವಾದ ಘಟನೆ ನಡೆಯಿತು. ಶಿವಪಾರ್ವತಿಯರ ಅದ್ದೂರಿ ಮದುವೆಗೆ ಎಲ್ಲ ದೇವಾನುದೇವತೆಗಳು, ಅಸುರರು, ರಾಕ್ಷಸರು, ಗಣಗಳು ಎಲ್ಲರೂ ಬಂದಿದ್ದರು. ಸಾಮಾನ್ಯವಾಗಿ ಎಷ್ಟೋ ಮದುವೆ ಗಳಲ್ಲಿ, ಅಥವಾ ಎಲ್ಲ ಮದುವೆಗಳಲ್ಲೂ, ಒಬ್ಬರು ಬಂದರೆ, ಇನ್ನೊ ಬ್ಬರು ಬರುವುದಿಲ್ಲ – ಏನೋ ಕೌಟುಂಬಿಕ ವಿರಸಗಳು ಇರುತ್ತವೆ. ಆದರೆ ಶಿವನ ಮದುವೆಯಲ್ಲಿ ಎಲ್ಲರೂ ಬಂದಿದ್ದರು. ಶಿವ “ಪಶುಪತಿ’ ಅಂದರೆ ಪಶು (ಪ್ರಾಣಿ ಸಂಕುಲ)ಗಳ ಒಡೆಯನಾದ್ದ ರಿಂದ ಇಡೀ ಪ್ರಾಣಿ ಸಂಕುಲವೇ ಬಂದಿತ್ತು. ಅದ್ದೂರಿ ಮದುವೆ..!

Advertisement

ಎಲ್ಲ ಮಾನವರು, ದೇವತೆಗಳು, ರಾಕ್ಷಸರು, ಗಣಗಳು, ಬೇತಾಳಗಳು, ಪಿಶಾಚಿಗಳು, ಪ್ರಾಣಿಗಳು, ಪಕ್ಷಿಗಳು, ಕ್ರಿಮಿ ಕೀಟಗಳು, ಹುಳು ಹುಪ್ಪಟೆಗಳು ಎಲ್ಲವೂ ಬಂದಿದ್ದವು. ಅದ್ದೂರಿ ಸಂಭ್ರಮ. ಮದುವೆಯ ಸಮಾರಂಭ ನಡಿಯುತ್ತಾ ಇರುವಾಗ, ಕನ್ಯಾದಾನ ಮಾಡುವ ಸಮಯ ಬಂದಿತು. ಆಗ ಪಾರ್ವತಿಯ ಕಡೆಯವರು ಗಂಡಿನ ಪೂರ್ವಜರ ಬಗ್ಗೆ ಕೇಳಿದರು. ಅವನ ವಂಶದ ಬಗ್ಗೆ, ಅವನ ಹೆತ್ತವರ ಬಗ್ಗೆ, ಅವನ ವಂಶ ವೃಕ್ಷದ ಬಗ್ಗ – ಅವನ ಕುಲ, ಗೋತ್ರ, ನಕ್ಷತ್ರ ಹೀಗೇ ಸಾಮಾನ್ಯವಾಗಿ ಎಲ್ಲ ಕಡೆಯಲ್ಲೂ ಕೇಳುವ ಹಾಗೆ ವಿಚಾರಿಸಿದರು. “ದಯವಿಟ್ಟು ನಿನ್ನ ಪೂರ್ವಾಪರ ತಿಳಿಸು’. ಆದರೆ ಶಿವ ಏನೂ ಹೇಳದೆ ಸುಮ್ಮನೇ ತಲೆ ತಗ್ಗಿಸಿಕೊಂಡು ಕುಳಿತಿದ್ದ.

ಯಾರ ಪ್ರಶ್ನೆಗಳಿಗೂ ಏನೂ ಉತ್ತರ ನೀಡದೆ, ಉದಾಸೀನವಾಗಿ ಶಿವ ಸುಮ್ಮನೇ ಕುಳಿತಿದ್ದ.ಆಗ ಅಲ್ಲಿದ್ದ ನಾರದ ಇದನ್ನು ನೋಡಿ, ಅವನ ತಂತಿ ವಾದ್ಯವಾದ ತಂಬೂರಿಯನ್ನು ತೆಗೆದುಕೊಂಡು ಅದರಲ್ಲಿ ಒಂದೇ ಸಮನೆ ಒಂದೇ ತಂತಿಯನ್ನು ಮೀಟುತ್ತಾ, ಒಂದೇ ತರದ ಶಬ್ದ ಮಾಡುತ್ತಾ ಹೋದ.

ಆದರೆ ಪಾರ್ವತಿಯ ಕಡೆಯವರು ಪದೇ ಪದೆ ಅವನ ಪೂರ್ವಾಪರವನ್ನು ಕೇಳುತ್ತಿದ್ದರು. ಯಾಕೆಂದರೆ ಮದುವೆಯ ಶುಭ ಮುಹೂರ್ತ ಮುಗಿಯುವ ಸಮಯ ಆಗುತ್ತಲಿತ್ತು. ಆದರೆ ಪೂರ್ವಾಪರ ಗೊತ್ತಿಲ್ಲದೇ ಇರುವವನಿಗೆ ಕನ್ಯಾದಾನ ಮಾಡುವುದು ಹೇಗೆ? ಪಾರ್ವತಿಯಾದರೋ ರಾಜಕುಮಾರಿ. ಆದರೆ ಶಿವನ ಕಡೆಯವರು ಏನೂ ಮಾತನಾಡದೇ ಕುಳಿತಿದ್ದರು, ಜತೆಗೆ ಈ ನಾರದ ಬೇರೆ ಒಂದೇ ಸಮನೆ ತಂಬೂರಿ ಮೀಟಿ ಕಿರಿಕಿರಿ ಯುಂಟುಮಾಡುತ್ತಿದ್ದ. ಅವರಿಗೆ ಕೋಪ ಬಂದು ಕೇಳಿದರು, “ಇದೇನು ಹುಚ್ಚಾಟ, ಮದುವೆ ಗಂಡು ನೋಡಿದರೆ ಸುಮ್ಮನೇ ಕುಳಿತಿದ್ದಾನೆ, ನೀನು ತಂತಿ ಮೀಟಿ ಕಿರಿಕಿರಿ ಮಾಡುತ್ತಿದೀಯ, ಏನು ನಡೆಯುತ್ತಿದೆ?’
ಆಗ ನಾರದ, “ಎಲ್ಲರೂ ಕೇಳಿ, ಇವನು ಸ್ವಯಂಭು. ಅಂದರೆ ತನ್ನನ್ನು ತಾನೇ ಸೃಷ್ಟಿಸಿಕೊಂಡವನು. ಇವನಿಗೆ ಹೆತ್ತವರಿಲ್ಲ. ಇಡೀ ಸೃಷ್ಟಿಯ ಮೂಲ “ಶಬ್ದ’. ಇವನಿಗೆ ಎಲ್ಲ ಶಬ್ದಗಳ ಮೇಲೆ ಅಧಿಪತ್ಯ ಇದ್ದಿದ್ದರಿಂದ, ಅಂದರೆ ಸೃಷ್ಟಿಯ ಮೇಲೇ ಅಧಿಪತ್ಯ ಇದ್ದಿದ್ದರಿಂದ, ಅವನು ತನ್ನನ್ನು ತಾನೇ ಸೃಷ್ಟಿಸಿಕೊಂಡ. ಹೀಗಾಗಿ ಶಬ್ದವೇ ಅವನ ಪೂರ್ವಾಪರ. ಅದನ್ನು ತಿಳಿಯಪಡಿಸಲೆಂದೇ ನಾನು ಒಂದೇ ತಂತಿಯನ್ನು ಮೀಟಿ ಶಬ್ದವನ್ನು ಉಂಟುಮಾಡುತ್ತಿದ್ದೇನೆ’ ಎಂದು ಹೇಳಿದ.

ಸ್ವಯಂಭು ಶಿವ: ಶಿವನನ್ನು ಸ್ವಯಂಭು ಎನ್ನುತ್ತಾರೆ. ಸ್ವಯಂಭು ಎಂದರೆ ತನ್ನನ್ನು ತಾನೇ ಸೃಷ್ಟಿಸಿಕೊಂಡವನು. ಅವನಿಗೆ ತಂದೆ ತಾಯಿ ಯಾರೂ ಇಲ್ಲ. ತನಗೆ ತಾನೇ ಸೃಷ್ಟಿಯಾದ ವ್ಯಕ್ತಿ.

Advertisement

ಈ ಆಯಾಮವನ್ನು ಹೀಗೆ ನೋಡುವುದರ ಮಹತ್ವ ಅಥವಾ ಒಂದು ದೃಷ್ಟಿಕೋನ ಏನೆಂದರೆ, ಅವನು ಆದಿ ಯೋಗಿ. ಅವನು ಮೊಟ್ಟ ಮೊದಲ ಯೋಗಿ. ಯಾರು ಮೊದಲನೆಯ ಯೋಗಿಯೋ, ಅವರು ಸ್ವಯಂ ನಿರ್ಮಾಣಗೊಂಡವರಾಗಿರುತ್ತಾರೆ. ನಾವು ಶಿವನನ್ನು ಅಥವಾ ಯಾರನ್ನೇ ಯೋಗಿ ಎಂದಾಗ, ಒಂದು ಅರ್ಥದಲ್ಲಿ ನಾವು ಅವರನ್ನು “ಸ್ವಯಂಕೃತ’ ಎಂಬುದಾಗಿ ಕರೆಯುತ್ತೇವೆ. ಏಕೆಂದರೆ ಅವರು ಸಾಮಾನ್ಯ ವಿಧಿಯ ಕೈವಾಡಕ್ಕೆ ಸಿಗುವುದಿಲ್ಲ. ಅವರು ಕರ್ಮದ ಕೈವಾಡಕ್ಕೂ ಸಿಗುವುದಿಲ್ಲ, ಅವರು ಜೀವನದ ಸಹಜ ಕ್ರಿಯೆಗಳ ಯಾವ ಕೈವಾಡಕ್ಕೂ ಸಿಕ್ಕಿಹಾಕಿಕೊಳ್ಳುವು ದಿಲ್ಲ. ಅವರ ಜೀವನ ಸ್ವಯಂ ನಿರ್ಮಾಣಗೊಂಡಿರುತ್ತದೆ.

ಈಗ ಸಾಮಾನ್ಯವಾಗಿ ಸಮಾಜದಲ್ಲಿ ಯಾರಾದರೂ ತಮ್ಮಷ್ಟಕ್ಕೆ ತಾವೇ ಶಿಕ್ಷಣ ಪಡೆದು ಒಳ್ಳೆಯ ವಿದ್ಯಾವಂತರಾಗಿದ್ದರೆ, ಅಥವಾ ಯಾರ ಸಹಾಯವೂ ಇಲ್ಲದೆ ತಮ್ಮಷ್ಟಕ್ಕೆ ತಾವೇ ಕಷ್ಟಪಟ್ಟು ದುಡಿದು ಶ್ರೀಮಂತರಾಗಿದ್ದರೆ, ಸಾಮಾನ್ಯವಾಗಿ ಅವರು ತಮ್ಮನ್ನು ತಾವೇ “ಸ್ವಯಂಕೃತರು’ ಎಂಬುದಾಗಿ ಕರೆದುಕೊಳ್ಳುತ್ತಾರೆ. ತಮ್ಮನ್ನು “ಸ್ವಯಂಕೃತರು’ ಎಂದು ಹೇಳಿಕೊಳ್ಳುವವರು ತುಂಬಾ ಗರ್ವಿಷ್ಟರಾಗಿರುತ್ತಾರೆ. ಅವರು ತಮ್ಮನ್ನು ಸ್ವಯಂಕೃತರು ಎಂದು ಹೇಳಿಕೊಂಡಾಗ, ಈ ಸೃಷ್ಟಿಯಲ್ಲೇ ಅತಿಯಾದ ಜವಾಬ್ದಾರಿ ಇರುವ ದೈವಕ್ಕೇ ಭಂಡತನ ತೋರಿಸಿದ ಹಾಗನ್ನಿಸುತ್ತದೆ. ಆದರೆ ನಾವು ಇಲ್ಲಿ ಆ ಅರ್ಥದಲ್ಲಿ ಹೇಳುತ್ತಿಲ್ಲ. ನಾವು ಜೀವನದ ಮೂಲದ ಬಗ್ಗೆ, ಒಂದು ವಿಧಾನದ ಬಗ್ಗೆ ಹೇಳುತ್ತಿದ್ದೇವೆ. ಜೀವನವನ್ನು ಜೀವಿಸುವ, ಬದುಕುವ ಬಗ್ಗೆ ಅಲ್ಲ, ಜೀವನದ ಬುನಾದಿಯ ಬಗ್ಗೆ.

ಆ ರೀತಿಯಾಗಿ ನೋಡಿದಾಗ ಅವನು “ಸ್ವಯಂಕೃತ’. ಅವನು ಸ್ವಯಂಭು. ಮೂಲಭೂತವಾಗಿ ಯೋಗದ ಮೂಲ ಅಂಶವೆಂದರೆ ನಿಮ್ಮನ್ನು ಸ್ವಯಂ ನಿರ್ಮಾಣ ಮಾಡಿಕೊಳ್ಳುವ ವಿಧಾನಕ್ಕೆ ಸಿದ್ಧ ಗೊಳಿಸಿಕೊಳ್ಳುವುದು. ಆಗ ನಿಮ್ಮ ದೇಹ, ಮನಸ್ಸು, ಭಾವನೆಗಳು ಮತ್ತು ಪ್ರಾಣ ಶಕ್ತಿಯ ಸ್ವಭಾವಗಳೆಲ್ಲಾ ನಿಮ್ಮಿಂದಲೇ ನಿರ್ಮಾಣ ಗೊಳ್ಳುತ್ತವೆ. ಹಾಗಾದಾಗ ಅದನ್ನೆಲ್ಲ ಮೀರಿ ಹೋಗುವುದಕ್ಕೂ ನಿಮಗೆ ಸಾಧ್ಯವಾಗುತ್ತದೆ.

-ಸದ್ಗುರು,ಈಶಾ ಫೌಂಡೇಶನ್‌

Advertisement

Udayavani is now on Telegram. Click here to join our channel and stay updated with the latest news.

Next