Advertisement

IAF: ಇಂದು ಭಾರತೀಯ ವಾಯುಪಡೆ ದಿನ- ಐಎಎಫ್ ಅಸೀಮ ವಾಯುಬಲ!

01:10 AM Oct 08, 2023 | Team Udayavani |

ಭಾರತೀಯ ವಾಯುಪಡೆ (ಐಎಎಫ್) ಹೆಸರು ಕೇಳಿದ ತತ್‌ಕ್ಷಣವೇ ಮೈ ರೋಮಾಂಚನಗೊಳ್ಳುತ್ತದೆ. ಅಂಥ ಅತ್ಯಪೂರ್ವ ಸಾಹಸ ಕಾರ್ಯಗಳನ್ನು, ದೇಶರಕ್ಷಣೆಯ ಕೆಲಸ ಮಾಡಿದ ಹೆಗ್ಗಳಿಕೆ ಅದಕ್ಕೆ ಇದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಬಮೌÅಲಿಯಲ್ಲಿ ಐಎಎಫ್ ರವಿವಾರ ತನ್ನ 91ನೇ ವರ್ಷದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಐಎಎಫ್ ಸಾಗಿ
ಬಂದ ಹೆಜ್ಜೆ, ಅದರ ಆಧುನೀಕರಣ, ವಾರ್ಷಿಕ ಕಾರ್ಯಕ್ರಮಗಳತ್ತ ಒಂದು ಮುನ್ನೋಟ.

Advertisement

ಈ ಬಾರಿ ಪ್ರಯಾಗ್‌ ರಾಜ್‌ನಲ್ಲೇ ಏಕೆ ಆಚರಣೆ?
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಭಾರತೀಯ ವಾಯುಪಡೆಯ ಸೆಂಟ್ರಲ್‌ ಏರ್‌ ಕಮಾಂಡ್‌ ಇದೆ. ಈ ಕೇಂದ್ರಕ್ಕೆ ಐತಿಹಾಸಿಕ ಪ್ರಾಮುಖ್ಯವೂ ಇದೆ. 1962ರಲ್ಲಿ ಚೀನ ಜತೆಗೆ ನಡೆದ ಯುದ್ಧ, 1971ರಲ್ಲಿ ಬಾಂಗ್ಲಾದೇಶ ವಿಮೋಚನ ಸಮರಗಳಲ್ಲಿ ದೇಶವನ್ನು ರಕ್ಷಿಸಿದ ಹೆಗ್ಗಳಿಕೆ ಈ ಕೇಂದ್ರಕ್ಕೆ ಇದೆ. ಪ್ರಯಾಗ್‌ರಾಜ್‌ನಲ್ಲಿ ಕೇಂದ್ರ ಸ್ಥಾಪನೆಯಾಗುವುದಕ್ಕಿಂತ ಮೊದಲು ಕೋಲ್ಕತಾ, ಶಿಲ್ಲಾಂಗ್‌ನಲ್ಲಿ ಕಾರ್ಯಾಚರಣೆ ನಡೆಸಿತ್ತು. ರಕ್ಷಣಾತ್ಮಕ ನಿರ್ಧಾರಗಳಿಂದ ಅದನ್ನು ಅಲಹಾಬಾದ್‌ (ಈಗಿನ ಪ್ರಯಾಗ್‌ರಾಜ್‌)ಗೆ ಸ್ಥಳಾಂತರಿಸಲಾಗಿ, ಅಲ್ಲಿಂದಲೇ ಕಾರ್ಯವೆಸಗುತ್ತಿದೆ.

ನಾರೀಶಕ್ತಿಗೆ ಐಎಎಫ್ ಮಹತ್ವ ನೀಡಿದೆ. ಮಹಿಳಾ ಫೈಟರ್‌ ಪೈಲಟ್‌ಗಳು, ಅಧಿಕಾರಿಗಳು, ನೇವಿಗೇಟರ್‌ಗಳು ಸೇವೆ ಸಲ್ಲಿಸುತ್ತಿದ್ದಾರೆ. ಹೊಸದಾಗಿ ಸೇರ್ಪಡೆಯಾಗಿರುವ ರಫೇಲ್‌ ಯುದ್ಧ ವಿಮಾನಕ್ಕೆ ಮಹಿಳಾ ಪೈಲಟ್‌ ಇದ್ದಾರೆ.

ಹೊಸ ಲಾಂಛನ ಅನಾವರಣ
ಕಳೆದ ವರ್ಷ ಭಾರತೀಯ ನೌಕಾಪಡೆ ಹೊಸ ಲಾಂಛನವನ್ನು ಅನಾವರಣಗೊಳಿಸಿತ್ತು. ಧ್ವಜದ ಮೇಲೆ ಇದ್ದ “ಕ್ರಾಸ್‌ ಆಫ್ ಸೈಂಟ್‌ ಜಾರ್ಜ್‌’ ಅನ್ನು ತೆಗೆದು ಹಾಕಿ ಛತ್ರಪತಿ ಶಿವಾಜಿ ಮಹಾರಾಜರು ಹೊಂದಿದ್ದ ಲಾಂಛನದಿಂದ ಪ್ರೇರಣೆಗೊಂಡು ರಚಿಸಲಾಗಿದೆ. ಅದೇ ರೀತಿ ಅ.8ರಂದು ನಡೆಯಲಿರುವ 91ನೇ ವಾರ್ಷಿಕ ಪಥಸಂಚಲನ ಕಾರ್ಯಕ್ರಮದಲ್ಲಿ ಹೊಸ ಲಾಂಛನ ಐಎಎಫ್ಗೆ ಸಿಗಲಿದೆ.

ಈ ಬಾರಿಯ ವಿಶೇಷಗಳೇನು?

Advertisement

ಯೋಧರು ಶ್ರದ್ಧಾ ಭಕ್ತಿಗಳಿಂದ ಗಡಿಗಳಲ್ಲಿ ಕಾವಲು ಕಾಯುತ್ತಾ ದೇಶ ಸೇವೆಯಲ್ಲಿ ನಿರತರಾದರೆ ಯುದ್ಧ ವಿಮಾನಗಳೂ ಅದನ್ನೇ ಮಾಡುತ್ತವೆ. ದೇಶದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಮಿಗ್‌-21 ಯುದ್ಧ ವಿಮಾನಕ್ಕೆ ಗೌರವಪೂರ್ವಕವಾಗಿ ರವಿವಾರ ವಾರ್ಷಿಕ ಕಾರ್ಯಕ್ರಮದಲ್ಲಿ ವಿದಾಯ ಹೇಳಲಾಗುತ್ತದೆ. ರಷ್ಯಾ ನಿರ್ಮಿತ ಈ ಯುದ್ಧ ವಿಮಾನ 1955 ಜೂ.16ರಂದು ಮೊದಲ ಹಾರಾಟ ನಡೆಸಿತ್ತು ಮತ್ತು 1959ರಲ್ಲಿ ಐಎಎಫ್ಗೆ ಸೇರ್ಪಡೆ ಮಾಡಲಾಗಿತ್ತು. ಆ ವರ್ಷದಿಂದ ಇದುವರೆಗೆ ದೇಶದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾ ಬಂದಿದೆ. 2025ರ ಬಳಿಕ ಅದನ್ನು ಹಂತ ಹಂತವಾಗಿ ಪಡೆಯಿಂದ ವಾಪಸ್‌ ಪಡೆಯಲಾಗುತ್ತದೆ.

ಸರಕು ಸಾಗಣೆಗಾಗಿ ಸಿ-295 ಸರಕು ಸಾಗಣೆ ವಿಮಾನಗಳನ್ನು ಖರೀದಿ ಮಾಡಲಾಗುತ್ತದೆ. ಸ್ಪೇನ್‌ನ ಕಂಪೆನಿ ಕಾಸಾದಿಂದ ಖರೀದಿಸಲಾಗಿರುವ ವಿಮಾನವನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಒಟ್ಟು 56 ಇಂಥ ವಿಮಾನಗಳನ್ನು 21, 935 ಕೋಟಿ ರೂ. ವೆಚ್ಚದಲ್ಲಿ ಖರೀದಿ ಮಾಡಲಾಗುತ್ತದೆ. ಈಗಾಗಲೇ ಒಂದು ವಿಮಾನ ದೇಶವನ್ನು ತಲುಪಿದೆ ಮತ್ತು ಅದನ್ನು ವಾಯುಪಡೆಗೆ ಸೇರ್ಪಡೆ ಮಾಡಲಾಗಿದೆ. ಒಂದೇ ಬಾರಿಗೆ ಒಂಬತ್ತು ಟನ್‌ ಸರಕು ಸಾಗಣೆ ಮಾಡುವ ಸಾಮರ್ಥ್ಯವಿದೆ. 16 ವಿಮಾನಗಳು ಹಂತಹಂತವಾಗಿ ದೇಶಕ್ಕೆ ಬರಲಿದ್ದರೆ, 40 ವಿಮಾನಗಳನ್ನು ವಡೋದರಾದಲ್ಲಿ ಇರುವ ಟಾಟಾ ಮತ್ತು ಏರ್‌ಬಸ್‌ ಸಹಯೋಗದಲ್ಲಿ ಮೇಕ್‌ ಇನ್‌ ಇಂಡಿಯಾ ವ್ಯಾಪ್ತಿಯಲ್ಲಿ ಉತ್ಪಾದಿಸಲಾಗುತ್ತದೆ.

ಉಳಿದಂತೆ ಹಾಲಿ ಇರುವ ಯುದ್ಧ ವಿಮಾನಗಳಿಂದ, ಪ್ಯಾರಾಟ್ರೂಪರ್‌ಗಳಿಂದ ಮೈನವಿರೇಳಿಸುವ ಸಾಹಸ ಪ್ರದರ್ಶನಗಳು ನಡೆಯಲಿವೆ.

ಸದಾಶಿವ ಕೆ.

 

Advertisement

Udayavani is now on Telegram. Click here to join our channel and stay updated with the latest news.

Next