Advertisement

ಕೆರಿಬಿಯನ್ನರ ವಿರುದ್ಧ ಕ್ಲೀನ್‌ ಸ್ವೀಪ್‌ಗೆ ತಯಾರಿ; ಭಾರತದ ಮುಂದಿದೆ 3-0 ಗೆಲುವಿನ ಅವಕಾಶ

12:04 AM Jul 27, 2022 | Team Udayavani |

ಪೋರ್ಟ್‌ ಆಫ್‌ ಸ್ಪೇನ್‌: ಸತತ 12 ಏಕದಿನ ಸರಣಿ ಗೆದ್ದು ಎರಡು ದಿನಗಳ ಹಿಂದಷ್ಟೇ ವಿಶ್ವದಾಖಲೆ ನಿರ್ಮಿಸಿದ ಭಾರತವೀಗ ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧ 3-0 ಕ್ಲೀನ್‌ ಸ್ವೀಪ್‌ಗೆ ತಯಾರಿ ನಡೆಸಿದೆ. ಬುಧವಾರ ಇಲ್ಲಿನ “ಕ್ವೀನ್ಸ್‌ಪಾರ್ಕ್‌ ಓವಲ್‌’ನಲ್ಲಿ ಅಂತಿಮ ಮುಖಾಮುಖಿ ಏರ್ಪಡಲಿದ್ದು, ಇದನ್ನೂ ಗೆದ್ದರೆ ಟೀಮ್‌ ಇಂಡಿಯಾದ ಯೋಜನೆ ಯಶಸ್ವಿಯಾಗಲಿದೆ.

Advertisement

ಇನ್ನೊಂದೆಡೆ ಕೆರಿಬಿಯನ್‌ ಪಡೆಗೆ ಇದು ಪ್ರತಿಷ್ಠೆಯ ಪಂದ್ಯ. ಹೇಗಾದರೂ ಮಾಡಿ ವೈಟ್‌ವಾಶ್‌ ತಪ್ಪಿಸಿಕೊಂಡು ಬಚಾವಾದರೆ ಸಾಕು ಎಂಬ ಸ್ಥಿತಿಯಲ್ಲಿದೆ. ಕಳೆದ ಬಾಂಗ್ಲಾದೇಶ ವಿರುದ್ಧದ ತವರಿನ ಸರಣಿಯಲ್ಲೂ ಅದು 0-3 ಮುಖಭಂಗಕ್ಕೆ ಸಿಲುಕಿತ್ತು.

ಬ್ಯಾಟಿಂಗ್‌ ಮೇಲಾಟ
ಎರಡೂ ಪಂದ್ಯಗಳು ಬ್ಯಾಟಿಂಗ್‌ ಮೇಲಾಟಕ್ಕೆ ಸಾಕ್ಷಿಯಾಗಿದ್ದವು. ನಾಲ್ಕೂ ಇನ್ನಿಂಗ್ಸ್‌ಗಳಲ್ಲಿ ತಂಡದ ಮೊತ್ತ ಮುನ್ನೂರರ ಗಡಿ ದಾಟಿತ್ತು. ವಿಂಡೀಸ್‌ 309 ರನ್‌ ಗಳಿಸಲು ವಿಫಲವಾದರೆ, ಭಾರತ ಅಕ್ಷರ್‌ ಪಟೇಲ್‌ ಸಾಹಸದಿಂದ 312 ರನ್‌ ಪೇರಿಸಿ ಜಯಭೇರಿ ಮೊಳಗಿಸಿತು. ಹೀಗಾಗಿ ಬುಧವಾರವೂ ಪರಿಸ್ಥಿತಿ ಬದಲಾಗುವ ಸಂಭವ ಕಡಿಮೆ. ಜಾಣ್ಮೆಯ ಬೌಲಿಂಗ್‌ ನಡೆಸಿದವರಿಗೆ ಪಂದ್ಯ ಒಲಿಯುವ ಸಾಧ್ಯತೆ ಹೆಚ್ಚು ಎಂಬುದೊಂದು ಲೆಕ್ಕಾಚಾರ.

ಜಡೇಜ ಆಡುವರೇ?
ಉಪನಾಯಕ ಹಾಗೂ ಆಲ್‌ರೌಂಡರ್‌ ರವೀಂದ್ರ ಜಡೇಜ ಮಂಡಿ ನೋವಿನಿಂದಾಗಿ ಮೊದಲೆರಡು ಪಂದ್ಯಗಳಿಗೆ ಲಭ್ಯರಿರಲಿಲ್ಲ. ಅವರ ಫಿಟ್‌ನೆಸ್‌ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಒಂದು ವೇಳೆ ಆಡಲಿಳಿದರೆ ಚಹಲ್‌ಗೆ ರೆಸ್ಟ್‌ ನೀಡಬಹುದು. ಮತ್ತೋರ್ವ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಹಿಂದಿನ ಪಂದ್ಯದ “ಮ್ಯಾಚ್‌ ವಿನ್ನರ್‌’ ಆದ ಕಾರಣ ಅವರಿಗೆ ಸಹಜವಾಗಿಯೇ ಇನ್ನೊಂದು ಅವಕಾಶ ಲಭಿಸಬೇಕಿದೆ. ಆಗ ಇಬ್ಬರು ಎಡಗೈ ಸ್ಪಿನ್‌ ಜೋಡಿ ದಾಳಿಗೆ ಇಳಿದಂತಾಗುತ್ತದೆ.

ಎಡಗೈ ಸೀಮ್‌ ಬೌಲರ್‌ ಅರ್ಷದೀಪ್‌ ಸಿಂಗ್‌ ಅವರನ್ನು ಕಡೆಗಣಿಸುತ್ತಲೇ ಬರಲಾಗುತ್ತಿದೆ. ಆವೇಶ್‌ ಖಾನ್‌ ಬದಲು ಇವರಿಗೆ ಅವಕಾಶ ನೀಡಬಹುದು. ಆವೇಶ್‌ ಪದಾರ್ಪಣ ಪಂದ್ಯದ 6 ಓವರ್‌ಗಳಲ್ಲಿ 54 ರನ್‌ ನೀಡಿ ಬಹಳ ದುಬಾರಿಯಾಗಿದ್ದರು.

Advertisement

ವಿಂಡೀಸ್‌ ವೈಫಲ್ಯ
ನಿಜಕ್ಕಾದರೆ ಭಾರತಕ್ಕಿಂತಲೂ ವೆಸ್ಟ್‌ ಇಂಡೀಸ್‌ ಪಡೆಯೇ ಹೆಚ್ಚು ಅನುಭವಿ ಹಾಗೂ ಬಲಿಷ್ಠವಾಗಿ ಗೋಚರಿಸುತ್ತಿದೆ. ಹೋಪ್‌, ಮೇಯರ್, ಪೂರಣ್‌, ಪೊವೆಲ್‌, ಶೆಫರ್ಡ್‌ ಅವರಂಥ ಬಿಗ್‌ ಹಿಟ್ಟರ್‌ಗಳನ್ನು ಹೊಂದಿರುವ ಕೆರಿಬಿಯನ್ನರ ಬ್ಯಾಟಿಂಗ್‌ ವಿಭಾಗ ವೈವಿಧ್ಯಮಯ. ಆದರೆ ಫಿನಿಶಿಂಗ್‌ ಕಲೆಗಾರಿಕೆಯಲ್ಲಿ ವಿಫಲವಾಗುತ್ತಲೇ ಇದೆ. ಹೀಗಾಗಿ ಕೈಲಿದ್ದ ಎರಡೂ ಪಂದ್ಯಗಳನ್ನು ಅದು ಕಳೆದುಕೊಂಡಿತು. ಆಲ್‌ರೌಂಡರ್‌ ಜೇಸನ್‌ ಹೋಲ್ಡರ್‌ ಕೋವಿಡ್‌ಗೆ ಒಳಗಾದದ್ದು ತಂಡಕ್ಕೆ ಎದುರಾದ ದೊಡ್ಡ ಹೊಡೆತ. ಅಂತಿಮ ಪಂದ್ಯದಲ್ಲಿ ಅವರು ಆಡುವುದು ಖಾತ್ರಿಯಾಗಿಲ್ಲ.

ಕೆಲವರಿಗೆ ವಿಶ್ರಾಂತಿ?
ಅಂತಿಮ ಪಂದ್ಯಕ್ಕಾಗಿ ಭಾರತ ಕೆಲವು ಆಟಗಾರರಿಗೆ ವಿಶ್ರಾಂತಿ ನೀಡಿ ತನ್ನ ಮೀಸಲು ಸಾಮರ್ಥ್ಯವನ್ನು ಪರೀಕ್ಷಿಸಲು ಮುಂದಾಗುವ ಸಾಧ್ಯತೆ ಇದೆ. ಆದರೂ ಕ್ರಮವಾಗಿ 64 ಹಾಗೂ 43 ರನ್‌ ಮಾಡಿ ಎರಡೂ ಪಂದ್ಯಗಳಲ್ಲಿ ಮಿಂಚಿದ ಶುಭಮನ್‌ ಗಿಲ್‌ ಬದಲು ಋತುರಾಜ್‌ ಗಾಯಕ್ವಾಡ್‌ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಕಡಿಮೆ. ಗಾಯಕ್ವಾಡ್‌ಗೆ ದಕ್ಷಿಣ ಆಫ್ರಿಕಾ ವಿರುದ್ಧ ಬಹಳಷ್ಟು ಅವಕಾಶ ಲಭಿಸಿತ್ತಾದರೂ ಕ್ವಾಲಿಟಿ ಪೇಸ್‌ ಬೌಲಿಂಗ್‌ ಎದುರು ಚಡಪಡಿಸಿದ್ದರು.

ಕಳೆದ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಮತ್ತು ಸಂಜು ಸ್ಯಾಮ್ಸನ್‌ ಅರ್ಧ ಶತಕದ ಸಂಭ್ರಮ ಆಚರಿಸಿದ್ದರು. ಆದರೆ ಸೂರ್ಯಕುಮಾರ್‌ ಯಾದವ್‌ ಎರಡರಲ್ಲೂ ವಿಫಲರಾಗಿದ್ದರು. ಹೀಗಾಗಿ ಯಾದವ್‌ ಬದಲು ಇಶಾನ್‌ ಕಿಶನ್‌ಗೆ ಆವಕಾಶ ಸಿಗುವ ಸಾಧ್ಯತೆಯೊಂದು ಕಾಣುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next