Advertisement
ಇಲ್ಲಿ ಭಾರತ-ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ಐಪಿಎಲ್‌ಗೂ ಮುನ್ನ ಕರೋಡ್‌ಪತಿಗಳೆಲ್ಲ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ. ಹಾಗೆಯೇ ವರ್ಷಾಂತ್ಯದ ಟಿ20 ವಿಶ್ವಕಪ್ ಪಂದ್ಯಾವಳಿಗೂ ತಮ್ಮ ಸ್ಥಾನವನ್ನು ಭದ್ರಪಡಿಸಬೇಕಿದೆ.
ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಅವರಿಂದ ತೆರವಾದ ನಾಯಕನ ಸ್ಥಾನಕ್ಕೆ ರೋಹಿತ್ ಶರ್ಮ ಬಂದಿದ್ದಾರೆ. ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್ ಆಗಿ ಗೆದ್ದ ಹೆಗ್ಗಳಿಕೆ ಇವರದ್ದಾಗಿದೆ. ಈ ಹುರುಪಿನಲ್ಲೇ ಚುಟುಕು ಮಾದರಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವುದರಲ್ಲಿ ಅನುಮಾನವಿಲ್ಲ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ದಾಖಲೆ 5 ಸಲ ಚಾಂಪಿಯನ್ ಪಟ್ಟಕ್ಕೇರಿಸಿದ ಹೆಗ್ಗಳಿಕೆಯೂ ರೋಹಿತ್ ಪಾಲಿಗಿದೆ.
Related Articles
ಕೆ.ಎಲ್. ರಾಹುಲ್ ಗಾಯಾಳಾಗಿ ಸರಣಿಯಿಂದ ಹೊರಗುಳಿಯುವುದರಿಂದ ರೋಹಿತ್ ಜತೆ ಓಪನಿಂಗ್ ಬರುವವರು ಯಾರು ಎಂಬುದೊಂದು ಕುತೂಹಲ. ಇಲ್ಲಿ ರೇಸ್‌ನಲ್ಲಿರುವವರು ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ರಿಷಭ್ ಪಂತ್. ಮಾಜಿ ನಾಯಕ ವಿರಾಟ್ ಕೊಹ್ಲಿಯವರನ್ನೂ ಪರಿಗಣಿಸುವ ಸಾಧ್ಯತೆ ಇದೆ. ಏಕದಿನದಲ್ಲಿ 3 ಜೋಡಿಯನ್ನು ಪ್ರಯೋಗಿಸಿದ ಭಾರತ, ಟಿ20ಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಪ್ರಯೋಗಕ್ಕೆ ಇಳಿಯಬಾರದು ಎಂಬುದು ಕ್ರಿಕೆಟ್ ಪಂಡಿತರ ಅನಿಸಿಕೆ.
Advertisement
ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ -ಇಬ್ಬರನ್ನೂ ಆಡಿಸಿದರೆ ಲಾಭ ಹೆಚ್ಚು.
ಆಲ್‌ರೌಂಡ್ ವಿಭಾಗಕ್ಕೆ ಬಹಳಷ್ಟು ಮಂದಿಯ ಸ್ಪರ್ಧೆ ಇದೆ. ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಹರ್ಷಲ್ ಪಟೇಲ್, ದೀಪಕ್ ಹೂಡಾ ಇಲ್ಲಿನ ಪ್ರಮುಖರು. ಸ್ಪಿನ್ ವಿಭಾಗಕ್ಕೆ ಮತ್ತೆ ಚಹಲ್ ಅವರೇ ಹೆಡ್. ಜತೆಗೆ ಕುಲದೀಪ್ ಯಾದವ್, ರಾಜಸ್ಥಾನದ ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ ಕೂಡ ಇದ್ದಾರೆ.
ಸ್ಟ್ರೈಕ್ ಬೌಲರ್ ಅವಕಾಶ ಭುವನೇಶ್ವರ್ ಕುಮಾರ್‌ಗೆ ಸಿಗುವ ಸಾಧ್ಯತೆ ಕಡಿಮೆ.
ಸಿಡಿದು ನಿಂತೀತೇ ವಿಂಡೀಸ್?ಎರಡು ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ಕೂಡ ಬಲಿಷ್ಠ ಪಡೆಯನ್ನೇ ಹೊಂದಿದೆ. ಒಬ್ಬರಿಗಿಂತ ಒಬ್ಬರು ದೈತ್ಯರು. ಸಿಡಿದು ನಿಂತರೆ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಬಲ್ಲರು. ಆದರೆ ಇವರು ಇನ್ನೂ ಒಂದು ತಂಡವಾಗಿ, ಬದ್ಧತೆ ಹಾಗೂ ಜವಾಬ್ದಾರಿಯಿಂದ ಆಡದಿರುವುದು ನಿಜಕ್ಕೂ ದುರಂತ. ಹೀಗಾಗಿ ಏಕದಿನ ಸರಣಿಯಲ್ಲಿ ವೈಟ್‌ವಾಶ್ ಮಾಡಿಕೊಂಡರು. ಐಪಿಎಲ್ ದೃಷ್ಟಿಯಿಂದಾದರೂ ಉತ್ತಮ ಪ್ರದರ್ಶನ ನೀಡಿದರೆ ಸರಣಿ ಹೆಚ್ಚು ರೋಚಕವಾಗಲಿದೆ. ಗಪ್ಟಿಲ್ ದಾಖಲೆ ಪತನದತ್ತ
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಮಾರ್ಟಿನ್ ಗಪ್ಟಿಲ್ ಹೆಸರಲ್ಲಿದೆ. ಅವರು 112 ಪಂದ್ಯಗಳಿಂದ 3,299 ರನ್ ಗಳಿಸಿದ್ದಾರೆ. ಪ್ರಸಕ್ತ ಸರಣಿಯಲ್ಲಿ ಇದನ್ನು ಮುರಿಯಲು ಭಾರತದ ಇಬ್ಬರು ಬ್ಯಾಟರ್‌ಗಳು ರೇಸ್‌ನಲ್ಲಿದ್ದಾರೆ. ಇವರೆಂದರೆ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಹಾಲಿ ನಾಯಕ ರೋಹಿತ್ ಶರ್ಮ. ಇವರಲ್ಲಿ ಕೊಹ್ಲಿ 95 ಪಂದ್ಯಗಳಿಂದ 3,227 ರನ್ ಮಾಡಿದ್ದಾರೆ. ಗಪ್ಟಿಲ್ ದಾಖಲೆ ಮುರಿಯಲು ಕೊಹ್ಲಿಗೆ ಬೇಕಿರುವುದು ಬರೀ 72 ರನ್. ರೋಹಿತ್ ಶರ್ಮ 119 ಪಂದ್ಯಗಳಿಂದ 3,197 ರನ್ ಗಳಿಸಿದ್ದಾರೆ. ಇನ್ನು 103 ರನ್ ಮಾಡಿದರೆ ಗಪ್ಟಿಲ್ ಮೊತ್ತವನ್ನು ಮೀರಿ ನಿಲ್ಲಬಹುದಾಗಿದೆ. ಇವರಿಬ್ಬರಲ್ಲಿ ಯಾರು ಮೊದಲು ಅಗ್ರಸ್ಥಾನ ಅಲಂಕರಿಸಬಹುದು ಎಂಬುದು ಈ ಸರಣಿಯ ಕುತೂಹಲ. ಆದರೆ ಮಾರ್ಟಿನ್ ಗಪ್ಟಿಲ್ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರುವುದರಿಂದ ಇಲ್ಲಿ ಹಾವು-ಏಣಿ ಆಟ ಕಂಡುಬರುವುದು ನಿಶ್ಚಿತ. ಈ ಮೂವರನ್ನು ಹೊರತುಪಡಿಸಿದರೆ 2,676 ರನ್ ಮಾಡಿರುವ ಆರನ್ ಫಿಂಚ್ ಅವರದೇ ಅಧಿಕ ಗಳಿಕೆ. ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಹರ್ಷಲ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಹಲ್, ದೀಪಕ್ ಚಹರ್/ಆವೇಶ್ ಖಾನ್. ವೆಸ್ಟ್ ಇಂಡೀಸ್: ಕೈಲ್ ಮೇಯರ್, ಬ್ರ್ಯಾಂಡನ್ ಕಿಂಗ್, ನಿಕೋಲಸ್ ಪೂರಣ್, ಕೈರನ್ ಪೊಲಾರ್ಡ್ (ನಾಯಕ), ಪೊವೆಲ್, ಜೇಸನ್ ಹೋಲ್ಡರ್, ರೊಮಾರಿಯೊ ಶೆಫರ್ಡ್, ಫ್ಯಾಬಿಯನ್ ಅಲೆನ್, ಓಡೀನ್ ಸ್ಮಿತ್, ಅಖೀಲ್ ಹೊಸೇನ್, ಶೆಲ್ಡನ್ ಕಾಟ್ರೆಲ್.