Advertisement
“ಬಾಕ್ಸಿಂಗ್ ಡೇ’ ಟೆಸ್ಟ್ ಪಂದ್ಯದಲ್ಲಿ ತೋರ್ಪಡಿಸಿದ ಸಾಮರ್ಥ್ಯ, ಆಡಿದ ರೀತಿಯನ್ನೆಲ್ಲ ಕಂಡಾಗ ಹೊಸ ವರ್ಷದ ಟೆಸ್ಟ್‌ನಲ್ಲೂ ಭಾರತವೇ ನೆಚ್ಚಿನ ತಂಡವಾಗಿ ಗೋಚರಿಸುತ್ತಿದೆ. ತನ್ನ ಟೆಸ್ಟ್ ಚರಿತ್ರೆಯಲ್ಲೇ ದಕ್ಷಿಣ ಆಫ್ರಿಕಾ ಇಷ್ಟೊಂದು ದುರ್ಬಲವಾಗಿ ಕಂಡದ್ದಿಲ್ಲ ಎಂಬುದನ್ನು ಗಮನಿಸುವಾಗಲೂ ಟೀಮ್ ಇಂಡಿಯಾದ ಮೇಲುಗೈ ನಿಚ್ಚಳವೆನಿಸುತ್ತದೆ. ಸರಣಿ ಗೆಲ್ಲಬೇಕಾದರೆ ಭಾರತ ಉಳಿದೆರಡು ಟೆಸ್ಟ್‌ಗಳನ್ನು ಡ್ರಾ ಮಾಡಿಕೊಂಡರೂ ಸಾಕು. ಆದರೆ ಈಗಿನ ಟಿ20 ಜಮಾನಾದಲ್ಲಿ ಟೆಸ್ಟ್ ಡ್ರಾಗೊಳ್ಳುವ ಸಾಧ್ಯತೆ ವಿರಳಗೊಂಡಿರುವುದರಿಂದ ಸ್ಪಷ್ಟ ಫಲಿತಾಂಶ ನಿಶ್ಚಿತ ಎಂಬ ಸ್ಥಿತಿ ಇದೆ. ಅದು ತನ್ನ ಪರವಾಗಿ ಬರುವಂತೆ ಕೊಹ್ಲಿ ಪಡೆ ನೋಡಿಕೊಳ್ಳಬೇಕಿದೆ.
ಹೇಳಿ ಕೇಳಿ ಜೊಹಾನ್ಸ್‌ಬರ್ಗ್‌ನ “ವಾಂಡರರ್ ಸ್ಟೇಡಿಯಂ’ ಭಾರತದ ನೆಚ್ಚಿನ ತಾಣ. ಇಲ್ಲಿ ನಡೆದ 5 ಟೆಸ್ಟ್‌ಗಳಲ್ಲಿ ಎರಡನ್ನು ಗೆದ್ದ ಹೆಗ್ಗಳಿಕೆ ಭಾರತದ್ದು. ಉಳಿದ 3 ಪಂದ್ಯ ಡ್ರಾಗೊಂಡಿವೆ. ದಕ್ಷಿಣ ಆಫ್ರಿಕಾಕ್ಕೆ ಇಲ್ಲಿನ್ನೂ ಟೀಮ್ ಇಂಡಿಯಾವನ್ನು ಮಣಿಸಲು ಸಾಧ್ಯವಾಗಿಲ್ಲ. ಸಾಲದ್ದಕ್ಕೆ ಸೆಂಚುರಿಯನ್‌ನಲ್ಲಿ ಬಿದ್ದ ಬರೆ ಬೇರೆ. ಡೀನ್ ಎಲ್ಗರ್ ಪಡೆಯನ್ನು ಈ ಒತ್ತಡದಿಂದ ಚೇತರಿಸಿಕೊಳ್ಳದಂತೆ ನೋಡಿಕೊಂಡರೆ ಕಾಮನಬಿಲ್ಲಿನ ನಾಡಿನಲ್ಲಿ ಭಾರತದಿಂದ ಟೆಸ್ಟ್ ಇತಿಹಾಸ ನಿರ್ಮಾಣಗೊಳ್ಳುವುದು ಖಚಿತ. ಇದನ್ನೂ ಓದಿ:ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಬೊಂಬಾಟ್ ಆಟ
Related Articles
ಜೊಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯಕ್ಕಾಗಿ ಭಾರತದ ಕಾಂಬಿನೇಶನ್ ಹೇಗಿರಬಹುದೆಂಬ ಕುತೂಹಲ ಸಹಜ. ಸಾಮಾನ್ಯವಾಗಿ ಗೆದ್ದ ತಂಡದಲ್ಲಿ ಬದಲಾವಣೆ ಸಂಭವಿಸುವುದು ಕಡಿಮೆ. ಆದರೆ ಇಲ್ಲಿನ ಟ್ರ್ಯಾಕ್ ಸಂಪೂರ್ಣವಾಗಿ ವೇಗಿಗಳಿಗೆ ನೆರವಾಗುವ ಕಾರಣ ಸ್ಪಿನ್ನರ್ ಅಶ್ವಿನ್ ಸ್ಥಾನಕ್ಕೆ ಆತಂಕ ಎದುರಾಗಲೂಬಹುದು. ಈ ಜಾಗಕ್ಕೆ ಬ್ಯಾಟ್ಸ್‌ಮನ್ ಹನುಮ ವಿಹಾರಿ ಬರುವ ಸಾಧ್ಯತೆ ಇದೆ. ವಿಹಾರಿ ಪಾರ್ಟ್‌ಟೈಮ್ ಸ್ಪಿನ್ನರ್ ಕೂಡ ಆಗಿರುವುದನ್ನು ಮರೆಯುವಂತಿಲ್ಲ.
Advertisement
ಹಾಗೆಯೇ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಕೈಬಿಟ್ಟು ಉಮೇಶ್ ಯಾದವ್ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ತಂಡದ ವೇಗದ ಬೌಲಿಂಗ್ ವಿಭಾಗ ಇನ್ನಷ್ಟು ಬಲಿಷ್ಠಗೊಳ್ಳಲಿದೆ.ಭಾರತದ ಬ್ಯಾಟಿಂಗ್ ಸರದಿಯಲ್ಲಿ ಪರಿವರ್ತನೆಯ ಸಾಧ್ಯತೆ ಇಲ್ಲ. ಹೀಗಾಗಿ ಪೂಜಾರ, ರಹಾನೆ ಸ್ಥಾನ ಸದ್ಯಕ್ಕೆ ಭದ್ರ. ಹಾಗೆಯೇ ಶ್ರೇಯಸ್ ಅಯ್ಯರ್ ಕಾಯುವುದೂ ಅನಿವಾರ್ಯ. ರಿಯಾನ್ ರಿಕಲ್ಟನ್ ಕೀಪರ್
ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಅವರ ದಿಢೀರ್ ನಿವೃತ್ತಿಯಿಂದ ದಕ್ಷಿಣ ಆಫ್ರಿಕಾ ತಂಡ ತತ್ತರಿಸಿದೆ. ಈ ಸ್ಥಾನವನ್ನು ಡ್ಯಾಶಿಂಗ್ ಕೀಪರ್-ಬ್ಯಾಟರ್ ರಿಯಾನ್ ರಿಕಲ್ಟನ್ ತುಂಬಬಹುದು. ಘಾತಕ ವೇಗಿ ಡ್ನೂನ್ ಒಲಿವರ್ ಅವರಿಗಾಗಿ ವಿಯಾನ್ ಮುಲ್ಡರ್ ಸ್ಥಾನ ಬಿಟ್ಟುಕೊಡುವ ಸಂಭವವಿದೆ. ಪಂದ್ಯಕ್ಕೆ ಮಳೆ ಸಾಧ್ಯತೆ
ಜೊಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯಕ್ಕೂ ಮಳೆ ಭೀತಿಯ ಸಾಧ್ಯತೆ ಇದೆ. ಹವಾಮಾನ ಮುನ್ಸೂಚನೆಯಂತೆ ಸೋಮವಾರ ಅಪರಾಹ್ನದ ಬಳಿಕ ಸಾಧರಾಣ ಮಳೆಯಾಗಲಿದೆ. ಮಂಗಳ ವಾರ ದಿನವಿಡೀ ಗುಡುಗು ಸಹಿತ ಭಾರೀ ಮಳೆ ಆಗಲಿದ್ದು, ಸೆಂಚುರಿಯನ್ ಟೆಸ್ಟ್ ಪಂದ್ಯದಂತೆ ದ್ವಿತೀಯ ದಿನದಾಟ ವಾಶ್‌ಔಟ್ ಆಗಲೂಬಹುದು. ಆದರೆ ಸೆಂಚುರಿಯನ್ ಪಂದ್ಯದ ಅಂತಿಮ ದಿನ ಭಾರೀ ಮಳೆ ಸುರಿ ಯಲಿದೆ ಎಂಬ ಹವಾಮಾನ ವರದಿ ಸುಳ್ಳಾಗಿತ್ತು! ಸಂಭಾವ್ಯ ತಂಡಗಳು
ಭಾರತ: ಕೆ.ಎಲ್. ರಾಹುಲ್, ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ರಹಾನೆ, ರಿಷಭ್ ಪಂತ್, ಹನುಮ ವಿಹಾರಿ/ಆರ್. ಅಶ್ವಿನ್, ಉಮೇಶ್ ಯಾದವ್/ಶಾರ್ದೂಲ್ ಠಾಕೂರ್, ಶಮಿ, ಮೊಹಮ್ಮದ್‌ಸಿರಾಜ್, ಜಸ್‌ಪ್ರೀತ್‌ಬುಮ್ರಾ. ದಕ್ಷಿಣ ಆಫ್ರಿಕಾ:
ಡೀನ್ ಎಲ್ಗರ್ (ನಾಯಕ),ಮಾರ್ಕ್‌ರಮ್, ಕೀಗನ್ ಪೀಟರ್‌ಸನ್, ಡುಸೆನ್, ಬವುಮ, ರಿಯಾನ್ ರಿಕ್ಲಟನ್, ಡ್ನೂನ್ ಒಲಿವರ್, ಮಾರ್ಕೊ ಜಾನ್ಸೆನ್, ರಬಾಡ, ಮಹಾರಾಜ್, ಎನ್‌ಗಿಡಿ. ಆರಂಭ: ಅಪರಾಹ್ನ 1.30
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್