Advertisement

ನೇಪಿಯರ್‌ನಲ್ಲಿ ರನ್‌ ಪ್ರವಾಹದ ನಿರೀಕ್ಷೆ

12:30 AM Jan 22, 2019 | Team Udayavani |

ನೇಪಿಯರ್‌: ಆಸ್ಟ್ರೇಲಿಯ ನೆಲದಲ್ಲಿ ಇತಿಹಾಸ ನಿರ್ಮಿಸಿದ ಟೀಮ್‌ ಇಂಡಿಯಾ ಈಗ ನ್ಯೂಜಿಲ್ಯಾಂಡಿಗೆ ಆಗಮಿಸಿದೆ. ರವಿವಾರವೇ ಕೊಹ್ಲಿ ಪಡೆ ಆಕ್ಲೆಂಡ್‌ಗೆ ಬಂದಿಳಿದಿದ್ದು, ಬುಧವಾರ ನೇಪಿಯರ್‌ನಲ್ಲಿ 5 ಪಂದ್ಯಗಳ ಏಕದಿನ ಸರಣಿಗೆ ಚಾಲನೆ ಲಭಿಸಲಿದೆ. ಎರಡೂ ತಂಡಗಳು ಇತ್ತೀಚೆಗೆ ಏಕದಿನ ಸರಣಿಯಲ್ಲಿ ಆಮೋಘ ಫಾರ್ಮ್ ಪ್ರದರ್ಶಿಸಿರುವುದರಿಂದ ಸರಣಿ ತೀವ್ರ ಪೈಪೋಟಿಯಿಂದ ಸಾಗುವುದರಲ್ಲಿ ಅನುಮಾನವಿಲ್ಲ.

Advertisement

ನೇಪಿಯರ್‌ನ “ಮೆಕ್‌ಲೀನ್‌ ಪಾರ್ಕ್‌’ ಬ್ಯಾಟ್ಸ್‌ಮನ್‌ಗಳ ಪಾಲಿನ ಸ್ವರ್ಗವಾಗಿದ್ದು, ಧಾರಾಳ ರನ್‌ ಹರಿದು ಬರುವ ನಿರೀಕ್ಷೆ ಇದೆ. ಇದಕ್ಕೆ 2018-19ನೇ ಸಾಲಿನ ಸೆಂಟ್ರಲ್‌ ಡಿಸ್ಟ್ರಿಕ್ಟ್$Õ-ಕ್ಯಾಂಟರ್‌ಬರಿ ತಂಡಗಳ ನಡುವಿನ “ಸೂಪರ್‌ ಸ್ಮ್ಯಾಶ್‌’ ಟಿ20 ಪಂದ್ಯವೇ ಸಾಕ್ಷಿ. ಮೊದಲು ಬ್ಯಾಟಿಂಗ್‌ ನಡೆಸಿದ ಟಾಮ್‌ ಬ್ರೂಸ್‌ ನಾಯಕತ್ವದ ಸಿ.ಡಿ. ತಂಡ 3 ವಿಕೆಟಿಗೆ 225 ರನ್‌ ರಾಶಿ ಹಾಕಿತ್ತು. ಚೇಸಿಂಗ್‌ ವೇಳೆ ಟಾಮ್‌ ಲ್ಯಾಥಂ 60 ಎಸೆತಗಳಿಂದ 110 ರನ್‌ ಸಿಡಿಸಿದ್ದರು.

ಫ‌ಲಿತಾಂಶ ಏನೇ ಆಗಿರಲಿ, ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಪಂದ್ಯದ ವೇಳೆ ನೇಪಿಯರ್‌ ಟ್ರ್ಯಾಕ್‌ನಲ್ಲಿ ಹೆಚ್ಚಿನ ಬದಲಾವಣೆಯಾಗುವ ಸಂಭವ ಇಲ್ಲ. ಮೊದಲು ಬ್ಯಾಟಿಂಗ್‌ ನಡೆಸುವ ತಂಡ 300 ರನ್‌ ಗಡಿ ದಾಟುವುದರಲ್ಲಿ ಅನುಮಾನವಿಲ್ಲ. ಹಾಗೆಯೇ ಇಂಥ ದೊಡ್ಡ ಮೊತ್ತವನ್ನು ಬೆನ್ನಟ್ಟುವುದೂ ಇಲ್ಲಿ ಸಮಸ್ಯೆಯಾಗಿ ಕಾಡದು. ಮೊದಲ 10 ಓವರ್‌ಗಳ ಪವರ್‌-ಪ್ಲೇ ವೇಳೆ ವಿಕೆಟ್‌ ಉರುಳುವ ಸಾಧ್ಯತೆಯೂ ಕಡಿಮೆ ಎಂಬುದು ಸದ್ಯದ ಲೆಕ್ಕಾಚಾರ. ಹೀಗಾಗಿ ನೇಪಿಯರ್‌ ಟ್ರ್ಯಾಕ್‌ ಬೌಲರ್‌ಗಳ ಜಾಣ್ಮೆಗೆ ಸವಾಲಾಗುವುದರಲ್ಲಿ ಅನುಮಾನವಿಲ್ಲ.

ಭಾರತಕ್ಕೆ ಆರರಲ್ಲಿ 2 ಜಯ
ನೇಪಿಯರ್‌ನಲ್ಲಿ ಭಾರತ-ನ್ಯೂಜಿಲ್ಯಾಂಡ್‌ ಈವರೆಗೆ 6 ಏಕದಿನ ಪಂದ್ಯಗಳಲ್ಲಿ ಮುಖಾಮುಖೀಯಾಗಿವೆ. ನ್ಯೂಜಿಲ್ಯಾಂಡ್‌ ನಾಲ್ಕರಲ್ಲಿ ಜಯ ಸಾಧಿಸಿದರೆ, ಉಳಿದೆರಡರಲ್ಲಿ ಭಾರತ ಗೆದ್ದಿದೆ. ಇತ್ತಂಡಗಳಿಲ್ಲ 2014ರ ಬಳಿಕ ಮೊದಲ ಸಲ ಮುಖಾಮುಖೀಯಾಗುತ್ತಿವೆ.

ನೇಪಿಯರ್‌ನಲ್ಲಿ ನಡೆದ ಕಳೆದೆರಡು ಪಂದ್ಯಗಳು ಪ್ರತಿಕೂಲ ಹವಾಮಾನದಿಂದ ರದ್ದಾಗಿವೆ. 2016ರಲ್ಲಿ ಪಾಕಿಸ್ಥಾನ ವಿರುದ್ಧ, 2017ರಲ್ಲಿ ಆಸ್ಟ್ರೇಲಿಯ ವಿರುದ್ಧದ ಪಂದ್ಯ ಮಳೆಯಿಂದ ಕೊಚ್ಚಿಹೋಗಿತ್ತು. ಇಲ್ಲಿ ಕೊನೆಯ ಸಲ ಸ್ಪಷ್ಟ ಫ‌ಲಿತಾಂಶಕ್ಕೆ ಸಾಕ್ಷಿಯಾದ ಪಂದ್ಯ ನಡೆದದ್ದು 2015ರಲ್ಲಿ. ಅಂದಿನ ಮುಖಾಮುಖೀಯಲ್ಲಿ ವೆಸ್ಟ್‌ ಇಂಡೀಸ್‌ 6 ವಿಕೆಟ್‌ಗಳಿಂದ ಯುಎಇಯನ್ನು ಮಣಿಸಿತ್ತು. ನ್ಯೂಜಿಲ್ಯಾಂಡ್‌ ಕೂಡ 2015ರಲ್ಲೇ ನೇಪಿಯರ್‌ನಲ್ಲಿ ಕೊನೆಯ ಗೆಲುವು ದಾಖಲಿಸಿತ್ತು.

Advertisement

ನೇಪಿಯರ್‌ನಲ್ಲಿ ನ್ಯೂಜಿಲ್ಯಾಂಡ್‌-ಭಾರತ
ವರ್ಷ    ಫ‌ಲಿತಾಂಶ

1994    ನ್ಯೂಜಿಲ್ಯಾಂಡಿಗೆ 28 ರನ್‌ ಜಯ
1995    ನ್ಯೂಜಿಲ್ಯಾಂಡಿಗೆ 4 ವಿಕೆಟ್‌ ಜಯ
1999    ಭಾರತಕ್ಕೆ 2 ವಿಕೆಟ್‌ ಜಯ
2002    ನ್ಯೂಜಿಲ್ಯಾಂಡಿಗೆ 35 ರನ್‌ ಜಯ
2009    ಭಾರತಕ್ಕೆ 53 ರನ್‌ ಜಯ
2014    ನ್ಯೂಜಿಲ್ಯಾಂಡಿಗೆ 24 ರನ್‌ ಜಯ

* ನೇಪಿಯರ್‌ನಲ್ಲಿ ಭಾರತ
* ಪಂದ್ಯ: 06
* ಗೆಲುವು: 02
* ಸೋಲು: 04

ಏಕದಿನ ಸರಣಿ ವೇಳಾಪಟ್ಟಿ
ದಿನಾಂಕ    ಪಂದ್ಯ    ಸ್ಥಳ    ಆರಂಭ

ಜ. 23    1ನೇ ಏಕದಿನ    ನೇಪಿಯರ್‌    ಬೆ. 7.30
ಜ. 26    2ನೇ ಏಕದಿನ    ಮೌಂಟ್‌ ಮೌಂಗನುಯಿ    ಬೆ. 7.30
ಜ. 28    3ನೇ ಏಕದಿನ    ಮೌಂಟ್‌ ಮೌಂಗನುಯಿ    ಬೆ. 7.30
ಜ. 31    4ನೇ ಏಕದಿನ    ಹ್ಯಾಮಿಲ್ಟನ್‌    ಬೆ. 7.30
ಫೆ. 3    5ನೇ ಏಕದಿನ    ವೆಲ್ಲಿಂಗ್ಟನ್‌    ಬೆ. 7.30
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

ಭಾರತ-ನ್ಯೂಜಿಲ್ಯಾಂಡ್‌ ರ್‍ಯಾಂಕಿಂಗ್‌ ಲೆಕ್ಕಾಚಾರ
ಭಾರತ-ನ್ಯೂಜಿಲ್ಯಾಂಡ್‌ 5 ಪಂದ್ಯಗಳ ಸುದೀರ್ಘ‌ ಸರಣಿಯಲ್ಲಿ ಪಾಲ್ಗೊಳ್ಳುವುದರಿಂದ ಸಹಜವಾಗಿಯೇ ತಂಡಗಳ ರ್‍ಯಾಂಕಿಂಗ್‌ ಬಗ್ಗೆ ಕುತೂಹಲ ಮೂಡಿದೆ. ಸದ್ಯ ಭಾರತ 121 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರೆ, ನ್ಯೂಜಿಲ್ಯಾಂಡ್‌ 113 ಅಂಕಗಳೊಂದಿಗೆ ತೃತೀಯ ಸ್ಥಾನಿಯಾಗಿದೆ. 126 ಅಂಕ ಹೊಂದಿರುವ ಇಂಗ್ಲೆಂಡಿಗೆ ಅಗ್ರಸ್ಥಾನ.

ಈ ಸರಣಿಯನ್ನು ಯಾವ ತಂಡ ಎಷ್ಟು ಅಂತರದಲ್ಲಿ ಗೆದ್ದರೆ ರ್‍ಯಾಂಕಿಂಗ್‌ ಲೆಕ್ಕಾಚಾರ ಹೇಗಿರಲಿದೆ ಎಂಬುದರ ಚಿತ್ರಣವೊಂದು ಇಲ್ಲಿದೆ.

* ಭಾರತ 5-0 ಅಂತರದಿಂದ ಗೆದ್ದರೆ: ಆಗ ಭಾರತಕ್ಕೆ 3 ಅಂಕ ಲಭಿಸಲಿದೆ. ಆದರೆ ಅಗ್ರಸ್ಥಾನ ಅಲಂಕರಿಸದು. ಇದೇ ವೇಳೆ ನ್ಯೂಜಿಲ್ಯಾಂಡ್‌ 2 ಅಂಕ ಕಳೆದುಕೊಳ್ಳಲಿದೆ. 4-5ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ-ಪಾಕಿಸ್ಥಾನ ಏಕದಿನ ಸರಣಿ ಆಡುತ್ತಿರುವುದರಿಂದ ಇಲ್ಲಿನ ಫ‌ಲಿತಾಂಶವೂ ನಿರ್ಣಾಯಕವಾಗಲಿದೆ.

* ಭಾರತ 4-1ರಿಂದ ಗೆದ್ದರೆ: ಭಾರತ ಒಂದು ಅಂಕ ಪಡೆದರೆ, ನ್ಯೂಜಿಲ್ಯಾಂಡ್‌ ಒಂದಂಕ ಕಳೆದುಕೊಳ್ಳಲಿದೆ.
* ಭಾರತ 3-2ರಿಂದ ಗೆದ್ದರೆ: ಭಾರತ ಯಾವುದೇ ಅಂಕ ಕಳೆದುಕೊಳ್ಳದು. ನ್ಯೂಜಿಲ್ಯಾಂಡಿಗೂ ಲಾಭವಾಗದು.
* ಭಾರತ 2-3ರಿಂದ ಸೋತರೆ: ಭಾರತಕ್ಕೆ 2 ಅಂಕ ನಷ್ಟವಾಗಲಿದೆ (119). ನ್ಯೂಜಿಲ್ಯಾಂಡ್‌ ಒಂದಂಕ ಗಳಿಸಲಿದೆ (114).

* ಭಾರತ 1-4ರಿಂದ ಸೋತರೆ: ನ್ಯೂಜಿಲ್ಯಾಂಡ್‌ ಅಂಕ 116ಕ್ಕೆ ಏರಲಿದ್ದು, 2ನೇ ಸ್ಥಾನ ಸಮೀಪಿಸಲಿದೆ. ಭಾರತದ ಅಂಕ 118ಕ್ಕೆ ಕುಸಿಯಲಿದೆ.

* ಭಾರತ 0-5 ಅಂತರದಿಂದ ಸೋತರೆ: ನ್ಯೂಜಿಲ್ಯಾಂಡ್‌ 6 ಅಂಕ ಗಳಿಸಿ ಭಾರತವನ್ನು 3ನೇ ಸ್ಥಾನಕ್ಕೆ ತಳ್ಳಲಿದೆ (116).
 

Advertisement

Udayavani is now on Telegram. Click here to join our channel and stay updated with the latest news.

Next