Advertisement

ಡಚ್ಚರ ವಿರುದ್ಧ ಎಚ್ಚರವಿರಲಿ…

06:00 AM Dec 13, 2018 | |

ಭುವನೇಶ್ವರ: ತವರು ನೆಲದಲ್ಲಿ ವಿಶ್ವಕಪ್‌ ಹಾಕಿ ಪಂದ್ಯಾವಳಿ ಆಡುತ್ತಿರುವ ಭಾರತದ ಮುಂದೆ ಇತಿಹಾಸದ ಬಾಗಿಲೊಂದು ತೆರೆಯುವ ಅಪೂರ್ವ ಅವಕಾಶ ಎದುರಾಗಿದೆ. ಗುರುವಾರದ ಕ್ವಾರ್ಟರ್‌ ಫೈನಲ್‌ನಲ್ಲಿ ಬಲಿಷ್ಠ ನೆದರ್ಲೆಂಡ್‌ ವಿರುದ್ಧ ಸೆಣಸಲಿರುವ ಭಾರತ, 43 ವರ್ಷಗಳ ಕಾಯುವಿಕೆಗೆ ಮಂಗಳ ಹಾಡುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದೆ.

Advertisement

ಒಂದು ಕಾಲದ “ಹಾಕಿ ಕಿಂಗ್‌’ ಆಗಿದ್ದ ಭಾರತ ತನ್ನ ಕೊನೆಯ ಹಾಗೂ ಏಕೈಕ ವಿಶ್ವಕಪ್‌ ಗೆದ್ದದ್ದು 1975ರಷ್ಟು ಹಿಂದೆ. ಅಂದಿನಿಂದ ಚಾಂಪಿಯನ್‌ ಆಗುವುದಿರಲಿ, ಸೆಮಿಫೈನಲ್‌ ಕೂಡ ನಮ್ಮವರಿಗೆ ಮರೀಚಿಕೆಯಾಗುತ್ತಲೇ ಬಂದಿದೆ. ಹೀಗಾಗಿ ಸಹಜವಾಗಿಯೇ ನೆದರ್ಲೆಂಡ್‌ ವಿರುದ್ಧದ ಪಂದ್ಯವನ್ನು ಭಾರತೀಯರೆಲ್ಲರೂ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ.

ಭಾರತದ ಪಾಲಿಗೆ ಇದು ತವರಿನ ಪಂದ್ಯವಾದ್ದರಿಂದ ಈ ಕ್ವಾರ್ಟರ್‌ ಫೈನಲ್‌ನ ಸಮಯದಲ್ಲಿ ಬದಲಾವಣೆ ಮಾಡಿ ಕೊಳ್ಳಲಾಗಿದೆ. ಈ ಮುಖಾಮುಖೀ ಸಂಜೆ 4.45ರ ಬದಲು 7 ಗಂಟೆಗೆ ಆರಂಭವಾಗಲಿದೆ. ಹೀಗಾಗಿ ಕೊನೆಯ ಕ್ವಾರ್ಟರ್‌ ಫೈನಲ್‌ ಆಡಬೇಕಿದ್ದ ಜರ್ಮನಿ-ಬೆಲ್ಜಿಯಂ ಮೊದಲ ಪಂದ್ಯದಲ್ಲಿ ಎದುರಾಗಲಿವೆ.

ನೆದರ್ಲೆಂಡ್‌ ವಿರುದ್ಧ ಹಿನ್ನಡೆ
ಲೀಗ್‌ ಹಂತದಲ್ಲಿ ಭಾರತದ್ದು ಅಜೇಯ ಅಭಿಯಾನ. ನೇರವಾಗಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇರಿಸಿದ ಹಿರಿಮೆ. ದಕ್ಷಿಣ ಆಫ್ರಿಕಾ ಮತ್ತು ಕೆನಡಾ ವಿರುದ್ಧ 5 ಗೋಲು ಬಾರಿಸಿ ಗೆದ್ದ ಮನ್‌ಪ್ರೀತ್‌ ಬಳಗ ಬೆಲ್ಜಿಯಂ ವಿರುದ್ಧ 2-2 ಗೋಲುಗಳಿಂದ ಡ್ರಾ ಸಾಧಿಸಿತ್ತು. ಆದರೆ ನಾಕೌಟ್‌ ಸವಾಲು ಯಾವತ್ತೂ ಕಠಿನ ಹಾಗೂ ಒತ್ತಡದಿಂದ ಕೂಡಿರುತ್ತದೆ. ಅದರಲ್ಲೂ ಹೋಮ್‌ ಗ್ರೌಂಡ್‌ನ‌ಲ್ಲಿ ಆಡುವುದು, ಎದುರಾಳಿ ವಿರುದ್ಧ ಕಳಪೆ ಸಾಧನೆ ಹೊಂದಿರುವುದು ಕೂಡ ಒತ್ತಡವನ್ನು ಹೆಚ್ಚಿಸುತ್ತದೆ. ವಿಶ್ವಕಪ್‌ನಲ್ಲಿ ಈ ವರೆಗೆ ನೆದರ್ಲೆಂಡ್‌ ವಿರುದ್ಧ ಭಾರತ ಗೆಲುವನ್ನೇ ಕಂಡಿಲ್ಲ ಎಂಬುದೊಂದು ಮೈನಸ್‌ ಪಾಯಿಂಟ್‌.

ವಿಶ್ವಕಪ್‌ ಕೂಟದಲ್ಲಿ ಭಾರತ-ನೆದರ್ಲೆಂಡ್‌ ಈ ವರೆಗೆ 6 ಸಲ ಎದುರಾಗಿವೆ. ಇದರಲ್ಲಿ ಐದನ್ನು ನೆದರ್ಲೆಂಡ್‌ ಗೆದ್ದರೆ, ಒಂದು ಪಂದ್ಯ ಡ್ರಾಗೊಂಡಿತ್ತು. ಹೀಗಾಗಿ ಮನ್‌ಪ್ರೀತ್‌ ಪಡೆ ಗುರುವಾರ ರಾತ್ರಿ ಜಯಭೇರಿ ಮೊಳಗಿಸಿದರೆ ಅದೊಂದು ಅಭೂತಪೂರ್ವ ಸಾಧನೆಯಾಗಲಿದೆ.

Advertisement

ಸ್ಟ್ರೈಕರ್‌ಗಳ ಆಟ ನಿರ್ಣಾಯಕ
ಪ್ರಸಕ್ತ ಕೂಟದಲ್ಲಿ ಭಾರತದ ಸ್ಟ್ರೈಕರ್‌ಗಳಾದ ಮನ್‌ದೀಪ್‌ ಸಿಂಗ್‌, ಸಿಮ್ರನ್‌ಜಿàತ್‌ ಸಿಂಗ್‌, ಲಲಿತ್‌ ಉಪಾಧ್ಯಾಯ ಮತ್ತು ಆಕಾಶ್‌ದೀಪ್‌ ಸಿಂಗ್‌ ಉತ್ತಮ ಪ್ರದರ್ಶನ ನೀಡಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲೂ ಇವರು ಇದೇ ಮಟ್ಟವನ್ನು ಕಾಯ್ದುಕೊಳ್ಳಬೇಕಾದುದು ಮುಖ್ಯ.

ಡಚ್ಚರ ಮಿಡ್‌ಫಿಲ್ಡ್‌ ಮತ್ತು ಸ್ಟ್ರೈಕ್‌ ಫೋರ್ಸ್‌ ಸಾಕಷ್ಟು ಅನುಭವಿಗಳಿಂದ ಕೂಡಿದೆ. ನಾಯಕ ಬಿಲ್ಲಿ ಬೆಕರ್‌, ಸೀವ್‌ ವಾನ್‌ ಆ್ಯಸ್‌, ಜೆರೋನ್‌ ಹರ್ಟ್ಸ್ಬರ್ಗರ್‌, ಮಿರ್ಕೊ ಪ್ರುಸರ್‌, ರಾಬರ್ಟ್‌ ಕೆಂಪರ್‌ಮ್ಯಾನ್‌, ಥಿಯರಿ ಬ್ರಿಂಕ್‌ಮ್ಯಾನ್‌ ಅವರೆಲ್ಲ ಇಲ್ಲಿನ ಹುರಿಯಾಳುಗಳು. ಲೀಗ್‌ನಲ್ಲಿ ಪಾಕಿಸ್ಥಾನ ಮತ್ತು ಮಲೇಶ್ಯ ವಿರುದ್ಧ ಜಯಿಸಿದ್ದ ಡಚ್ಚರು, ಜರ್ಮನಿ ವಿರುದ್ಧ ಎಡವಿದ್ದರು. ಗೋಲು ದಾಖಲೆಯಲ್ಲಿ ಭಾರತಕ್ಕಿಂತ ನೆದರ್ಲೆಂಡ್‌ ಮುಂದಿದೆ. ಭಾರತ 12 ಗೋಲು ಹೊಡೆದು 3 ಗೋಲು ಬಿಟ್ಟುಕೊಟ್ಟರೆ, ನೆದರ್ಲೆಂಡ್‌ 18 ಗೋಲು ಸಿಡಿಸಿ 5 ಗೋಲು ಬಿಟ್ಟುಕೊಟ್ಟಿದೆ.

ನಾವು ಭಾರೀ ಸಂಖ್ಯೆಯ ವೀಕ್ಷಕರೆದುರು ಆಡುವುದು ಇದೇ ಮೊದಲೇನಲ್ಲ. ಲೀಗ್‌ ಹಂತದಲ್ಲೂ ಇದರ ಅನುಭವ ಆಗಿತ್ತು. ನಾವು ಯಾವತ್ತೂ ನಮ್ಮ ಶೈಲಿಯಲ್ಲಿ ಆಡುತ್ತ ಹೋಗುತ್ತೇವೆ. ಭಾರತ ಏನು ಮಾಡೀತು ಎಂಬ ಬಗ್ಗೆ ಚಿಂತಿಸುವುದಿಲ್ಲ.
ಮ್ಯಾಕ್ಸ್‌ ಕಾಲ್ಡಾಸ್‌, ನೆದರ್ಲೆಂಡ್‌ ಕೋಚ್‌

ನೆದರ್ಲೆಂಡ್‌ ವಿರುದ್ಧದ ಹಿಂದಿನ ಫ‌ಲಿತಾಂಶ ಹೇಗೇ ಇರಲಿ, ನಮ್ಮ ಆಟದಲ್ಲಿ ಈಗ ಸಾಕಷ್ಟು ಸುಧಾರಣೆ ಆಗಿದೆ. ನೆದರ್ಲೆಂಡ್‌ ವಿರುದ್ಧ ಗೆದ್ದಿದ್ದೇವೆ, ಡ್ರಾ ಸಾಧಿಸಿದ್ದೇವೆ. ಆದರೆ ಇದೊಂದು ಕಠಿನ ಸವಾಲು. ಶ್ರೇಷ್ಠ ಪ್ರದರ್ಶನ ನೀಡುವ ತಂಡ ಗೆದ್ದು ಬರಲಿದೆ.
ಮನ್‌ಪ್ರೀತ್‌ ಸಿಂಗ್‌, ಭಾರತ ತಂಡದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next