Advertisement
ಚೈತ್ರ ಶುಕ್ಲ ಪೌರ್ಣಿಮೆಯಂದು ನಡೆಯುವ ಕರಗಕ್ಕೆ 250ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಕರಗ ಹಾಗೂ ಶ್ರೀ ಧರ್ಮರಾಯ ಸ್ವಾಮಿ ಮಹಾರಥೋತ್ಸವನ್ನು ನೋಡಲು ನಗರದ ಸುತ್ತಲಿನ ಭಾಗಗಳು, ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಲಿದ್ದು, ಈ ಬಾರಿ ಸುಮಾರು 3 ಲಕ್ಷಕ್ಕೂ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆಯಿದೆ.
Related Articles
Advertisement
ಕರಗ ಶಕೊತ್ಸವ ಸಾಗುವ ವೇಳೆ ದೂರದಿಂದಲೇ ವಂದಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡುವಂತೆ, ಕರಗ ಸಂಚರಿಸುವ ರಸ್ತೆಗಳು ಹಾಗೂ ಜನರು ಮನೆಗಳ ಮುಂಭಾಗವನ್ನು ಸ್ವತ್ಛವಾಗಿಡಬೇಕು ಎಂದು ಕೋರಲಾಗಿದೆ. ಈ ನಡುವೆ ಕರಗ ಸಾಗುವ ಮಾರ್ಗಗಳನ್ನು ಸುಂದರವಾಗಿಸಿರುವ ಬಿಬಿಎಂಪಿ, ಭಕ್ತರ ಅನುಕೂಲಕ್ಕಾಗಿ 15 ಕಡೆ ಇ- ಶೌಚಾಲಯ ವ್ಯವಸ್ಥೆ ಕಲ್ಪಿಸುತ್ತಿದೆ.
ಕರಗ ಉತ್ಸವ ನೇರಪ್ರಸಾರ: ಉತ್ಸವಕ್ಕಾಗಿಯೇ “ಬೆಂಗಳೂರು ಕರಗ’ (bengalurukaraga.com) ಎಂಬ ವೆಬ್‌ಸೈಟ್ ಅಭಿವೃದ್ಧಿಪಡಿಸಲಾಗಿದೆ. ವೆಬ್‌ಸೈಟ್‌ನಲ್ಲಿ ಬೆಂಗಳೂರು ಕರಗದ ಮಹತ್ವ, ಇತಿಹಾಸ, ಬೆಳೆದುಬಂದ ಹಾದಿ, ಆಹ್ವಾನ ಪತ್ರಿಕೆ, ವಿಡಿಯೋಗಳು ಇರಲಿದ್ದು, ಶನಿವಾರ ರಾತ್ರಿ ನಡೆಯುವ ಕರಗ ಉತ್ಸವದ ನೇರ ಪ್ರಸಾರವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು.
ಕರಗ ಸಾಗುವ ಹಾದಿ: ತಿಗಳರಪೇಟೆಯ ಧರ್ಮರಾಯ ಸ್ವಾಮಿ ದೇವಾಲಯದಿಂದ 12 ಗಂಟೆಗೆ ಹೊರಡುವ ಹೂವಿನ ಕರಗ ಹಲಸೂರು ಪೇಟೆಯ ಆಂಜನೇಯ ಸ್ವಾಮಿ, ಶ್ರೀರಾಮ ದೇವಾಲಯ ಮತ್ತು ಪ್ರಸನ್ನ ಗಂಗಾಧರೇಶ್ವರ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಲಿದೆ.
ನಂತರ ನಗರ್ತಪೇಟೆ ವೇಣುಗೋಪಾಲ ಸ್ವಾಮಿ ದೇವಾಲಯದಿಂದ ಸಿದ್ದಣ್ಣ ಗಲ್ಲಿ, ಭೈರೇದೇವರ ದೇವಾಲಯ, ಕಬ್ಬನ್ ಪೇಟೆ 14ನೇ ಅಡ್ಡರಸ್ತೆಯ ಶ್ರೀರಾಮ ಸೇವಾ ಮಂದಿರ, 15ನೇ ಅಡ್ಡರಸ್ತೆ ಮತ್ತು ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸ್ವೀಕರಿಸಿ, ಮಕ್ಕಳ ಬಸವಣ್ಣನ ಗುಡಿ, ಗಾಣಿಗರ ಪೇಟೆಯ ಚನ್ನರಾಯಸ್ವಾಮಿ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನದಿಂದ ಅವೆನ್ಯೂ ರಸ್ತೆಯ ಈಶ್ವರ ದೇವಾಲಯಕ್ಕೆ ಆಗಮಿಸಲಿದೆ.
ಅಲ್ಲಿಂದ ದೊಡ್ಡಪೇಟೆ ಮೂಲಕ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿ, ಕೆ.ಆರ್.ಮಾರುಕಟ್ಟೆ ಸಮೀಪದ ಉದ್ಭವ ಗಣಪತಿ ದೇವಾಲಯ, ಪೊಲೀಸ್ ರಸ್ತೆ ಮೂಲಕ ಮುರಹರಿ ಸ್ವಾಮಿ ಮಠ, ಬೀರೇದೇವರ ಗುಡಿ, ಅರಳೆಪೇಟೆ ಮುಖ್ಯರಸ್ತೆ, ಮಸ್ತಾನ್ ಸಾಹೇಬರ ದರ್ಗಾದಿಂದ ಬಳೇಪೇಟೆ, ಬಳೇಗರಡಿಗೆ ಬರಲಿದೆ. ಬಳಿಕ ಅಣ್ಣಮ್ಮ ದೇವಾಲಯ, ಕಿಲಾರಿ ರಸ್ತೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯ, ಯಲಹಂಕ ಗೇಟ್ ಆಂಜನೇಯಸ್ವಾಮಿ ದೇವಸ್ಥಾನ, ತುಪ್ಪದಾಂಜನೇಯಸ್ವಾಮಿ ಗುಡಿ, ಶ್ರೀ ರಂಗನಾಥಸ್ವಾಮಿ, ಚೌಡೇಶ್ವರಿ ಗುಡಿ, ಸ್ವೀಕರಿಸಲಿದೆ.
ನಂತರ ಕುಂಬಾರಪೇಟೆ ಮುಖ್ಯ ರಸ್ತೆ ಪ್ರವೇಶಿಸಿ, ಗೊಲ್ಲರಪೇಟೆ, ತಿಗಳರಪೇಟೆ ಕುಲಬಾಂಧವರ ಮನೆಗಳಲ್ಲಿ ಪೂಜೆ ಸ್ವೀಕರಿಸಿ, ಹಾಲುಬೀದಿ, ಕಬ್ಬನ್‌ಪೇಟೆ ಮೂಲಕ ಸುಣಕಲ್ ಪೇಟೆ ಮಾರ್ಗವಾಗಿ ಬಂದು ಪುರೋಹಿತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ ನರಸಿಂಹ ಜೋಯಿಸ್ ಗಲ್ಲಿ ಮೂಲಕ ಹಾದು ಬೆಳಗಿನ ಜಾವದ ವೇಳೆಗೆ ಮರಳಿ ಧರ್ಮರಾಯಸ್ವಾಮಿ ದೇವಸ್ಥಾನ ಬರಲಿದೆ.
ಕರಗ ಹೊರುವುದು ಆತನ ಹೆಬ್ಬಯಕೆ: “ಮೊದಲಿನಿಂದಲೂ ಕರಗ ಉತ್ಸವಗಳಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದ ಮನು, ಕರಗ ಹೊರಬೇಕು ಎಂಬ ಹೆಬ್ಬಯಕೆಯನ್ನು ಹೊಂದಿದ್ದ. ಅಭಿಮನ್ಯು ಮಾರ್ಗದರ್ಶನ ಹಾಗೂ ತಾಯಿ ದ್ರೌಪದಮ್ಮ ಕೃಪೆಯಿಂದ ಅದು ಸಾಧ್ಯವಾಗಿದೆ,’ ಎಂದು ಮನು ತಂದೆ ಎನ್.ನಾಗರಾಜ್ “ಉದಯವಾಣಿ’ಗೆ ತಿಳಿಸಿದ್ದಾರೆ.
ತಿಗರಳಪೇಟೆ ಎನ್.ನಾಗರಾಜ್-ಲಕ್ಷ್ಮೀ ದಂಪತಿಯ ದ್ವಿತೀಯ ಪುತ್ರ ಎನ್.ಮನು, ಮೊದಲ ಬಾರಿ ಕರಗ ಹೊರಲಿದ್ದಾರೆ. ಎಸ್ಸೆಸ್ಸೆಲ್ಸಿ ಓದಿರುವ ಮನು, ವೃತ್ತಿಯಲ್ಲಿ ಚಾಲಕ. ಈ ಹಿಂದೆ ಒಂಬತ್ತು ವರ್ಷ ಕರಗ ಹೊತ್ತಿದ್ದ ಅಭಿಮನ್ಯು ಅವರಿಂದ ಕರಗ ಹೊರುವ ಕುರಿತಂತೆ ಮನು ವಿಶೇಷ ತರಬೇತಿ ಪಡೆದಿದ್ದಾರೆ.