Advertisement

ಭಾರತ-ಶ್ರೀಲಂಕಾ ಈಡನ್‌ ಟೆಸ್ಟ್‌ ಇಂದಿನಿಂದ

06:20 AM Nov 16, 2017 | Team Udayavani |

ಕೋಲ್ಕತಾ: ಭಾರತ ಮತ್ತು ಶ್ರೀಲಂಕಾನಡುವಣ ಮೂರು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಗುರುವಾರದಿಂದ ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಶ್ರೀಲಂಕಾ ವಿರುದ್ಧದ ಗೆಲುವಿನ ನಾಗಾಲೋಟ ಮುಂದುವರಿಸಲು ಭಾರತ ಎದುರು ನೋಡುತ್ತಿದ್ದರೆ ಭಾರತದಲ್ಲಿ ತಂಡದ ಹೀನಾಯ ನಿರ್ವಹಣೆಯನ್ನು ಮರೆತು ಚೊಚ್ಚಲ ಟೆಸ್ಟ್‌ ಗೆಲುವಿನ ಕನಸಿನೊಂದಿಗೆ ಶ್ರೀಲಂಕಾ ಭಾರತ ವಿರುದ್ದ ಹೋರಾಡಲು ಸಿದ್ಧವಾಗಿದೆ.

Advertisement

ಬುಧವಾರ ಬೆಳಗ್ಗೆ ಸುರಿದ ಮಳೆಯಿಂದಾಗಿ ಭಾರತೀಯ ತಂಡದ ಬೆಳಗ್ಗಿನ ಅಭ್ಯಾಸವನ್ನು ರದ್ದುಗೊಳಿಸಲಾಗಿತ್ತು. ಹೀಗಾಗಿ ಕೋಲ್ಕತಾ ಟೆಸ್ಟ್‌ಗೆ ಮಳೆ ತೊಂದರೆ ನೀಡುವ ಸಾಧ್ಯತೆಯಿದೆ.

ಭಾರತವು ಕ್ರಿಕೆಟ್‌ನ ಮೂರು ಮಾದರಿಯಲ್ಲಿ ಶ್ರೀಲಂಕಾವನ್ನು 9-0 ವೈಟ್‌ವಾಶ್‌ ಮಾಡಿತ್ತು. ಆದರೆ ಶ್ರೀಲಂಕಾ ಆಬಳಿಕ ಯುಎಇಯಲ್ಲಿ ಪಾಕಿಸ್ಥಾನ ವಿರುದ್ಧ ಆಶ್ಚರ್ಯಕರ ರೀತಿಯಲ್ಲಿ 2-0 ಅಂತರದಿಂದ ಗೆಲುವು ಸಾಧಿಸಿತ್ತು. ಹೀಗಾಗಿ ಈ ಬಾರಿ ಭಾರತ ವಿರುದ್ಧ ಗೆಲುವಿಗಾಗಿ ತೀವ್ರ ಹೋರಾಟ ನೀಡುವ ಸಾಧ್ಯತೆಯಿದೆ.

ಟೀಮ್‌ ಇಂಡಿಯಾ ಈ ಸರಣಿಯನ್ನು ಗಂಭೀರವಾಗಿ ಪರಿಗಣಿಸಿದೆ. ಮುಂಬರುವ ಎರಡು ತಿಂಗಳ ಸುದೀರ್ಘ‌ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಭಾರತ ಈ ಸರಣಿಯನ್ನು ಉತ್ತಮ ರೀತಿಯಲ್ಲಿ ಉಪಯೊಗಿಸಿಕೊಳ್ಳಲಿದೆ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಭಾರತ ತಂಡವು ಮೂರು ಟೆಸ್ಟ್‌, ಆರು ಏಕದಿನ ಮತ್ತು ಮೂರು ಟ್ವೆಂಟಿ20 ಪಂದ್ಯಗಳನ್ನಾಡಲಿದೆ. ಸರಣಿಯ ಮೊದಲ ಟೆಸ್ಟ್‌ ಜ. 5ರಿಂದ ಕೇಪ್‌ಟೌನ್‌ನಲ್ಲಿ ಆರಂಭವಾಗಲಿದೆ.

ಜುಲೈ-ಆಗಸ್ಟ್‌ನಲ್ಲಿ ಟೆಸ್ಟ್‌ ಸರಣಿ ಆಡಿದ ಬಳಿಕ ಭಾರತ ತಂಡವು 13 ಏಕದಿನ ಮತ್ತು ಆರು ಟ್ವೆಂಟಿ20 ಪಂದ್ಯಗಳನ್ನಾಡಿದೆ. ಆದರೆ ಭಾರತೀಯ ಆಟಗಾರರಿಗೆ ಟೆಸ್ಟ್‌ ಆಟಕ್ಕೆ ಹೊಂದಕೊಳ್ಳಲು ಯಾವುದೇ ಕಷ್ಟವಾಗಲಾರದು. ಯಾಕೆಂದರೆ ತಂಡದ ಹಲವು ಆಟಗಾರರು ಈಗಾಗಲೇ ತಮ್ಮ ತಂಡದ ಪರ ರಣಜಿ ಪಂದ್ಯಗಳಲ್ಲಿ ಆಡಿದ್ದಾರೆ.

Advertisement

ಟೆಸ್ಟ್‌ ಗೆದ್ದಿಲ್ಲ
ಕಳೆದ 35 ವರ್ಷಗಳಲ್ಲಿ ಶ್ರೀಲಂಕಾ ತಂಡವು ಭಾರತದಲ್ಲಿ 16 ಬಾರಿ ಆಡಿದರೂ ಒಂದೇ ಒಂದು ಟೆಸ್ಟ್‌ ಜಯಿಸಿಲ್ಲ. 1982ರಲ್ಲಿ ಶ್ರೀಲಂಕಾವು ಮೊದಲ ಬಾರಿ ಭಾರತದಲ್ಲಿ ಟೆಸ್ಟ್‌ ಆಡಿತ್ತು. ಈ ಬಾರಿ ಅನನುಭವಿ ತಂಡದೊಂದಿಗೆ ಶ್ರೀಲಂಕಾ ತಂಡ ಭಾರತಕ್ಕೆ ಆಗಮಿಸಿದೆ. ಹಾಗಾಗಿ ನಾಯಕ ದಿನೇಶ್‌ ಚಂಡಿಮಾಲ್‌ ಗೆಲುವಿಗಾಗಿ ಕಠಿನ ಪ್ರಯತ್ನ ನಡೆಸಬೇಕಾಗಿದೆ.

ಶ್ರೀಲಂಕಾ ತಂಡವು ಏಂಜೆಲೊ ಮ್ಯಾಥ್ಯೂಸ್‌ ಮತ್ತು ಎಡಗೈ ಸ್ಪಿನ್ನರ್‌ ರಂಗನ ಹೆರಾತ್‌ ಅವರನ್ನು ಅವಲಂಭಿಸಿದೆ. ಅವರಿಬ್ಬರು ತಂಡದ ಹಿರಿಯ ಆಟಗಾರರಾಗಿದ್ದು 2009ರಲ್ಲಿ ಶ್ರೀಲಂಕಾ ತಂಡದ ಭಾರತ ಪ್ರವಾಸದ ವೇಳೆ ತಂಡದಲ್ಲಿದ್ದರು.

ಭುವನೇಶ್ವರ್‌ ಸೇರ್ಪಡೆ ನಿರೀಕ್ಷೆ
ಈಡನ್‌ನ ಪಿಚ್‌ ಹುಲ್ಲಿನಿಂದ ಆವೃತವಾಗಿರುವ ಕಾರಣ ಭುವನೇಶ್ವರ್‌ ಕುಮಾರ್‌ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ತ್ರಿ ಪ್ಲಸ್‌ ಟು ಬೌಲಿಂಗ್‌ ದಾಳಿಯೊಂದಿಗೆ ಭಾರತ ಆಡುವ ಸಾಧ್ಯತೆಯಿದೆ. ಈ ವರ್ಷದ ಮಾರ್ಚ್‌ನಲ್ಲಿ ಧರ್ಮಶಾಲಾದಲ್ಲಿ ಆಸ್ಟ್ರೇಲಿಯ ವಿರುದ್ಧ ಭುವನೇಶ್ವರ್‌ ಈ ಹಿಂದೆ ಟೆಸ್ಟ್‌ ಆಡಿದ್ದರು. ಭಾರತೀಯ ಅಭ್ಯಾಸದ ವೇಳೆ ಅವರು ಉತ್ತಮ ಲಯದಲ್ಲಿ ಇದ್ದಂತೆ ಕಂಡುಬಂದಿದ್ದರು.

ಈಡನ್‌ನಲ್ಲಿ ಅವರ ಬೌಲಿಂಗ್‌ ಉತ್ತಮ ಮಟ್ಟದಲ್ಲಿದೆ. 2016ರ ಸೆಪ್ಟಂಬರ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ನಡೆದ ಟೆಸ್ಟ್‌ನಲ್ಲಿ ಭುವನೇಶ್ವರ್‌ 5 ವಿಕೆಟ್‌ ಹಾರಿಸಿದ್ದರು. ಅವರಿಗೆ ಉಮೇಶ್‌ ಯಾದವ್‌ ಮತ್ತು ಮೊಹಮ್ಮದ್‌ ಶಮಿ ನೆರವಾಗುವ ಸಾಧ್ಯತೆಯಿದೆ. ಸ್ಪಿನ್ನರ್‌ಗಳ ಪೈಕಿ ಯಾರನ್ನು ಆಯ್ಕೆ ಮಾಡುವುದರ ಕುರಿತು ನಿರ್ಧಾರವಾಗಿಲ್ಲ. ಚೈನಾಮನ್‌ ಕುಲದೀಪ್‌ ಯಾದವ್‌ ನೆಟ್‌ನಲ್ಲಿ ಬೌಲಿಂಗ್‌ ಜತೆ ಬ್ಯಾಟಿಂಗ್‌ ಅಭ್ಯಾಸ ಕೂಡ ನಡೆಸಿದ್ದಾರೆ. ಅವರು ಆಯ್ಕೆಯಾದರೆ ರವೀಂದ್ರ ಜಡೇಜ ಅವರನ್ನು ಕೈಬಿಡಬೇಕಾಗುತ್ತದೆ. ಪಲ್ಲೆಕಿಲೆಯಲ್ಲಿ ನಡೆದ ಟೆಸ್ಟ್‌ನಲ್ಲಿ ಕುಲದೀಪ್‌ ಅವರು ಜಡೇಜ ಅವರಿಗಾಗಿ ತನ್ನ ಸ್ಥಾನ ತ್ಯಜಿಸಿದ್ದರು.

ತಂಡಕ್ಕೆ ಮರಳಿದ ಮುರಳಿ ವಿಜಯ್‌
ಕೈಯ ಗಾಯದಿಂದ ಚೇತರಿಸಿಕೊಂಡಿರುವ ಆರಂಭಿಕ ಮುರಳಿ ವಿಜಯ್‌ ತಂಡಕ್ಕೆ ಮರಳಿದ್ದಾರೆ. ಗಾಯದಿಂದಾಗಿ ಅವರು ಶ್ರೀಲಂಕಾ ಪ್ರವಾಸದಿಂದ ದೂರ ಉಳಿದಿದ್ದರು. ಕಟಕ್‌ನಲ್ಲಿ ಒಡಿಶಾ ವಿರುದ್ಧ 140 ರನ್‌ ಹೊಡೆದಿರುವ ಅವರು ಉತ್ತಮ ಆಟ ಪ್ರದರ್ಶಿಸುವ ವಿಶ್ವಾಸ ಹೊಂದಿದ್ದಾರೆ. ಆದರೆ ಅಭ್ಯಾಸದ ವೇಳೆ ಅವರು ಹೆಚ್ಚು ಹೊತ್ತು ಬ್ಯಾಟಿಂಗ್‌ ನಡೆಸಿಲ್ಲ. ಕೊಹ್ಲಿ ಅವರು ಶಿಖರ್‌ ಧವನ್‌ ಮತ್ತು ಕೆಎಲ್‌ ರಾಹುಲ್‌ ಅವರನ್ನು ಆರಂಭಿಕ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆಯಿದೆ.

ಶ್ರೀಲಂಕಾದಲ್ಲಿ ಎರಡು ಶತಕ ಸಿಡಿಸಿರುವ ಚೇತೇಶ್ವರ ಪೂಜಾರ ಭಾರತೀಯ ಬ್ಯಾಟಿಂಗನ್ನು ಸದೃಢಗೊಳಿಸಲಿದ್ದಾರೆ. ಅವರು ತಂಡವನ್ನು ಯಾವುದೇ ಸ್ಥಿತಿಯಲ್ಲೂ ಆಧರಿಸಲಿದ್ದಾರೆ. ನಾಯಕ ವಿರಾಟ್‌ ಕೊಹ್ಲಿ ಕೂಡ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಗಾಲೆಯಲ್ಲಿ ನಡೆದ ಟೆಸ್ಟ್‌ನಲ್ಲಿ ಅವರು ಶತಕ ಸಿಡಿಸಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಉತ್ತಮ ಫಾರ್ಮ್ನಲ್ಲಿದ್ದಾರೆ. ಅವರು ಶ್ರೀಲಂಕಾದಲ್ಲಿ ಶತಕ ಮತ್ತು ಅರ್ಧಶತಕ ಹೊಡೆದಿದ್ದಾರೆ. ಹಾರ್ದಿಕ್‌ ಪಾಂಡ್ಯ ಅವರ ಅನುಪಸ್ಥಿತಿಯಲ್ಲಿ ಆರ್‌. ಅಶ್ವಿ‌ನ್‌ ಬ್ಯಾಟಿಂಗ್‌ ಜವಾಬ್ದಾರಿಯನ್ನು ಹೊರಲಿದ್ದಾರೆ.

ಗೆಲುವು ಸುಲಭವಲ್ಲ
ಟೆಸ್ಟ್‌ನಲ್ಲಿ ಗೆಲುವು ದಾಖಲಿಸುವುದು ಚಂಡಿಮಾಲ್‌ ಅವರ ಕನಸಾಗಿರಬಹುದು. ಆದರೆ ಅದು ಅಷ್ಟೊಂದು ಸುಲಭವಲ್ಲ. ಆಟಗಾರರೆಲ್ಲರೂ ಪರಿಣಾಮಕಾರಿಯಾಗಿ ಆಡಿದರೆ ಗೆಲುವಿಗಾಗಿ ತಂಡ ಪ್ರಯತ್ನಿಸಬಹುದು. ಭರವಸೆಯ ಆಟಗಾರ ಸದೀರ ಸಮರವಿಕ್ರಮ ಆರಂಭಿಕರಾಗಿ ಆಡುವ ಸಾಧ್ಯತೆಯಿದೆ.  ಪಾಕಿಸ್ಥಾನ ವಿರುದ್ಧ ತನ್ನ ಜೀವನಶ್ರೇಷ್ಠ 196 ರನ್‌ ಗಳಿಸಿರುವ ದಿಮುತ್‌ ಕರುಣರತ್ನೆ ತನ್ನ ಉತ್ತಮ ಆಟವನ್ನು ಭಾರತ ವಿರುದ್ಧವೂ ಮುಂದುವರಿಸುವ ಸಾಧ್ಯತೆಯಿದೆ. ಏಂಜೆಲೊ ಮ್ಯಾಥ್ಯೂಸ್‌ ತಂಡದ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ.

ನ. 18ರ ವರೆಗೆ ಮಳೆ
ವಾಯುಭಾರ ಕುಸಿತದಿಂದಾಗಿ ನ. 18ರ ವರೆಗೆ ಮಳೆ ಬರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಪಂದ್ಯ ಐದು ದಿನ ಪೂರ್ತಿ ನಡೆಯುವ ಸಾಧ್ಯತೆಯಿಲ್ಲ.

ಉಭಯ ತಂಡಗಳು
ಭಾರತ
: ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಶಿಖರ್‌ ಧವನ್‌, ಕೆಎಲ್‌ ರಾಹುಲ್‌, ಮುರಳಿ ವಿಜಯ್‌, ಚೇತೇಶ್ವರ್‌ ಪೂಜಾರ, ರೋಹಿತ್‌ ಶರ್ಮ, ವೃದ್ಧಿಮಾನ್‌ ಸಾಹಾ, ರವಿಚಂದ್ರನ್‌ ಅಶ್ವಿ‌ನ್‌, ಕುಲದೀಪ್‌ ಯಾದವ್‌, ರವೀಂದ್ರ ಜಡೇಜ, ಭುವನೇಶ್ವರ್‌ ಕುಮಾರ್‌, ಉಮೇಶ್‌ ಯಾದವ್‌, ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮ.

ಶ್ರೀಲಂಕಾ: ದಿನೇಶ್‌ ಚಂಡಿಮಾಲ್‌ (ನಾಯಕ), ಲಹಿರು ತಿರಿಮನ್ನೆ, ದಿಮುತ್‌ ಕರುಣರತ್ನೆ, ಸದೀರ ಸಮರವಿಕ್ರಮ, ನಿರೋಷನ್‌ ಡಿಕ್ವೆಲ್ಲ, ದಿಲುÅವಾನ್‌ ಪೆರೆರ, ರಂಗನ ಹೆರಾತ್‌, ಸುರಂಗ ಲಕ್ಮಲ್‌, ಲಹಿರು ಗಾಮಗೆ. ಧನಂಜಯ ಡಿಸಿಲ್ವ, ಏಂಜೆಲೊ ಮ್ಯಾಥ್ಯೂಸ್‌, ಲಕ್ಷಣ್‌ ಸಂಡಕನ್‌, ವಿಶ್ವ ಫೆರ್ನಾಂಡೊ, ದಾಸುನ್‌ ಶಣಕ, ರೋಶೆನ್‌ ಸಿಲ್ವ.

ಪಂದ್ಯ ಆರಂಭ: ಬೆಳಗ್ಗೆ 9 ಗಂಟೆ
ನೇರ ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next