“ಒಂದು ಮೊಟ್ಟೆಯ ಕಥೆ’ ಮೂಲಕ ಸೈಲೆಂಟ್ ಆಗಿ ಬಂದ ರಾಜ್ ಬಿ ಶೆಟ್ಟಿ ಈಗ ಸಖತ್ ವೈಲೆಂಟ್ ಆಗಿದ್ದಾರೆ. ಈಗಾಗಲೇ “ಗರುಡ ಗಮನ ವೃಷಭ ವಾಹನ’ ಮೂಲಕ ಕೈಗೆ ರಕ್ತಮೆತ್ತಿಕೊಂಡಿದ್ದ ರಾಜ್ ಶೆಟ್ಟಿ ಈ ಬಾರಿ ಇಡೀ ಪೂರ್ತಿ ದೇಹಕ್ಕೆ ರಕ್ತಾಭಿಷೇಕ ಮಾಡಿಕೊಂಡಂತಿದೆ. ಅವರ ಈ ರಕ್ತತರ್ಪಣಕ್ಕೆ ಕಾರಣವಾಗಿರೋದು “ಟೋಬಿ’. ನಿಮಗೆ ಗೊತ್ತಿರುವಂತೆ ರಾಜ್ ಬಿ ಶೆಟ್ಟಿ “ಟೋಬಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಚಿತ್ರ ಇಂದು ಬಿಡುಗಡೆ ಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಫಸ್ಟ್‌ಲುಕ್, ಟ್ರೇಲರ್ ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿದೆ.
ನೈಜ ಘಟನೆ ಸುತ್ತ ಟೋಬಿ: ಬರಹಗಾರ ಟಿ.ಕೆ.ದಯಾನಂದ್ ಅವರ ಕಥೆ ಈಗ “ಟೋಬಿ’ ಆಗಿದೆ. ಇದು ಕಾರವಾರದಲ್ಲಿ ಕಂಡ ಒಬ್ಬ ವಿಲಕ್ಷಣ ವ್ಯಕ್ತಿತ್ವದ ವ್ಯಕ್ತಿಯ ಕಥೆಯಂತೆ. ಅದನ್ನು ಈಗ ಸಿನಿಮಾ ಮಾಡಲಾಗಿದೆ. ರಾಜ್ ಬಿ ಶೆಟ್ಟಿ ಅವರಿಗೆ ಈ ಸಿನಿಮಾದ ಕಥೆ ತುಂಬಾ ಹೊಸದಾಗಿದೆಯಂತೆ. “ನನಗೆ ಈ ಸಿನಿಮಾದ ಕಥೆ ತುಂಬಾ ಹೊಸದೆನಿಸಿತು. ಮುಖ್ಯವಾಗಿ ನನ್ನ ಪಾತ್ರವೇ ವಿಭಿನ್ನವಾಗಿದೆ. ಅದರ ಜೊತೆಗೆ ನಿರೂಪಣೆ ಕೂಡಾ. ನಾವು ಕಂಫರ್ಟ್ ಝೋನ್‌ನಿಂದ ಆಚೆ ಬಂದು ಮಾಡಿರುವ ಸಿನಿಮಾವಿದು. ಇಲ್ಲಿ ಸಿಟ್ಟು, ಕ್ರೋಧ, ಆಕ್ರೋಶ ಎಲ್ಲವೂ ಇದೆ. ಅವೆಲ್ಲದಕ್ಕೂ ಒಂದು ಕಾರಣವಿದೆ. ಅದನ್ನು ಸಿನಿಮಾದಲ್ಲೇ ನೋಡಬೇಕು’ ಎನ್ನುವುದು ರಾಜ್ ಬಿ ಶೆಟ್ಟಿ ಅವರ ಮಾತು.
“ನನಗೆ ಗೊತ್ತಿಲ್ಲದ ವಿಚಾರಗಳನ್ನು ಕಲಿತು ಈ ಸಿನಿಮಾದಲ್ಲಿ ಹೇಳಿದ್ದೇನೆ’ ಎನ್ನಲು ರಾಜ್ ಶೆಟ್ಟಿ ಮರೆಯುವುದಿಲ್ಲ. “ಟೋಬಿ’ ಚಿತ್ರ ಮೇಲ್ನೋಟಕ್ಕೆ ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾದಂತೆ ಕಾಣುತ್ತಿದೆ. ಆದರೆ, ರಾಜ್ ಬಿ ಶೆಟ್ಟಿ ಹೇಳುವಂತೆ ಇದು ಔಟ್ ಅಂಡ್ ಔಟ್ ಫ್ಯಾಮಿಲಿ ಡ್ರಾಮಾ. ಚಿತ್ರದಲ್ಲಿ ಫ್ಯಾಮಿಲಿ ಎಮೋಶನ್ಸ್‌ಗೆ ಹೆಚ್ಚಿನ ಮಹತ್ವ ನೀಡಲಾಗಿದೆಯಂತೆ. “ಇದು ಕೌಟುಂಬಿಕ ಸಿನಿಮಾ. ಇದರಲ್ಲಿ ಫ್ಯಾಮಿಲಿ ಎಮೋಶನ್ಸ್‌ಗೆ ತುಂಬಾ ಸ್ಕೋಪ್ ಇದೆ. ಒಂದು ಕುಟುಂಬದ ನಡುವಿನ ಸಂಬಂಧ, ಅವರ ನಡುವಿನ ಬಂಧ ಯಾವ ರೀತಿಯದ್ದು ಎಂಬ ವಿಷಯವನ್ನು ನಾವು ಟೋಬಿಯ ಮೂಲಕ ಜನರಿಗೆ ಹೇಳಲಿದ್ದೇವೆ’ ಎನ್ನುವ ರಾಜ್ ಶೆಟ್ಟಿ,
ಸಿನಿಮಾದ ಪೋಸ್ಟರ್ ಬಗೆಗಿನ ಕುತೂಹಲದ ಬಗ್ಗೆಯೂ ಹೇಳುತ್ತಾರೆ. “ಪೋಸ್ಟರ್ ಬಿಟ್ಟ ನಂತರ ಸಿನಿಮಾ ಪ್ರೇಮಿಗಳಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿವೆ. ಮೂಗುತಿ, ಮುಖದ ಮೇಲಿನ ಇಂಟೆನ್ಸ್, ಬ್ಯಾಕ್‌ಡ್ರಾಪ್… ಹೀಗೆ ಅನೇಕ ಅಂಶಗಳ ಬಗ್ಗೆ ಪ್ರಶ್ನೆ ಎದ್ದಿದೆ. ನಾನು ಹೋದಲ್ಲೆಲ್ಲಾ ಈ ಪ್ರಶ್ನೆಗಳನ್ನು ಜನ ಕೇಳುತ್ತಿದ್ದಾರೆ. ಈ ಮೂಲಕ ನನ್ನ ಉದ್ದೇಶ ಸಫಲವಾಗಿದೆ’ ಎಂದು ಖುಷಿಯಿಂದ ಹೇಳುತ್ತಾರೆ.
ರವಿಪ್ರಕಾಶ್ ರೈ