“ಒಂದು ಮೊಟ್ಟೆಯ ಕಥೆ’ ಮೂಲಕ ಸೈಲೆಂಟ್ ಆಗಿ ಬಂದ ರಾಜ್ ಬಿ ಶೆಟ್ಟಿ ಈಗ ಸಖತ್ ವೈಲೆಂಟ್ ಆಗಿದ್ದಾರೆ. ಈಗಾಗಲೇ “ಗರುಡ ಗಮನ ವೃಷಭ ವಾಹನ’ ಮೂಲಕ ಕೈಗೆ ರಕ್ತಮೆತ್ತಿಕೊಂಡಿದ್ದ ರಾಜ್ ಶೆಟ್ಟಿ ಈ ಬಾರಿ ಇಡೀ ಪೂರ್ತಿ ದೇಹಕ್ಕೆ ರಕ್ತಾಭಿಷೇಕ ಮಾಡಿಕೊಂಡಂತಿದೆ. ಅವರ ಈ ರಕ್ತತರ್ಪಣಕ್ಕೆ ಕಾರಣವಾಗಿರೋದು “ಟೋಬಿ’.
ನಿಮಗೆ ಗೊತ್ತಿರುವಂತೆ ರಾಜ್ ಬಿ ಶೆಟ್ಟಿ “ಟೋಬಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಆಗಸ್ಟ್ 25ರಂದು ತೆರೆ ಕಾಣುತ್ತಿದೆ.
ಮೊದಲ ಹಂತವಾಗಿ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದ್ದು, ಸಿನಿಮಾದೊಳಗಿನ ಮಾಸ್ ಎಲಿಮೆಂಟ್ಸ್ ಅನ್ನು ಎತ್ತಿಹಿಡಿದಿದೆ. ರೆಡ್ ಥೀಮ್‌ನೊಂದಿಗೆ ಮೂಡಿಬಂದಿರುವ ಈ ಫಸ್ಟ್‌ಲುಕ್‌ನಲ್ಲಿ ರಾಜ್ ಬಿ ಶೆಟ್ಟಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಮುಖದ ತುಂಬಾ ಕುರುಚಲು ಗಡ್ಡ, ಮೂಗಿನಲ್ಲೊಂದು ದೊಡ್ಡ ಮೂಗುತಿ, ತಲೆ, ಮೂಗಿನ ಮೇಲೆ ರಕ್ತಸೋರುತ್ತಿರುವ ಗಾಯ … ಹೀಗೆ ಔಟ್ ಅಂಡ್ ಔಟ್ ಮಾಸ್ ಫೀಲ್ ಕೊಡುವ “ಟೋಬಿ’ ಚಿತ್ರದ ಫಸ್ಟ್‌ಲುಕ್ ವೈರಲ್ ಆಗಿದೆ.
ಬರಹಗಾರ ಟಿ.ಕೆ.ದಯಾನಂದ್ ಅವರ ಕಥೆ ಈಗ “ಟೋಬಿ’ ಆಗಿದೆ. ಇದು ಕಾರವಾರದಲ್ಲಿ ಕಂಡ ಒಬ್ಬ ವಿಲಕ್ಷಣ ವ್ಯಕ್ತಿತ್ವದ ವ್ಯಕ್ತಿಯ ಕಥೆಯಂತೆ. ಅದನ್ನು ಈಗ ಸಿನಿಮಾ ಮಾಡಲಾಗಿದೆ.
ರಾಜ್ ಬಿ ಶೆಟ್ಟಿ ಅವರಿಗೆ ಈ ಸಿನಿಮಾದ ಕಥೆ ತುಂಬಾ ಹೊಸದಾಗಿದೆಯಂತೆ. “ನನಗೆ ಈ ಸಿನಿಮಾದ ಕಥೆ ತುಂಬಾ ಹೊಸದೆನಿಸಿತು. ಮುಖ್ಯವಾಗಿ ನನ್ನ ಪಾತ್ರವೇ ವಿಭಿನ್ನವಾಗಿದೆ. ಅದರ ಜೊತೆಗೆ ನಿರೂಪಣೆ. ನಾವು ಕಂಫರ್ಟ್ ಝೋನ್‌ನಿಂದ ಆಚೆ ಬಂದು ಮಾಡಿರುವ ಸಿನಿಮಾವಿದು. ಇಲ್ಲಿ ಸಿಟ್ಟು, ಕ್ರೋಧ, ಆಕ್ರೋಶ ಎಲ್ಲವೂ ಇದೆ. ಅವೆಲ್ಲದಕ್ಕೂ ಒಂದು ಕಾರಣವಿದೆ. ಅದನ್ನು ಸಿನಿಮಾದಲ್ಲೇ ನೋಡಬೇಕು’ ಎನ್ನುವುದು ರಾಜ್ ಬಿ ಶೆಟ್ಟಿ ಅವರ ಮಾತು. “ನನಗೆ ಗೊತ್ತಿಲ್ಲದ ವಿಚಾರಗಳನ್ನು ಕಲಿತು ಈ ಸಿನಿಮಾದಲ್ಲಿ ಹೇಳಿದ್ದೇನೆ’ ಎನ್ನಲು ರಾಜ್ ಶೆಟ್ಟಿ ಮರೆಯುವುದಿಲ್ಲ.
“ಟೋಬಿ’ ಚಿತ್ರಕ್ಕೆ “ಮಾರಿ ಮಾರಿ ..ಮಾರಿಗೆ ದಾರಿ’ ಎಂಬ ಅಡಿಬರಹವಿದೆ. ರಾಜ್ ಬಿ ಶೆಟ್ಟಿ ಈವರೆಗಿನ ಚಿತ್ರಗಳ ಪೈಕಿ ಟೋಬಿ ಬಿಗ್ ಬಜೆಟ್‌ನ ಚಿತ್ರ. ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲಂಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ರವಿ ರೈ ಕಳಸ ಈ ಚಿತ್ರದ ನಿರ್ಮಾಪಕರು. ಶಾಮಿಲ್ ಬಂಗೇರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ರಾಜ್ ಬಿ ಶೆಟ್ಟಿ ರಚನೆ ಹಾಗೂ ಬಾಸಿಲ್ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ, ಪ್ರವೀಣ್ ಶ್ರೀಯನ್ ಛಾಯಾಗ್ರಹಣ, ಸಂಕಲನ ಹಾಗೂ ಅರ್ಜುನ್ ರಾಜ್ – ರಾಜಶೇಖರ್ ಅವರ ಸಾಹಸ ನಿರ್ದೇಶನ ಟೋಬಿ ಚಿತ್ರಕ್ಕಿದೆ.
ರಾಜ್ .ಬಿ. ಶೆಟ್ಟಿ, ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್ ರಾಜ್ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ “ಟೋಬಿ’ ಚಿತ್ರ ನಿರೀಕ್ಷೆ ಹೆಚ್ಚಿಸಿರುವುದಂತೂ ಸುಳ್ಳಲ್ಲ.