Advertisement
ಉಳಿದಂತೆ ಬಿಎಸ್ಪಿ, ಆರ್‌ಪಿಐ ಮತ್ತಿತರೆ ಪಕ್ಷಗಳ ಅಭ್ಯರ್ಥಿಗಳ ಜೊತೆಗೆ ಒಂದಷ್ಟು ಜನ ಪಕ್ಷೇತರರೂ ಉಪ ಚುನಾವಣೆಯ ಸ್ಪರ್ಧೆಬಯಸಿ ಅರ್ಜಿ ಹಾಕುವ ಸಾಧ್ಯತೆ ಇದೆ. ಚುನಾವಣೆ ಅಧಿಸೂಚನೆ ಹೊರಡಿಸುವುದರೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿ ಮೂರು ದಿನಗಳ ಕಳೆದರೂ ಇದುವರೆಗೂ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ. ಬದಲಿಗೆ ತಮ್ಮ ಬೆಂಬಲಿಗರ ಮೂಲಕ ಚುನಾವಣಾಧಿಕಾರಿಗಳ ಕಚೇರಿಯಿಂದ ಸುಮಾರು 10 ಮಂದಿ ನಾಮಪತ್ರದ ನಮೂನೆಯನ್ನು ತರಿಸಿಕೊಂಡಿದ್ದಾರೆ.
Related Articles
Advertisement
ಮತಬೇಟೆ: ಕಾಂಗ್ರೆಸ್ ಪರ ಸ್ವತಃ ಮುಖ್ಯಮಂತ್ರಿಯೇ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಿ ಉತ್ಸಾಹ ತುಂಬಿ ಹೋಗಿದ್ದರೆ, ಬಿಜೆಪಿ ಪರ ಎರಡು ದಿನಗಳ ಕಾಲ ಪಕ್ಷದ ರಾಜ್ಯಾಧ್ಯಕ್ಷ , ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿ ಗ್ರಾಮಪಂಚಾಯ್ತಿ ಕೇಂದ್ರದ ಹಳ್ಳಿಗಳಿಗೆ ಭೇಟಿ ನೀಡಿ ಕಾರ್ಯಕರ್ತರಲ್ಲಿ ಹುರುಪು ತುಂಬಿ ಹೋಗಿದ್ದಾರೆ. ಮಾಜಿ ಸಚಿವರಾದ ರಾಮದಾಸ್, ವಿ.ಸೋಮಣ್ಣ ಹಳ್ಳಿ ಹಳ್ಳಿ ಸುತ್ತಿ ಮತಬೇಟೆಯಲ್ಲಿ ತೊಡಗಿದ್ದಾರೆ. ನಂಜನಗೂಡು ಪಟ್ಟಣದಲ್ಲಿ ಬಿಜೆಪಿ ಚುನಾವಣಾ ಕಚೇರಿ ತೆರೆದಿದ್ದರೆ, ಕಾಂಗ್ರೆಸ್‌ಗೆ ಸದ್ಯ ಕಳಲೆ ಕೇಶವಮೂರ್ತಿ ಮನೆ ಚುನಾವಣಾ ಕಚೇರಿಯಾಗಿದೆ.
ಇನ್ನೂ ಕಾವೇರಿಲ್ಲ: ಎಲ್ಲರ ಗಮನ ನಂಜನಗೂಡು ಕ್ಷೇತ್ರದ ಮೇಲಿದೆ. ಆದರೆ, ಇಲ್ಲಿ ಇನ್ನೂ ಅಂತಾ ಪ್ರಚಾರ ಶುರುವಾಗಿಲ್ಲ ಎನ್ನುತ್ತಾರೆ ಕ್ಷೇತ್ರ ವ್ಯಾಪ್ತಿಯ ಬದನವಾಳು ಗ್ರಾಪಂ ಅಧ್ಯಕ್ಷ ಬಿ.ಎಂ.ಮಹೇಶ, “ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಕಸಬಾ ಹೋಬಳಿಯ ಬದನವಾಳು, ಚಿನ್ನದಗುಡಿ ಹುಂಡಿ, ವೀರೇಗೌಡನ ಹುಂಡಿ ಹಾಗೂ ಮಹದೇವು ನಗರ ಬಡಾವಣೆ ಒಳಗೊಂಡ ಈ ಪಂಚಾಯ್ತಿ ವ್ಯಾಪ್ತಿಯಲ್ಲಿ ದಲಿತ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಂತರದ ಕುರುಬರು, ದಲಿತರು, ಗಾಣಿಗರು, ಅಲ್ಪ ಸಂಖ್ಯಾತರು ಸೇರಿದಂತೆ ಸಣ್ಣಪುಟ್ಟ ಸಮುದಾಯಗಳ ಸುಮಾರು 5 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ.
ಈ ಚುನಾವಣೆಯಲ್ಲಿ ಇಬ್ಬರೂ ಅಭ್ಯರ್ಥಿಗಳ ಪಕ್ಷ ಬದಲಾಗಿರುವುದರಿಂದ ಸ್ಥಳೀಯವಾಗಿ ಮುಖಂಡರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ನಾಮಪತ್ರ ಸಲ್ಲಿಕೆಯಾದ ಬಳಿಕ ಚುನಾವಣೆ ಕಾವೇರಲಿದೆ ಎನ್ನುತ್ತಾರೆ. ಕಳಲೆ ಪಂಚಾಯ್ತಿ ಸದಸ್ಯ ಕುಮಾರ ಮಾತನಾಡಿ, ಈ ಪಂಚಾಯ್ತಿ ವ್ಯಾಪ್ತಿಯಲ್ಲಿ ನಾಯಕರು, ದಲಿತರು, ಕುರುಬರು ಹಾಗೂ ತೆಲಗುಶೆಟ್ಟಿ ಜನಾಂಗ ಸೇರಿದಂತೆ 7 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಗುರುವಾರ ಕಳಲೆ ಲಕ್ಷ್ಮೀಕಾಂತ ದೇವರ ಜಾತ್ರೆಯಲ್ಲಿ ಸಂಸದ ಧ್ರುವನಾರಾಯಣ ಹಾಗೂ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಭಾಗಿಯಾಗಿದ್ದರು.
ಹೆಡಿಯಾಲ ಪಂಚಾಯ್ತಿ ವ್ಯಾಪ್ತಿಯ 9 ಬೂತ್‌ಗಳಲ್ಲಿ ಮುಸ್ಲಿಮರು, ದಲಿತರು, ಪರಿಶಿಷ್ಟ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎರಡು ದಿನಗಳ ಹಿಂದೆ ಇಲ್ಲಿನ ಕಂತೆ ಮಾದಪ್ಪನ ಬೆಟ್ಟದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸುನೀಲ್ ಬೋಸ್, ಕಳಲೆ ಕೇಶವಮೂರ್ತಿ ಮೊದಲಾದವರು ಪಾಲ್ಗೊಂಡು ವಿಶೇಷಪೂಜೆ ಸಲ್ಲಿಸಿಹೋಗಿದ್ದಾರೆ. ಇನ್ನು ಸ್ಥಳೀಯ ಮುಖಂಡರನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ನಡೆಯುತ್ತಿದ್ದು, ಬಹಿರಂಗ ಪ್ರಚಾರ ಆರಂಭವಾಗಿಲ್ಲ ಎನ್ನುತ್ತಾರೆ ಹೆಡಿಯಾಲ ಪಂಚಾಯ್ತಿ ಸದಸ್ಯ ಗೋವಿಂದರಾಜು.
* ಗಿರೀಶ್ ಹುಣಸೂರು